ಹಳ್ಳಿ ಬದುಕು ಎಷ್ಟು ಚಂದವೆಂದರೆ ಅದರ ಬಗ್ಗೆ ಹೇಳಲು ಪದಗಳೇ ಸಾಲದು, ಹಳ್ಳಿಯಲ್ಲಿ ಬೆಳಗ್ಗೆ ಬೇಗ ಏಳುವುದೇ ಒಂದು ರೂಢಿಯಾಗಿರುತ್ತದೆ. ಕೋಳಿಯ ಒಂದು ಕೂಗು ಹಳ್ಳಿಯವರಿಗೆ ನಿತ್ಯದ ಅಲರಾಂ ಇದ್ದ ಹಾಗೆ.
ಹಳ್ಳಿಯಲ್ಲಿ ಎಲ್ಲ ಸಮಯಕ್ಕೆ ಸರಿಯಾಗಿ ಕೆಲಸ ಕಾರ್ಯವಾಗುವುದು ದಿನನಿತ್ಯದ ಕೆಲಸಕ್ಕಿಂತ ಹೆಚ್ಚಿನ ಕೆಲಸವೇ ಇರುವುದು, ಆ ಹಚ್ಚ ಹಸುರ ಗಿಡ, ಮರ, ಗದ್ದೆ, ತೋಟಗಳ ನಡುವೆ ಮನೆ ತಂಪಾದ ವಾತಾವರಣ ಅದರ ಒಂದು ಖುಷಿಯೇ ಬೇರೆ.
ದಿನನಿತ್ಯ ಕೆಲಸಗಳನ್ನು ಮಾಡಿ, ಸಂಜೆಯಾಗುತ್ತಲೇ ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಕಾಡು ಹರಟೆ ಮಾಡುತ್ತಿದ್ದೆವು. ಮನೆಯೆಂಬ ರಂಗಮಂದಿರ ದಲ್ಲಿ ಮನೋರಂಜನೆಗೆ ನಾವೇ ಪಾತ್ರಧಾರಿಗಳು ಬಳಿಕ ನಾವೇ ಪ್ರೇಕ್ಷಕರು ಆಗುತ್ತಿದ್ದೆವು. ಅಜ್ಜಿ ಹೇಳುವ ಕಥೆ ಕೇಳುವುದು ಅದಕ್ಕೆ ನಾವು ತಲೆಯನ್ನು ಆಡಿಸುವುದು ಅವರು ಹೇಳಿದ ಕಥೆ ಕೇಳಿ, ಕೇಳಿ ಅಲ್ಲಿಗೆ ನಿದ್ದೆ ಬರುತಿತ್ತು. ಆ ಕಥೆ ಪೂರ್ಣವಾಗುವ ಮುನ್ನ ನಾವು ನಿದ್ದೆಗೆ ಜಾರಿ ಬಿಡುತ್ತೇವೆ. ಬಳಿಕ ಮಾರನೇ ದಿನ ಮಗದೊಂದು ಕಥೆ. ಈ ಹಿರಿ ಜೀವಗಳು ಅದೆಷ್ಟೊ ಎಳೆ ಮನಸ್ಸಿನ ಕಲ್ಪನಾ ಲೋಕದ ಕಣ್ಣು ತೆರೆಸಿದ್ದಾರೆ ಎನ್ನಬಹುದು.
ಹಳ್ಳಿಯಲ್ಲಿ ಹಬ್ಬ ಅಂದರೆ ಸಾಕು ಖುಷಿ. ಅಕ್ಕ, ಪಕ್ಕದ ಮನೆಯವರು ಒಟ್ಟಿಗೆ ಸೇರಿ ಹಬ್ಬವನ್ನು ಆಚರಣೆ ಮಾಡುವ ಸಂತಸವೇ ಬೇರೆ ಅದರಲ್ಲಿ ಸ್ವಲ್ಪ ದುಃಖ, ನೋವು,ಯಾವ ಮನೆಯಲ್ಲಿಯೂ ಯಾವ ಸಂಭ್ರಮದಲ್ಲಿ ಇರುವುದು ಸಹಜ ಅದಕ್ಕೆ ಹೊಂದಿಕೊಂಡು ಹೋಗುವುದು ಅದು ನಮ್ಮ ಗುಣ. ನಮಗೆ ಬೇಸಗೆ ರಜೆ ಸಿಕ್ಕರೆ ಸಾಕು ಎಲ್ಲರೂ ಅಜ್ಜಿ ಮನೆಗೆ ಓಡಿ ಬರುತ್ತಿದ್ದರು.
ಅಕ್ಕ-ಪಕ್ಕ ಮನೆಯವರು ಸೇರಿ ಮನೆಯ ಹಿಂದೆ ಒಂದು ಮನೆಯನ್ನು ನೋಡಲು ಸಿಗುತ್ತಿತ್ತು ಆ ಮನೆಯನ್ನು ನೋಡುವುದೇ ಸಂಭ್ರಮವಾಗಿತ್ತು. ಹಳ್ಳಿಯಲ್ಲಿ ಮನೆಯಾಟದ ಗೌಜು ಮತ್ತು ಚೆಂದ. ಈ ಪುಟ್ಟ ಮನೆಯಲ್ಲಿ ಮಕ್ಕಳದೇ ಅಡುಗೆ. ಯಾವುದೂ ಕಸ, ಕಡ್ಡಿ, ಮಣ್ಣು ಎಲ್ಲದರ ಒಟ್ಟಿಗೆ ಮಾಡುವ ಅಡುಗೆ ತಿನ್ನಲು ರುಚಿ ಇಲ್ಲದೆ ಹೋದರೂ ಖುಷಿಯ ಸಡಗರ ತುಂಬಿ ಇರುತ್ತಿತ್ತು, ಆ ಮನೆಯಲ್ಲಿ ಮಕ್ಕಳದೇ ಪುಟ್ಟ ಪ್ರಪಂಚ. ಆ ಮನೆಯಲ್ಲಿ ನಾವೇ ದೊಡ್ಡವರು. ಅವರಿಗೆ ದೊಡ್ಡವರು ಆದ ಮೇಲೆ ಹಾಗೆ ಆಗಬೇಕು, ಹೀಗೆ ಇರಬೇಕು ಎಂಬ ಕನಸು ಅವರದ್ದು ಆಗಿರುತ್ತೆ.
ಆದರೇ ಅವರು ಅದನ್ನು ನನಸು ಮಾಡದೇ ಇದ್ದರೂ ಈ ಚಿಕ್ಕವಯಸ್ಸಿನಲ್ಲಿಯೇ ಅ ಕನಸಿನ ಕಲ್ಪನೆಯನ್ನು ಪೂರೈಸಿಕೊಳುತ್ತಾರೆ. ಚಿಕ್ಕವಯಸ್ಸಿನಲ್ಲಿ ನಮಗೆ ಯಾವುದೇ ನೋವು, ದುಃಖ ಎಂಬ ಕಲ್ಪನೆಯೇ ಇರುವುದಿಲ್ಲ ಹಳ್ಳಿಯಲ್ಲಿ ನಮ್ಮ ಬಾಲ್ಯದ ಪುಟ್ಟ ಪ್ರಪಂಚ ಮರೆಯಾಗಿದೆ ಅದನ್ನು ಇನ್ನು ಕನಸಿನ ಲೋಕದಲ್ಲಿಯೇ ಕಾಣಬೇಕು.
–
ಶ್ವೇತಾ
ಎಂ.ಪಿ.ಎಂ. ಸರಕಾರಿ ಕಾಲೇಜು, ಕಾರ್ಕಳ