ಮೈಸೂರು: ಕಳೆದ ಕೆಲ ದಿನಗಳಿಂದ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದ ಸಂಸದ ಪ್ರತಾಪ್ ಸಿಂಹ ಅವರು ಮಂಗಳವಾರ ಕಳೆದ ಮೂರುವರೆ ವರ್ಷಗಳಲ್ಲಿ ಮೈಸೂರು-ಕೊಡಗು ಕ್ಷೇತ್ರದ ಲೋಕಸಭಾ ಸದಸ್ಯನಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದಾಗಿ ಹೇಳಿಕೊಳ್ಳುವ ಮೂಲಕ ವಿವಾದಗಳಿಂದ ಹೊರಬರುವ ಪ್ರಯತ್ನ ಮಾಡಿದ್ದಾರೆ.
ಬೆಂಗಳೂರು-ಮೈಸೂರು ನಡುವಿನ ಹೆದ್ದಾರಿಯನ್ನು ಎಂಟು ಪಥಕ್ಕೆ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ 6500 ಕೋಟಿ ರೂ. ಕೊಡುತ್ತಿದೆ. ಮೈಸೂರು- ಮಡಿಕೇರಿ ನಡುವಿನ ಹೆದ್ದಾರಿಯನ್ನು ನಾಲ್ಕು ಪಥಕ್ಕೆ ಮೇಲ್ದರ್ಜೆಗೇರಿಸಲಾಗುತ್ತಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಮೈಸೂರು-ಬೆಂಗಳೂರು ನಡುವಿನ ಜೋಡಿ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡಿದ್ದು, ಶ್ರೀರಂಗ ಪಟ್ಟಣದಲ್ಲಿದ್ದ ಟಿಪ್ಪು ಶಸ್ತ್ರಾಗಾರದ ಸ್ಥಳಾಂತರಕ್ಕೆ 13 ಕೋಟಿ ರೂ. ವೆಚ್ಚ ಮಾಡಲಾಯಿತು.
ಮೈಸೂರು-ಬೆಂಗಳೂರು ನಡುವಿನ ಮಾರ್ಗದಲ್ಲಿ ವಿದ್ಯುದ್ದೀಕರಣವು ಪೂರ್ಣಗೊಂಡಿದೆ. ಇದರಿಂದ ಇನ್ನು ಮೈಸೂರಿನಿಂದ ಡಿಸೇಲ್ ಚಾಲಿತ ಲೋಕೊಮೋಟಿವ್ ಇಂಜಿನ್ ಬದಲಿಗೆ ವಿದ್ಯುತ್ ಚಾಲಿತ ಇಂಜಿನ್‌ನ ರೈಲು ಗಾಡಿಗಳು ಮೈಸೂರಿನಿಂದ ಸಂಚರಿಸಲಿವೆ. ಇದರಿಂದ ಮಾಲಿನ್ಯವೂ ತಪ್ಪಲಿದೆ ಎಂದು ತಮ್ಮ ಫೇಸ್‌ಬುಕ್ ಲೈವ್‌ನಲ್ಲಿ ಹೇಳಿಕೊಂಡಿದ್ದಾರೆ.
ಪಾಸ್ ಪೋರ್ಟ್ ಕೇಂದ್ರ: ಮೈಸೂರು ಸುತ್ತಲಿನ ವರ್ತುಲ ರಸ್ತೆಯನ್ನು ಪೂರ್ಣಗೊಳಿಸಿ ಕೇಂದ್ರದ ಸುಪರ್ದಿಗೆ ತೆಗೆಕೊಂಡು ಆರು ಸಾವಿರ ಸಸಿಗಳನ್ನು ನೆಡಸಲಾಗಿದೆ. ಇದಕ್ಕಾಗಿ 172 ಕೋಟಿ ಮಂಜೂರಾಗಿದ್ದು, ಮೊದಲ ಹಂತದಲ್ಲಿ 45 ಕೋಟಿ ರೂ. ಬಿಡುಗಡೆಯಾಗುತ್ತಿದೆ. ಮೈಸೂರಿನ ಮೇಟಗಳ್ಳಿಯ ಅಂಚೆ ಕಚೇರಿಯಲ್ಲಿ ಆರಂಭಿಸಲಾಗಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರ ಅದ್ಭುತವಾಗಿ ನಡೆಯುತ್ತಿದ್ದು, ಈವರೆಗೆ 15ಸಾವಿರ ಜನರು ಪಾಸ್ ಪೋರ್ಟ್ ಪಡೆದುಕೊಂಡಿದ್ದಾರೆ.
ಮೈಸೂರಿನ ಲಿಂಗಾಂಬುಧಿ ಕೆರೆ ಸುತ್ತಲಿನ ಪ್ರದೇಶದಲ್ಲಿ ಕೇಂದ್ರ ಸರ್ಕಾರದ 85 ಲಕ್ಷ ರೂ. ಅನುದಾನದಲ್ಲಿ ಸುಂದರವಾದ ಉದ್ಯಾನವನ ನಿರ್ಮಿಸಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಕೇಂದ್ರ ಸರ್ಕಾರಿ ಸ್ವಾಮ್ಯದ ಜರ್ಮನ್ ಪ್ರಸ್ ಆವರಣದ ಜಾಗ ಕೊಡಿಸಲಾಗಿದೆ.
ವಿಧಾನಸಭಾ ಕ್ಷೇತ್ರಕ್ಕೆ ಸಾವಿರ ಮನೆ: ತಂಬಾಕು ಮಂಡಳಿಯಲ್ಲಿ ಲೈಸನ್ಸ್ ನವೀಕರಣಕ್ಕೆ ನಡೆಯುತ್ತಿದ್ದ ಲಂಚದ ಹಾವಳಿಯನ್ನು ತಪ್ಪಿಸಿ, ಬೆಳೆಗಾರರಿಗೆ ಸಕಾಲದಲ್ಲಿ ರಸಗೊಬ್ಬರಗಳನ್ನು ಕೊಡಿಸಿದ್ದೇನೆ. ಟೆಕ್ಸ್‌ಟೈಲ್ ಮೆಗಾ ಕ್ಲಸ್ಟರ್ ಮಂಜೂರು ಮಾಡಿಸಿದ್ದೇನೆ. ಜತೆಗೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ತಲಾ ಒಂದು ಸಾವಿರಕ್ಕೂ ಹೆಚ್ಚು ಮನೆಗಳನ್ನು ಕಟ್ಟಿಸಲಾಗುತ್ತಿದೆ ಎಂದು ಹೇಳಿದ್ದಾರೆ.