Advertisement
ರೈತ ಬಲವಾನ್ ಸಿಂಗ್, 80ರ ದಶಕದಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಬೀಜಗಳನ್ನು ಖರೀದಿಸಿದ್ದರು. ಆವಾಗಿನಿಂದ ಪ್ರತಿ ಬಾರಿ ಈರುಳ್ಳಿ ಬೆಳೆಯ ಫಸಲು ಪಡೆದಾಗಲೂ ಆಯಾ ಬಾರಿಯ ಅತ್ಯುತ್ತಮ ಈರುಳ್ಳಿಗಳನ್ನು ಬೀಜಕ್ಕಾಗಿ ತೆಗೆದಿಟ್ಟರು. ಈರುಳ್ಳಿಗಳ ಗಾತ್ರ, ಆಕಾರ ಮತ್ತು ಬಿಗಿತ- ಇವುಗಳ ಆಧಾರದಿಂದ ಅವರ ಆಯ್ಕೆ. ಒಂದಲ್ಲ, ಎರಡಲ್ಲ, ಸುಮಾರು 17 ವರುಷ ಹೀಗೆಯೇ ಮಾಡುತ್ತಾ ಬಂದರು. ಕೊನೆಗೆ ಅತ್ಯುತ್ತಮ ಗುಣಮಟ್ಟದ ಈರುಳ್ಳಿ ತಳಿಯೊಂದನ್ನು ಪಡೆದರು ಬಲವಾನ್ ಸಿಂಗ್.
ಇತರ ತಳಿಗಳಿಗಿಂತ ಈ ಈರುಳ್ಳಿಯ ಎಕರೆವಾರು ಇಳುವರಿ ಅಧಿಕ. ಜೊತೆಗೆ, ಮಾರುಕಟ್ಟೆಯಲ್ಲಿ ಇದಕ್ಕೆ ಅಧಿಕ ಬೆಲೆ. ಅಲ್ಲದೆ, ಇದನ್ನು ಬೆಳೆಸಲು ಕಡಿಮೆ ನೀರು ಮತ್ತು ಕಡಿಮೆ ರಾಸಾಯನಿಕ ಗೊಬ್ಬರ ಸಾಕು (ಸಾವಯವ ಗೊಬ್ಬರ ಜಾಸ್ತಿ ಬೇಕು). ಇಷ್ಟೆಲ್ಲ ಧನಾತ್ಮಕ ಗುಣಗಳಿರುವ ಈರುಳ್ಳಿ ತಳಿ ಈಗ “ಬಲವಾನ್ ಈರುಳ್ಳಿ’ ಎಂಬ ಹೆಸರಿನಿಂದಲೇ ಜನಜನಿತವಾಗಿದೆ. ಇದು ಅವರ ಶ್ರಮ ಮತ್ತು ಶ್ರದ್ಧೆಗೆ ಸಂದ ಗೌರವ. ಈಗ, ಈರುಳ್ಳಿ ತಳಿಯ ಬೀಜಗಳ ಮಾರಾಟದಿಂದ ಅವರು ಗಳಿಸುವ ವಾರ್ಷಿಕ ಆದಾಯ ಮೂರು ಲಕ್ಷ ರೂಪಾಯಿ! ಜೊತೆಗೆ, ಎರಡು ಎಕರೆ ಜಮೀನಿನಲ್ಲಿ ಬೆಳೆಸುವ ಈರುಳ್ಳಿ ಫಸಲಿನ ಮಾರಾಟದಿಂದಲೂ ಅಷ್ಟೇ ಆದಾಯ ಗಳಿಸುತ್ತಾರೆ ಬಲವಾನ್ ಸಿಂಗ್. ಬೀಜ ಸಂಗ್ರಹಣೆಯ ತಪಸ್ಸು
ಸುಮಾರು ಎರಡು ದಶಕಗಳ ಮುಂಚೆ ಉತ್ತಮ ಈರುಳ್ಳಿ ತಳಿಗಾಗಿ ಅವರು ಹುಡುಕಾಟ ನಡೆಸಿದ್ದರು- ಅಕ್ಕಪಕ್ಕದ ಗ್ರಾಮಗಳಲ್ಲಿ. ಅದೊಂದು ದಿನ, ದೇಸಿ ಈರುಳ್ಳಿ ತಳಿಯೊಂದರ ಬೀಜ ಖರೀದಿಸಿ ತಂದರು. ಅದರ ಗಾತ್ರ, ಆಕಾರ ಮತ್ತು ಬಿಗಿತ ಆಕರ್ಷಕವಾಗಿತ್ತು. ಆ ಬೀಜಗಳನ್ನು ಜತನದಿಂದ ಬಿತ್ತಿ ಬೆಳೆಸಿದರು. ಮೊದಲ ಪ್ರಯತ್ನದಲ್ಲೇ ಅಧಿಕ ಇಳುವರಿ ಪಡೆದರು. ಅದರಿಂದಾಗಿ ಇದೊಂದು ಉತ್ತಮ ತಳಿ ಎಂಬುದು ಅವರಿಗೆ ಆಗಲೇ ಖಚಿತವಾಯಿತು. ಅನಂತರ 17 ವರ್ಷಗಳ ತಪಸ್ಸು ಶುರುವಾಯಿತು. ಎಂಥ ತಪಸ್ಸು ಎಂದರೆ, ಅತ್ಯುತ್ತಮ ತಳಿಯೊಂದನ್ನು ಅಭಿವೃದ್ಧಿಪಡಿಸಬೇಕೆನ್ನುವ ತಪಸ್ಸು. ಪ್ರತಿಯೊಂದು ಹಂಗಾಮಿನಲ್ಲಿ ಈರುಳ್ಳಿಯ ಇಳುವರಿ ಮತ್ತು ಈರುಳ್ಳಿ ಮಾರಾಟವಾದ ಬೆಲೆಯನ್ನು ದಾಖಲಿಸತೊಡಗಿದರು.
