Advertisement

ಕೋವಿಡ್ ಮಣಿಸಲು ಒಟ್ಟಾದ ಪುಟ್ಟ ದೇಶಗಳು

02:50 PM May 08, 2020 | mahesh |

ಕೋವಿಡ್ ಸೋಂಕು ಕಡಿಮೆ ಇರುವ ರಾಷ್ಟ್ರಗಳ ಸಾಲಿನಲ್ಲಿ ಆಸ್ಟ್ರಿಯಾವು ಗುರುತಿಸಿಕೊಂಡಿದೆ. ಈ ತನಕ ರಾಷ್ಟ್ರದಲ್ಲಿ 15,752 ಕೊರೊನಾ ಸೋಂಕು ಪತ್ತೆಯಾಗಿದ್ದು, 13,698 ಮಂದಿ ಗುಣಮುಖರಾಗಿದ್ದಾರೆ. 609 ಮಂದಿ ಕೊರೊನಾ ವೈರಸ್‌ಗೆ ಪ್ರಾಣ ತೆತ್ತಿದ್ದಾರೆ.

Advertisement

ಮಣಿಪಾಲ: ಕೋವಿಡ್ ವೈರಸ್‌ ಸಾಂಕ್ರಾಮಿಕದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಹಲವು ದೇಶಗಳು ತಮ್ಮ ವಿಚಾರ ವಿನಿಮಯ ಮಾಡಿಕೊಳ್ಳುತ್ತಿವೆ. ಇದೀಗ ಸಣ್ಣಪುಟ್ಟ ರಾಷ್ಟ್ರಗಳು ಇತರ ರಾಷ್ಟ್ರಗಳ ನೆರವಿನ ಜತೆಗೆ ಸಲಹೆಗಳನ್ನು ಪಡೆದುಕೊಳ್ಳುತ್ತಿವೆ. ಸಣ್ಣ ಸ್ಮಾರ್ಟ್‌ ದೇಶಗಳ ಹಲವು ನಾಯಕರು ತಮ್ಮದೇ ಒಂದು ತಂಡ ರಚಿಸಿಕೊಂಡಿದ್ದು, ಅವರು ಪರಸ್ಪರ ನೆರವಾಗುತ್ತಿದ್ದಾರೆ. ಸಣ್ಣಪುಟ್ಟ ರಾಷ್ಟ್ರಗಳ ನಾಯಕರ ಜತೆ ಆಸ್ಟ್ರಿಯಾದ ಚಾನ್ಸೆಲರ್‌ ಸೆಬಾಸ್ಟಿಯನ್‌ ಕುರ್ಜ್‌ ವಿಡಿಯೋ ಕಾನ್ಫರೆನ್ಸ್‌ ನಡೆಸಿದ್ದಾರೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಇಸ್ರೇಲ್‌, ಡೆನ್ಮಾರ್ಕ್‌, ಜೆಕ್‌ ರಿಪಬ್ಲಿಕ್‌ ಮತ್ತು ಗ್ರೀಸ್‌ ಮೊದಲಾದ ರಾಷ್ಟ್ರಗಳ ನಾಯಕರೂ ಇದರಲ್ಲಿ ಭಾಗವಹಿಸಿರುವುದು ವಿಶೇಷ.

ದೊಡ್ಡ ದೇಶಗಳ ಭವಿಷ್ಯದ ಕ್ರಮಗಳು ಮತ್ತು ಸಣ್ಣ ಪುಟ್ಟ ದೇಶಗಳ ಕ್ರಮಗಳು ಭಿನ್ನವಾಗಿರುತ್ತವೆ. ಕೋವಿಡ್ ಸಂಕಷ್ಟ ಮತ್ತು ಬಳಿಕದ ಪರಿಣಾಮಗಳನ್ನು ಮತ್ತೆ ಹೇಗೆ ಎದುರಿಸಬೇಕು ಎಂಬುದರ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಈ ಬಿಕ್ಕಟ್ಟನ್ನು ಜಗತ್ತಿನ ಮಹಾ ಶಕ್ತಿಶಾಲಿ ರಾಷ್ಟ್ರಗಳ ಸಹಾಯವಿಲ್ಲದೇ ಎದುರಿಸುವುದು ಹೇಗೆ ಎಂಬುದನ್ನೂ ಚರ್ಚಿಸಲಾಗಿದೆ. ಜಾಗತಿಕ ಮಹಾಶಕ್ತಿಗಳ ಮೇಲಿನ ಅವಲಂಬನೆ ತಪ್ಪಿಸುವುದು ಈ ಪುಟ್ಟ ರಾಷ್ಟ್ರಗಳ ಉದ್ದೇಶ. ಒಂದುವೇಳೆ ಇದು ಸಾಧ್ಯವಾದರೆ, ದೊಡ್ಡ ರಾಷ್ಟ್ರಗಳಿಗೂ ಸಣ್ಣ ರಾಷ್ಟ್ರಗಳ ಮಹತ್ವವನ್ನು ತಿಳಿಸಲೂ ಸಾಧ್ಯವಾಗುತ್ತದೆಂಬ ದೂರ ಉದ್ದೇಶವೂ ಇದೆ. ವಿಶೇಷ ಎಂದರೆ ಸಿಂಗಾಪುರವೂ ಈ ಗುಂಪಿನ ಭಾಗವಾಗಿದ್ದು, ತಾಂತ್ರಿಕ ತೊಂದರೆಗಳಿಂದಾಗಿ ಅಲ್ಲಿನ ಪ್ರಧಾನ ಮಂತ್ರಿಗಳಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.

