ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರದ ಕೆಟ್ಟ ಆರ್ಥಿಕ ನೀತಿಯಿಂದಾಗಿ ಕೈಗಾರಿಕೆಗಳು ಮುಚ್ಚಿಹೋಗಿವೆ. ನಿರುದ್ಯೋಗ ತಾಂಡವವಾಡುತ್ತಿದೆ. ಬಡವರು, ಮಧ್ಯಮ ವರ್ಗದವರು ಜೀವನ ನಡೆಸಲು ಪರದಾಡುವಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜು ಪರ ನಾಗಪುರ ವಾರ್ಡ್ ಹಾಗೂ ಮಹಾಲಕ್ಷ್ಮೀಪುರ ವಾರ್ಡ್‌ಗಳಲ್ಲಿ ಮತಯಾಚಿಸಿ ಮಾತನಾಡಿದ ಅವರು, ನೋಟು ಅಮಾನ್ಯ, ಜಿಎಸ್‌ಟಿ ಜಾರಿಯಿಂದ ದೇಶದ ಆರ್ಥಿಕ ಪ್ರಗತಿ ಕುಂಠಿತಗೊಂಡಿದೆ. ಬಡವರು ಹಾಗೂ ಮಧ್ಯಮ ವರ್ಗದವರ ಜೀವನೋಪಾಯಕ್ಕೆ ಆಸರೆಯಾಗಿದ್ದ ಗಾರ್ಮೆಂಟ್ಸ್, ಸಣ್ಣ ಕೈಗಾರಿಕೆಗಳು ಜಿಎಸ್ ಟಿ ಹೊಡೆತಕ್ಕೆ ಸಿಲುಕಿ ಬಂದಾಗಿವೆ. ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜು ಮಾತನಾಡಿ, ಚುನಾವಣೆ ಬಳಿಕ ಕ್ಷೇತ್ರದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು. ಕ್ಷೇತ್ರದಲ್ಲಿ ಬಡವರು, ಮಧ್ಯಮ ವರ್ಗದವರು ಹೆಚ್ಚಾಗಿದ್ದು, ಆರ್ಥಿಕ ದುರ್ಬಲರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಪ್ರತಿ ವಾರ್ಡ್‌ನಲ್ಲೂ ಉಚಿತ ವೈದ್ಯಕೀಯ ಸೇವೆ ಒದಗಿಸುವ ಉತ್ತಮ ಆರೋಗ್ಯ ಕೇಂದ್ರ ಸ್ಥಾಪನೆಗೆ ಗಂಭೀರ ಚಿಂತನೆ ನಡೆಸಿದ್ದೇನೆ ಎಂದರು.
ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಶಿವರಾಜು ಅವರನ್ನು ಗೆಲ್ಲಿಸುವ ಮೂಲಕ, ಹಣದ ಬಲದಿಂದ ಅಧಿಕಾರ ನಡೆಸಲಾಗದು ಎಂಬುದನ್ನು ಕ್ಷೇತ್ರದ ಜನತೆ ಸಾಬೀತು ಮಾಡಬೇಕಿದೆ ಎಂದರು. ಮಾಜಿ ಸಚಿವೆ ರಾಣಿ ಸತೀಶ್, ಗಾಯಿತ್ರಿ ಶಾಂತೇಗೌಡ, ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಮಂಜುನಾಥ ಗೌಡ, ಬಿಬಿಎಂಪಿ ವಿಪಕ್ಷ ನಾಯಕ ಅಬ್ದುಲ್ ವಾಜಿದ್, ಮಹಾಲಕ್ಷ್ಮೀಪುರ ವಾರ್ಡ್ ಸದಸ್ಯರಾದ ಕೇಶವಮೂರ್ತಿ, ರೂಪ ಲಿಂಗೈಶ್ವರ್ ಪ್ರಚಾರ ನಡೆಸಿದರು.
ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿ: ಜನರ ಬಳಿಗೆ ಆಡಳಿತ ತರುವುದು ನಮ್ಮ ಮೂಲಮಂತ್ರವಾಗಿದ್ದು, ಕ್ಷೇತ್ರದ ಸರ್ಕಾರಿ ಕಚೇರಿಗಳಲ್ಲಿ ನಾಗರಿಕ ಸ್ನೇಹಿ ವಾತಾವರಣ ನಿರ್ಮಿಸಿ ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಗೊಳಿಸುವ ಜತೆಗೆ, ಸ್ವತ್ಛತೆ, ಮಳೆ ನೀರು ಸಂಗ್ರಹ, ಹಸಿ ಕಸದಿಂದ ಗೊಬ್ಬರ ತಯಾರಿಕೆ ಮೂಲಕ ಪರಿಸರ ಕಾಳಜಿಗೆ ಯೋಜನೆ ಸಿದ್ಧಪಡಿಸುವುದಾಗಿ ಭರವಸೆ ನೀಡಿದರು. ನಾಗರಿಕರಿಗೆ ಅನುಕೂಲವಾಗುವ ಕಡೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಮೊದಲ ಆದ್ಯತೆಯಾಗಿದೆ. ಒಟ್ಟಾರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಧ್ಯೇಯವಾಗಿದ್ದು, ಮತದಾರರು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಎಂ.ಶಿವರಾಜು ಹೇಳಿದರು.