Related Articles
ಹರಿಯಾಣ ತೋಟಗಾರಿಕಾ ಇಲಾಖೆ ನಡೆಸಿದ ರಾಜ್ಯಮಟ್ಟದ ಕೃಷಿ ಉತ್ಪನ್ನಗಳ ಸ್ಪರ್ಧೆಯಲ್ಲಿ ಬಲವಾನ್ ಈರುಳ್ಳಿ ಪ್ರಥಮ ಬಹುಮಾನ ಗಳಿಸಿತು. 1990ರಿಂದ 1999ರ ವರೆಗೆ ನಿರಂತರವಾಗಿ ಬಹುಮಾನ ಸಿಗುತ್ತಲೇ ಹೋಯಿತು. 2008ರಲ್ಲಿ, ಬಲವಾನ್ ಸಿಂಗ್ ಅವರ ಅಪೂರ್ವ ಸಾಧನೆಯನ್ನು ಗುರುತಿಸಿದ ರಾಷ್ಟ್ರೀಯ ಆವಿಷ್ಕಾರ ಪ್ರತಿಷ್ಠಾನ (ಎನ್‌ಐಎಫ್) ಅವರಿಗೆ ರಾಷ್ಟ್ರೀಯ ತಳಮಟ್ಟದ ಆವಿಷ್ಕಾರ ಪ್ರಶಸ್ತಿ ನೀಡಿ ಗೌರವಿಸಿತು. ನಾಲ್ಕು ವರ್ಷಗಳ ನಂತರ, ಅವರಿಗೆ ಇದಕ್ಕಾಗಿ ನವದೆಹಲಿಯಲ್ಲಿ ರಾಷ್ಟ್ರಪತಿಗಳ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Advertisement
ರಾಷ್ಟ್ರೀಯ ಆವಿಷ್ಕಾರ ಪ್ರತಿಷ್ಠಾನದ ನಿರ್ದೇಶಕರಾದ ಹರ್ದೇವ ಚೌಧರಿ, ಬಲವಾನ್ ಸಿಂಗರ ಆವಿಷ್ಕಾರವನ್ನು ಶ್ಲಾಘಿಸಿದರು. ಹರಿಯಾಣ ಕೃಷಿ ವಿಶ್ವವಿದ್ಯಾಲಯ, “ಬಲವಾನ್ ಈರುಳ್ಳಿ’ಯ ಗುಣಮಟ್ಟದ ಬಗ್ಗೆ ಪರೀಕ್ಷೆಗಳನ್ನು ನಡೆಸಿ, ಖಚಿತಪಡಿಸಿಕೊಂಡ ನಂತರವೇ ಅದನ್ನು ಇತರ ರೈತರಿಗೆ ಶಿಫಾರಸ್ಸು ಮಾಡುತ್ತಿದೆ ಎಂದು ಅವರು ತಿಳಿಸುತ್ತಾರೆ. ಕರ್ನಾಲಿನ ಕೇಂದ್ರೀಯ ಮಣ್ಣುದ್ದಾರ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ. ಆರ್.ಕೆ. ಸಿಂಗ್, ಬಲವಾನ್ ಈರುಳ್ಳಿಯ ಇಳುವರಿ ಇತರ ತಳಿಗಳಿಗಿಂತ ಶೇ. 25 ಅಧಿಕ, ಗಾತ್ರ ಮತ್ತು ಬಾಳಿಕೆಯೂ ಅಧಿಕ ಎಂಬುದನ್ನು ಖಚಿತಪಡಿಸಿದ್ದಾರೆ.
