Advertisement

ಯಕ್ಷ ಕಲಾವಿದರ ಬದುಕು ಅಭದ್ರ

11:42 AM Jan 05, 2019 | |

ಹೊನ್ನಾವರ: ಗುಣವಂತೆ ಸಮೀಪ ಬುಧವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವ ಯಕ್ಷಗಾನ ಕಲಾವಿದರು ಸಾವನ್ನಪ್ಪಿದ್ದಾರೆ. ರಾತ್ರಿಯಿಡೀ ರಂಜಿಸುತ್ತಾ ಹಗಲು ನಿದ್ರಿಸುತ್ತಾ, ಸಿಕ್ಕ ಸಂಬಳದಲ್ಲಿ ತೃಪ್ತಿಪಡುತ್ತ ಆಯುಷ್ಯ ಸವೆಸುವ ಇಂತಹ ಕಲಾವಿದರನ್ನು ಅವಲಂಬಿಸಿದವರ ಬದುಕಿಗಾಗಿ ಯಾವ ಭದ್ರತೆಯೂ ಇಲ್ಲ. ಯಕ್ಷಗಾನ ಮೇಳದ ಮಾಲಕರು, ಅಭಿಮಾನಿ ಸಂಘಟನೆಗಳು ಈ ಕುರಿತು ಆಲೋಚಿಸಬೇಕಾಗಿದೆ.

Advertisement

ಕುಂದಾಪುರದ ದಿನೇಶ ಮಡಿವಾಳ ಮತ್ತು ಹೊನ್ನಾವರ ಮಾವಿನಕುರ್ವೆಯ ಪ್ರಸನ್ನ ಆಚಾರ್ಯ ಮೊನ್ನೆ ಬೈಕ್‌ನಲ್ಲಿ ಮುರ್ಡೇಶ್ವರ ಆಟಕ್ಕೆ ಹೊರಟವರು ಕೆರೆಮನೆ ಬಳಿ ಅಪಘಾತದಿಂದ ಮೃತಪಟ್ಟಿದ್ದಾರೆ.

ದಿನೇಶ ಮಡಿವಾಳ ಸ್ತ್ರೀಪಾತ್ರ ಮತ್ತು ಪ್ರಸನ್ನ ಪುರುಷ ಪಾತ್ರದ ಜೋಡಿ ವೇಷಧಾರಿಗಳು. ಯಕ್ಷಗಾನಕ್ಕೆ ಮಾರುಹೋದ ಪ್ರಸನ್ನ ಜಲವಳ್ಳಿ ವಿದ್ಯಾಧರ ಪ್ರಭಾವದಲ್ಲಿ ಜೂನಿಯರ್‌ ವಿದ್ಯಾಧರ ಆಗಿ ಮಿಂಚುತ್ತಿದ್ದರು. ಸೌಕೂರ ಮೇಳದ ಕಲಾವಿದರಾಗಿದ್ದ ಇವರು ಸದಾ ಒಟ್ಟಾಗಿ ಇರುತ್ತಿದ್ದರು. ಪ್ರಸನ್ನ ತಮ್ಮ ಮನೆಗೆ ದಿನೇಶನನ್ನು ಕರೆದುಕೊಂಡು ಬಂದಿದ್ದರು. ಒಟ್ಟಾಗಿ ಹೊರಟು ಹೋಗಿದ್ದಾರೆ.

ಈ ಹಿನ್ನೆಲೆಯಲ್ಲಿ ಅಪಘಾತದಿಂದ ತೊಂದರೆಗೊಳಗಾದ, ಸಾವನ್ನಪ್ಪಿದ, ಇತರ ಕಾರಣಗಳಿಂದ ಅರ್ಧ ಆಯುಷ್ಯದಲ್ಲಿ ರಂಗದಿಂದ ಮರೆಯಾದ ಕಲಾವಿದರ ಸಂಖ್ಯೆ ಕಡಿಮೆ ಏನಿಲ್ಲ. ರಾತ್ರಿಯಿಡೀ ನಿದ್ದೆಗೆಟ್ಟು ರಾಜ, ರಾಣಿ, ಮಹಾರಾಜನಾಗಿ ಮೆರೆಯುವ ಕಲಾವಿದರು ಸಂಜೆಯಾಗುತ್ತಲೇ ಒಂದಿಷ್ಟು ವಿಶ್ರಾಂತಿ ಪಡೆದು ವೇಷದ ಸಮಯಕ್ಕೆ ತಲುಪುವುದು, ಬೇಗ ವೇಷ ಮುಗಿದರೆ ಬೆಳಗಿನಜಾವ ಮನೆಹಾದಿ ಹಿಡಿಯುವುದು ಹೊಸದೇನಲ್ಲ. ಮಧ್ಯರಾತ್ರಿಯವರೆಗೆ ಒಂದು ಮೇಳದಲ್ಲಿ ಆಟಮಾಡಿ 50-100ಕಿಮೀ ದೂರದ ಇನ್ನೊಂದು ಮೇಳಕ್ಕೆ ಹೋಗಿ ವೇಷ ಮಾಡುವವರಿದ್ದಾರೆ. ವೃತ್ತಿಯಲ್ಲಿ ಇಂತಹ ಅಪಾಯಗಳು ಅನಿವಾರ್ಯ.

