ಅವನು ಹಳ್ಳಿ ಹುಡುಗ ಕೃಷ್ಣ. ಶುದ್ಧ ಸೋಮಾರಿ, ಯಾವುದಕ್ಕೂ ಪ್ರಯೋಜನಕ್ಕೆ ಬಾರದವನು ಅಂತ ಮನೆಯವರಿಂದ, ಊರವರಿಂದ ಕರೆಸಿಕೊಳ್ಳುತ್ತಿರುವಾತ. ಇಂಥ ಹುಡುಗನೊಬ್ಬ ಒಮ್ಮೆ ಅವಮಾನಗೊಂಡು, ಸ್ವಾಭಿಮಾನ ಕೆಣಕಿ ನಿಂತಾಗ ಏನೇನು ಮಾಡಬಲ್ಲ, ಬಿದ್ದ ಜನರ ಮುಂದೆಯೇ ಮತ್ತೆ ಎದ್ದು ನಿಲ್ಲುತ್ತಾನಾ? ಹಾಗಾದರೆ, ಅದಕ್ಕೆ ಯಾವೆಲ್ಲ ವೇಷ ಧರಿಸಬೇಕಾಗುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ವೇಷಧಾರಿ’ ಚಿತ್ರದ ಕಥಾಹಂದರ.
ಮನುಷ್ಯ ಹೊಟ್ಟೆ ಪಾಡುಗಾಗಿ ನಾನಾ ವೇಷಗಳನ್ನು ಧರಿಸುತ್ತಾನೆ. ಕಾವಿಧಾರಿ, ಖಾದಿಧಾರಿ, ಖಾಕಿಧಾರಿ ಹೀಗೆ ಹತ್ತಾರು ವೇಷಗಳಲ್ಲಿ ತನ್ನ ಸುತ್ತಮುತ್ತಲಿನವರನ್ನು ವಂಚಿಸುತ್ತಲೇ ಹೋಗುತ್ತಾನೆ. ಇದೆಲ್ಲವನ್ನು ಮಾಡಿದ ಮನುಷ್ಯ ಕೊನೆಗೆ ಸಾಧಿಸುವುದಾದರೂ ಏನು? ಇಷ್ಟೆಲ್ಲ ಆದಮೇಲೆ ಕೊನೆಗೆ ಉಳಿಯುವುದಾದರೂ ಏನು? ಹೆಣ್ಣು, ಹೊನ್ನು, ಮಣ್ಣಿನ ಹಿಂದೆ ಯಾರೂ ಹೋಗಬಾರದು. ಅರಿಷಡ್ವರ್ಗ ಗೆಲ್ಲುತ್ತೇವೆ ಎಂದು ಹೊರಟವರು ಏನೇನಾದರು.
ಅದರಲ್ಲಿ ನಿಜವಾಗಿ ಗೆದ್ದವರು ಯಾರು? ಗೆದ್ದಂತೆ ಬೀಗಿದವರು ಯಾರು? ಬೀಗಿ ಬಿದ್ದವರು ಯಾರು? ಇಂಥ ಒಂದಷ್ಟು ಸಂಗತಿಗಳ ಸುತ್ತ “ವೇಷಧಾರಿ’ ಚಿತ್ರ ಸಾಗುತ್ತದೆ. ಒಂದಷ್ಟು ಉಪದೇಶ, ಒಂದಷ್ಟು ಸಂದೇಶ, ನಡುವೆ ಒಂದಷ್ಟು ಹಾಡುಗಳು ಇವೆಲ್ಲದರ ನಡುವೆ “ವೇಷಧಾರಿ’ಯ ಸಂಚಾರ ಸರಾಗವಾಗಿ ಸಾಗುತ್ತದೆ. ಆದರೆ ತರ್ಕಕ್ಕೆ ನಿಲುಕದ, ತುಂಬಾ ಗಂಭೀರ ವಿಷಯಗಳನ್ನು ಚಿತ್ರದಲ್ಲಿ ಎಳೆದು ತಂದಿರುವುದರಿಂದ,
ಅದು ವಾಸ್ತವದಲ್ಲಿ ಎಷ್ಟರ ಮಟ್ಟಿಗೆ ಸತ್ಯ ಮತ್ತು ಸಾಧ್ಯ ಎಂಬ ಗೊಂದಲದಲ್ಲಿಯೇ ಚಿತ್ರದ ಕ್ಲೈಮ್ಯಾಕ್ಸ್ ಬರುತ್ತದೆ. ಒಟ್ಟಿನಲ್ಲಿ ಮನರಂಜನೆ ಜೊತೆಗೆ ಸಂದೇಶವೂ ಬೇಕು ಎನ್ನುವವರಿಗೆ ವೇಷಧಾರಿ ಇಷ್ಟವಾಗಬಹುದು. ಚಿತ್ರದಲ್ಲಿ ನಟಿಸಿದ ಆರ್ಯನ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಉಳಿದಂತೆ ಸೋನಂ ರೈ, ಕುರಿರಂಗ, ಮಿಮಿಕ್ರಿ ಗೋಪಿ, ಬಿರಾದಾರ್ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಚಿತ್ರ: ವೇಷಧಾರಿ
ನಿರ್ಮಾಣ: ಅನಿಲ್ ಹೆಚ್. ಅಂಬಿ
ನಿರ್ದೇಶನ: ಶಿವಾನಂದ್ ಭೂಷಿ
ತಾರಾಗಣ: ಆರ್ಯನ್, ಸೋನಂ ರೈ, ಕುರಿರಂಗ, ಮಿಮಿಕ್ರಿ ಗೋಪಿ, ಬಿರಾದಾರ್, ಮೈಕೆಲ್ ಮಧು, ಶ್ರುತಿ ರಾಜೇಂದ್ರ ಮತ್ತಿತರರು
* ಕಾರ್ತಿಕ್