ಪ್ರೇರಣೆ ಪಡೆದ ರೈತರುಬಲವಾನ್ ಈರುಳ್ಳಿಯ ಯಶೋಗಾಥೆ ಸುದ್ದಿಯಾಗುತ್ತಿದ್ದಂತೆ, ಹಲವಾರು ರೈತರು ಇದರ ಬೀಜಕ್ಕಾಗಿ ಬಲವಾನ್ ಸಿಂಗ್‌ರ ಹೊಲಕ್ಕೆ ಭೇಟಿ ನೀಡಲು ತೊಡಗಿದರು. ಇದೇ ಸಂದರ್ಭದಲ್ಲಿ “ಬಲವಾನ್ ಈರುಳ್ಳಿ’ ಹೆಸರಿನಲ್ಲಿ ನಕಲಿ ಬೀಜಗಳನ್ನು ಮಾರಾಟ ಮಾಡುವ ವಂಚಕರ ದಂಧೆ ಶುರುವಾಯಿತು. ಆ ಪ್ರತಿಷ್ಠಾನದ ಪರಿಣತರು ಬಲವಾನ್ ಈರುಳ್ಳಿಯ ಗುಣಮಟ್ಟದ ಪರೀಕ್ಷೆ ನಡೆಸುವಾಗ, ಈ ಹೆಸರಿನಲ್ಲಿ ಎಂಟು ಬೇರೆಬೇರೆ ತಳಿಗಳ ಬೀಜಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದನ್ನು ದಾಖಲಿಸಿದರು. ಹರಿಯಾಣದ ಬಿವಾನಿ ಜಿಲ್ಲೆಯ ಬಹುಪಾಲು ರೈತರು ಗೋಧಿ ಮತ್ತು ಕಬ್ಬು ಬೆಳೆಯುವವರು. ಕಳೆದ ಕೆಲವು ವರುಷಗಳಿಂದ ಈರುಳ್ಳಿ ಬೆಳೆಯಲು ಶುರು ಮಾಡಿದ್ದಾರೆ. ಒಂದೂವರೆ ಎಕರೆಯಲ್ಲಿ ಇದನ್ನು ಬೆಳೆಸಿದ ಬವಾನಿ ಖೇರಾ ಗ್ರಾಮದ ಧರಮ್‌ಬೀರ್ ಸಿಂಗ್, ಈ ತಳಿಯ ಉತ್ತಮ ಗುಣಗಳನ್ನೆಲ್ಲ ಖಾತರಿ ಪಡಿಸುತ್ತಾರೆ. ಭಿವಾನಿಯ ಇನ್ನೊಬ್ಬ ರೈತ ರಣಧೀರ್ ತ್ಯಾಗಿ, ತಮ್ಮ ಅರ್ಧ ಎಕರೆಯಲ್ಲಿ ಈ ತಳಿ 240 ಕ್ವಿಂಟಾಲ್ ಬಂಪರ್ ಇಳುವರಿ ನೀಡಿದ್ದನ್ನು ಸಂತಸದಿಂದ ಹೇಳಿಕೊಳ್ಳುತ್ತಾರೆ. ಬಲವಾನ್ ಈರುಳ್ಳಿಯಿಂದಾಗಿ ಬಲವಾನ್ ಸಿಂಗ್ ಅವರ ಬದುಕು ಮಾತ್ರವಲ್ಲ, ಅದನ್ನು ಬೆಳೆದ ಹಲವು ರೈತರ ಬದುಕೂ ಬದಲಾಗಿದೆ. ಹೆಚ್ಚಿದ ಬೇಡಿಕೆ
1989- 1990ನೇ ಇಸವಿಯಿಂದ, ಉತ್ತಮ ಗುಣಮಟ್ಟದ ಈರುಳ್ಳಿ ಕೊಯ್ಲು ಮಾಡಿದಾಗಿನಿಂದ, ಮಾರುಕಟ್ಟೆಯಲ್ಲಿ ತನ್ನ ಈರುಳ್ಳಿಗೆ ಶೇಕಡಾ 25ರಷ್ಟು ಅಧಿಕ ಬೆಲೆ ಸಿಗುತ್ತಿದೆಯೆಂದು ತಿಳಿಸುತ್ತಾರೆ ಬಲವಾನ್ ಸಿಂಗ್. ಇತರ ರೈತರ ಫಸಲು ಕಿಲೋಗೆ 100 ರೂ. ಬೆಲೆಗೆ ಮಾರಾಟವಾದರೆ, ಇವರ ಈರುಳ್ಳಿಯ ಮಾರಾಟ ಬೆಲೆ ಕಿಲೋಗೆ 125 ರೂ. ಕ್ರಮೇಣ, ಸಾವಯವ ಈರುಳ್ಳಿಗೆ ಭಾರೀ ಬೇಡಿಕೆಯಿದೆ ಎಂಬುದನ್ನು ತಿಳಿದುಕೊಂಡರು ಬಲವಾನ್ ಸಿಂಗ್. ಹಾಗಾಗಿ, ಹಿಸ್ಸಾರ್‌ನ ಹರಿಯಾಣ ಕೃಷಿ ವಿಶ್ವವಿದ್ಯಾಲಯದ ಪರಿಣತರ ಸಲಹೆಯಂತೆ, ಈರುಳ್ಳಿ ಬೆಳೆಗೆ ಕನಿಷ್ಠ ರಾಸಾಯನಿಕ ಗೊಬ್ಬರ ಹಾಕತೊಡಗಿದರು. ಜೊತೆಗೆ, ತಾನೇ ತಯಾರಿಸಿದ ಸಾವಯವ ಗೊಬ್ಬರ ಬಳಸತೊಡಗಿದರು. -ಅಡ್ಡೂರು ಕೃಷ್ಣ ರಾವ್