ಮಾರ್ಚ್‌ ಮಧ್ಯದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಮೂರು ವಾರಗಳ ಬಳಿಕ ಆಸ್ಟ್ರೀಯಾ ಲಾಕ್‌ಡೌನ್‌ ಹೇರಿತ್ತು. ಇದೀಗ ಆಸ್ಟ್ರಿಯಾ ಕಳೆದ ಎರಡು ವಾರಗಳಿಂದ ಕ್ರಮೇಣ ನಿರ್ಬಂಧಗಳನ್ನು ಸಡಿಲಿಸುತ್ತಿದೆ. ಈ ನಿಟ್ಟಿನಲ್ಲಿ ಮೇ 4ರಿಂದ ಶಾಲಾ ಕಾಲೇಜುಗಳನ್ನು ಮತ್ತೆ ಆರಂಭಿಸಲಾಗಿದೆ. ಆದರೆ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಮತ್ತೆ ಹೆಚ್ಚಾಗಲು ಪ್ರಾರಂಭಿಸಿದರೆ ಲಾಕ್‌ಡೌನ್‌ ಅನ್ನು ಮತ್ತೆ ಜಾರಿಗೊಳಿಸಬೇಕಾದೀತು ಎಂದು ಸರಕಾರ ಎಚ್ಚರಿಸಿದೆ. ಆದರೆ ಆಸ್ಟ್ರೀಯಾ ಬಹುದೊಡ್ಡ ಅಘಾತದಿಂದ ಸದ್ಯಕ್ಕೆ ಪಾರಾಗಿದೆ.

ಕೋವಿಡ್ ಯಾವುದ್ಯಾವುದೋ ಔಷಧ ಸೇವಿಸಬೇಡಿ
ಲಂಡನ್‌: ಬ್ರಿಟನ್‌ನ ಔಷಧ ಮತ್ತು ಆರೋಗ್ಯ ಉತ್ಪನ್ನ ನಿಯಂತ್ರಣ ಪ್ರಾಧಿಕಾರವು ಆನ್ಲ„ನ್‌ನಲ್ಲಿ ಕೋವಿಡ್ ವನ್ನು ದೂರವಿಡುವ ಔಷಧಗಳೆಂದು ಮಾರಲಾಗುತ್ತಿದ್ದು, ಇದಕ್ಕೆ ಮೋಸ ಹೋಗದಂತೆ ಜನರನ್ನು ಎಚ್ಚರಿಸಿದೆ. ಅಚ್ಚರಿಕರ ರೀತಿಯಲ್ಲಿ ವಾಸಿ, ವೈರಸ್‌ ವಿರೋಧಿ ಔಷಧ-ಇತ್ಯಾದಿ ಶೀರ್ಷಿಕೆಯಡಿ ಆನ್‌ ಲೈನ್‌ನಲ್ಲಿ ಕೊರೊನಾವನ್ನು ತಡೆಗಟ್ಟುವಂಥ ಔಷಧಗಳೆಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ಇವುಗಳನ್ನು ಬಳಸಿ ಪ್ರಾಣಕ್ಕೆ ಅಪಾಯ ತಂದುಕೊಳ್ಳಬೇಡಿ ಎಂದು ಪ್ರಾಧಿಕಾರ ಕಿವಿ ಮಾತು ಹೇಳಿದೆ. ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಆನ್‌ಲೈನ್‌ ಮಾರುಕಟ್ಟೆಯ ವೆಬ್‌ಸೈಟ್‌ಗಳಲ್ಲಿ ಇವುಗಳನ್ನು ಮಾರುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಪ್ರಾಧಿಕಾರ ಚಿಂತನೆ ನಡೆಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next