ಯಕ್ಷಗಾನ ಭಾಗವತಿಕೆಗೆ ಹೊಸ ಶೈಲಿಕೊಟ್ಟ ಕಾಳಿಂಗನಾವುಡರು ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಕಡತೋಕಾ ಮಂಜುನಾಥ ಭಾಗವತರು ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ನರಳಿದರು. ಪಿವಿ ಹಾಸ್ಯಗಾರ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಕಣ್ಣಿಮನೆ ಅಕಾಲದಲ್ಲಿ ಸಾವು ತಂದುಕೊಂಡರು. ಶಂಭು ಹೆಗಡೆ ಯಕ್ಷಗಾನ ಪರಂಪರೆ ಉಳಿಸಲು ನಿತ್ಯ ಸವಾಲು ಸ್ವೀಕರಿಸುತ್ತಾ ಒತ್ತಡದಲ್ಲಿ ರಂಗದಿಂದಲೇ ನಿರ್ಗಮಿಸಿದರು. ಕಪ್ಪೆಕೆರೆ ಧ್ವನಿ ಪೆಟ್ಟಿಗೆಗೆ ತೊಂದರೆ ಮಾಡಿಕೊಂಡರು.

Advertisement

ವರ್ಷಕ್ಕೆ 100-200 ಆಟ. ಆರೋಗ್ಯವನ್ನು ಕಾಪಾಡಿಕೊಂಡು ಈ ಕ್ಷೇತ್ರದಲ್ಲಿ ಬಹುಕಾಲ ಕೆಲಸ ಮಾಡುವುದು ಕಷ್ಟಸಾಧ್ಯ. ಹಿರಿಯ ತಲೆಮಾರಿನ ಕೆಲವೇ ಕಲಾವಿದರು ಉಳಿದುಕೊಂಡಿದ್ದು ಹೆಚ್ಚಿನವರು ಬೇಗ ಹೊರಟು ಹೋಗಿದ್ದಾರೆ. 26 ವೃತ್ತಿ ಮೇಳಗಳು ದಕ್ಷಿಣೋತ್ತರಕನ್ನಡ ಜಿಲ್ಲೆಯಲ್ಲಿವೆ. ಇದರ ಹೊರತಾಗಿ ಸಮಯ ಮಿತಿಯಲ್ಲಿ, ವಾರಕ್ಕೊಂದೆರಡು ಬಾರಿ ಆಟ ಆಡುವ 25ಕ್ಕೂ ಹೆಚ್ಚು ತಂಡಗಳಿವೆ. ಒಟ್ಟಾರೆ 50ಮೇಳಗಳಲ್ಲಿ ಸಾವಿರಕ್ಕೂ ಹೆಚ್ಚು ಕಲಾವಿದರಿದ್ದಾರೆ. ಯಕ್ಷಗಾನ ಕಲಾವಿದನೆಂದು ಅಧಿಕೃತವಾಗಿ ನೋಂದಣಿ ಮಾಡಿಕೊಂಡವರಿಗೆ ಅವರ ಸಂಬಳದ ಕೆಲವು ಭಾಗ ಜೀವವಿಮೆಗೆ ಹೋಗುವಂತಾಗಬೇಕು. ಕಲಾವಿದರೇ ಒಟ್ಟಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಮೇಳ ನಡೆಸುವ ದೇವಾಲಯಗಳಿಗೆ ಮತ್ತು ಮೇಳದ ಯಜಮಾನರಿಗೆ ಸಹಕಾರ ನಿಡಬೇಕು. ವರ್ಷಕ್ಕೆ ಒಂದೆರಡು ಸಾವಿರ ರೂಪಾಯಿಗಳಿಗೆ 15-20ಲಕ್ಷ ರೂ. ವಿಮಾ ಮಾಡಿಸಬಹುದಾದ ಯೋಜನೆಗಳಿವೆ. ಯಕ್ಷಗಾನ ಮೇಳಗಳನ್ನು ನಡೆಸುವ ಮುಖಾಂತರ ಕಲೆ ಉಳಿಸಲು ದೊಡ್ಡ ಕೊಡುಗೆ ನೀಡುತ್ತಿರುವ ದೇವಾಲಯಗಳು ಉದಾರ ಮನಸ್ಸಿನಿಂದ ಇಂತಹ ಯೋಜನೆ ಜಾರಿಗೆ ತಂದರೆ ಕಲೆ ಉಳಿಯುತ್ತದೆ, ಕಲಾವಿದನೂ ಉಳಿದುಕೊಳ್ಳುತ್ತಾನೆ.

ಈಗ ಕಲಾವಿದರು ಕಷ್ಟದಲ್ಲಿರುವಾಗ ಸಹಾಯಾರ್ಥ ಪ್ರದರ್ಶನಗಳನ್ನು ಮಾಡಿಸಿಕೊಳ್ಳುವುದು, ಕಲಾವಿದ ಆಕಸ್ಮಾತ್‌ ಮೃತಪಟ್ಟ ಮೇಲೆ ಅಭಿಮಾನಿಗಳು ಹಣಕೂಡಿಸಿ ಉದಾರತೆ ತೋರುವುದು ನಡೆದಿದೆ. ಇಂತಹ ಪ್ರಯೋಜನ ಕೆಲವೇ ಕಲಾವಿದರಿಗೆ ಸಿಗುತ್ತದೆ. ದಕ್ಷಿಣ ಕನ್ನಡದ ಕಲಾಭಿಮಾನಿ ಸಂಘಟನೆಗಳು ಇನ್ನೂ ಉದಾರವಾಗಿ ಕಲಾವಿದರಿಗೆ ಮನೆ ಕಟ್ಟಿಸಿಕೊಡುವ, ಧನಸಹಾಯ ಮಾಡುವ ಕೆಲಸ ಮಾಡುತ್ತದೆ. ಉತ್ತರ ಕನ್ನಡದಲ್ಲಿ ಅಷ್ಟೊಂದು ಉದಾರಿಗಳಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ವಿಮಾ ಯೋಜನೆ ಹೆಚ್ಚು ಗೌರವಯುತವಾದದ್ದು. ಈ ದಿಶೆಯಲ್ಲಿ ಆಲೋಚನೆ ನಡೆಯಲಿ.

ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next