ಬೀದರ: ಇಷ್ಟಲಿಂಗವು ಜಾತಿಯ ಕುರುಹಲ್ಲ. ಜ್ಯೋತಿಯ ಕುರುಹು. ನಿರ್ಗುಣ ನಿರಾಕಾರ ಪರಮಾತ್ಮನ ಸಾಕಾರ ಕುರುಹು ಎಂದು ಲಿಂಗಾಯತ ಮಠದ ಅಕ್ಕ ಅನ್ನಪೂರ್ಣ ಹೇಳಿದರು. ನಗರದ ಶರಣ ಉದ್ಯಾನದಲ್ಲಿ ಮಹಾಶಿವರಾತ್ರಿ ನಿಮಿತ್ತ ನಡೆದ ಸಾಮೂಹಿಕ ಇಷ್ಟಲಿಂಗ ಯೋಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನೆನಪಿನ ಶಕ್ತಿ ಹೆಚ್ಚಿಸುವ, ಆರೋಗ್ಯ ವೃದ್ಧಿಸುವ ಮತ್ತು ಮಾನಸಿಕ ಒತ್ತಡ ನಿವಾರಿಸಿ ನೆಮ್ಮದಿ ನೀಡುವ ಸಾಮರ್ಥ್ಯ ಇಷ್ಟಲಿಂಗ ಯೋಗದಲ್ಲಿದೆ. ಉತ್ಸಾಹ, ನೆಮ್ಮದಿಯ ಜೀವನಕ್ಕೆ ಪ್ರತಿಯೊಬ್ಬರು ಇಷ್ಟಲಿಂಗ ಯೋಗವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.
ಗಡಿಯಾರ ಯಾವ ಧರ್ಮದವರು ಕಂಡು ಹಿಡಿದರು ಎಂಬುದು ಮುಖ್ಯವಲ್ಲ. ಸಮಯ ತಿಳಿಯಬೇಕೆನ್ನುವವರು ಗಡಿಯಾರ ಧರಿಸಬೇಕು. ಹಾಗೆಯೇ ಆತ್ಮೋದ್ಧಾರ ಬಯಸುವವರು ಯಾವ ಜಾತಿ-ಧರ್ಮದವರೆ ಆಗಿರಲಿ ಇಷ್ಟಲಿಂಗ ಯೋಗದ ಮೊರೆ ಹೊಗಬೇಕು ಎಂದರು.
ಇಷ್ಟಲಿಂಗ ಧರಿಸಿಕೊಂಡು ದೇಹವನ್ನೇ ದೇವಾಲಯ ಮಾಡಿಕೊಳ್ಳುವ ವಿಜ್ಞಾನ ಪೂಜೆಯಲ್ಲಿ ಅಡಗಿದೆ. ಅಂತರಂಗ ವಿಕಾಸಕ್ಕೆ ವೈಜ್ಞಾನಿಕವಾಗಿ ಪೂರಕವಾಗಿರುವ ಇಷ್ಟಲಿಂಗ ಬಸವಣ್ಣನವರ ವಿಶಿಷ್ಟ ಕೊಡುಗೆಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಿತು. ಡಾ| ಗಂಗಾಂಬಿಕೆ ಹಾಗೂ ರಮೇಶ ಮಠಪತಿ ಪ್ರಾಣಲಿಂಗ ಪೂಜಾವಿಧಿ ತಿಳಿಸಿದರು. ಶಿವರಾಜ ಮದಕಟ್ಟಿ ಧ್ವಜಾರೋಹಣ ನೇರವರಿಸಿದರು. ಸಿದ್ರಾಮಪ್ಪ ಕಪಲಾಪುರೆ, ಚಂದ್ರಶೇಖರ ಹೆಬ್ಟಾಳೆ, ಸಿ.ಎಸ್.ಪಾಟೀಲ, ರಾಚಪ್ಪ ಪಾಟೀಲ, ಅಣವೀರ ಕೊಡಂಬಲ್, ರಾಜಕುಮಾರ ಪಾಟೀಲ, ವಿವೇಕಾನಂದ ಧನ್ನುರ, ಮಲ್ಲಿಕಾರ್ಜುನ ಔರಾದೆ, ವಿಶ್ವನಾಥ ಕಾಜಿ, ಬಸವರಾಜ ಶೇರಿಕಾರ, ಶೋಭಾ ಚಾಂಗಲೇರಾ, ಶಾಂತಾ ಖಂಡ್ರೆ, ಈಶ್ವರಿ ವಡ್ಡೆ, ಶಿವಕುಮಾರ ಪಾಂಚಾಳ, ಮಾಣಿಕಪ್ಪ ಗೋರನಾಳೆ ಹಾಗೂ ಅನೇಕರು ಇದ್ದರು.