ನರೇಗಲ್ಲ: ಪಟ್ಟಣದ ಗ್ರಂಥಾಲಯಕ್ಕೆ ವಿಶೇಷವಾಗಿ ಮಳೆಗಾಲದಲ್ಲಿ ಬರುವವರು ಪುಸ್ತಕ, ಪತ್ರಿಕೆ ಬದಲಿಗೆ ಛಾವಣಿ ಕಡೆ ನೋಡುತ್ತಿರುತ್ತಾರೆ. ಶಿಥಿಲಗೊಂಡ ಹಳೆಯ ಕಟ್ಟಡ, ಮಳೆಗೆ ನೆನೆದು ಆಗಾಗ್ಗೆ ಹಕ್ಕಳಿಕೆ ಉದುರುವುದರಿಂದ ಓದುಗರಿಗೆ ಒಂದು ರೀತಿಯಲ್ಲಿ ಜೀವಭಯ.
ಇದರ ಸಹಾವಾಸವೇ ಬೇಡ ಎನ್ನುವ ಅನೇಕ ಓದುಗರು ನಾನಾ ಸೌಕರ್ಯದ ಕೊರತೆ ಎದುರಿಸುತ್ತಿರುವ ಗ್ರಂಥಾಲಯದ ಕಡೆ ಮುಖ ಮಾಡುವುದನ್ನೇ ಬಿಟ್ಟಿದ್ದಾರೆ. ಪರಿಣಾಮ ಇಲ್ಲಿನ ಗ್ರಂಥಾಲಯ ಇದ್ದೂ ಇಲ್ಲದಂತಾಗಿದೆ. ಈ ಗ್ರಂಥಾಲಯಕ್ಕೆ ಸುಸಜ್ಜಿತ ಸ್ವಂತ ಕಟ್ಟಡ ಇಲ್ಲವಾಗಿದೆ. ಕಳೆದ 40 ವರ್ಷಗಳಿಂದ ಪಟ್ಟಣ ಪಂಚಾಯಿತಿಯ ಪಕ್ಕದಲ್ಲಿ ಬ್ರಿಟಿಷ್‌ರ ಕಾಲದ ವಿಶ್ರಾಂತಿ ಕೋಣೆಯ ಶಿಥಿಲಗೊಂಡ ಕೊಠಡಿಯಲ್ಲಿ ನಡೆಯುತ್ತಿದೆ.
ನಾನಾ ಸೌವಲತ್ತುಗಳ ಕೊರತೆ ಎದ್ದು ಕಾಣುತ್ತಿದೆ. ಸಹಸ್ರಾರು ಓದುಗ ಬಳಗ ಶತಮಾನಗಳ ಹಿಂದಿನ ಕಟ್ಟಡದಲ್ಲಿರುವ ಮುಖ್ಯ ಗ್ರಂಥಾಲಯಕ್ಕೆ 491ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ನಿತ್ಯ ನೂರಾರೂ ಜನ ಗ್ರಂಥಾಲಯದಲ್ಲಿ ದಿನ ಪತ್ರಿಕೆ, ಮಾಸ ಪತ್ರಿಕೆ, ವಾರ ಪತ್ರಿಕೆ ಜೊತೆಗೆ ಕಥೆ, ಕಾದಂಬರಿಗಳಿಗೆ ಮುಗಿ ಬೀಳುತ್ತಾರೆ. ಆದರೆ, ಶಿಥಿಲಗೊಂಡಗ್ರಂಥಾಲಯದಲ್ಲಿ ಓದುಗರು ಕುಳಿತುಕೊಳ್ಳಲು ಸ್ಥಳಾವಕಾಶ ಕೊರತೆ ಅನುಭವಿಸುತ್ತಿದೆ. ವಿಶಾಲ ಜಾಗ ಇಲ್ಲದೆ ಹೋಗಿದ್ದರಿಂದ ನಾನಾ ಬಾರಿ ಓದುಗರು ನಿಂತುಕೊಂಡೇ ಓದುವ ಸ್ಥಿತಿ ಎದುರಾಗುತ್ತಿದೆ.
ಪೂರ್ಣಗೊಂಡಿಲ್ಲ ಕಾಮಗಾರಿ ಪಟ್ಟಣದ ಹೃದಯ ಭಾಗವಾದ ಗಣೇಶ ದೇವಸ್ಥಾನ ಪಕ್ಕದಲ್ಲಿ ನಿರ್ಮಿಸಿರುವ ಸಾರ್ವಜನಿಕರ ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಪ.ಪಂ 2014-15ನೇ ಸಾಲಿನ ಎಸ್ ಎಫ್‌ಸಿ ಅನುದಾನದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಅಂದಾಜು 7 ಲಕ್ಷ 21 ಸಾವಿರ ರೂ. ಮತ್ತು 2015-16ನೇ ಸಾಲಿನ ಮುಂದುವರಿದ ಕಾಮಗಾರಿಗೆ 5 ಲಕ್ಷ 13 ಸಾವಿರ ರೂ. ಮಂಜೂರು ಮಾಡಲಾಗಿತ್ತು. ಈ ವೇಳೆಗೆ ಸಕಲ ಸೌಲಭ್ಯವುಳ್ಳ ಉತ್ತಮ ಗ್ರಂಥಾಲಯ ನಿರ್ಮಾಣವಾಗಬೇಕಿತ್ತು. ವಾರ್ಡ್ ನಂ. 5ರ ಭೂವಿ ಓಣಿಯಲ್ಲಿರುವ ಗ್ರಂಥಾಲಯ ಅನಾಥವಾಗಿದೆ. ಕಟ್ಟಡಕ್ಕೆ ಅನುದಾನದ ಕೊರತೆಯಿಂದ ಗ್ರಂಥಾಲಯ ಪೂರ್ಣಗೊಂಡಿಲ್ಲ. ಸದ್ಯ ಇರುವ ಇಕ್ಕಟ್ಟಾದ ಸ್ಥಳದಲ್ಲೇ ಪುಸ್ತಕ ಮತ್ತು ಪ್ರತಿಕೆಗಳ ರಾಶಿ ಮಧ್ಯೆಯೇ ಓದುಗರು ಪತ್ರಿಕೆ ಓದಬೇಕು. ಪುಸ್ತಕಗಳ ಜೋಡಣೆ ಸಮರ್ಪಕವಾಗಿಲ್ಲ.
ಕುಡಿಯುವ ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳ ಕೊರತೆಯಿದೆ. ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 2 ಪದವಿ ಕಾಲೇಜು, 3 ಪದವಿ ಪೂರ್ವ ಕಾಲೇಜು, 4 ಪ್ರೌಢಶಾಲೆ, 10ಕ್ಕೂ ಹೆಚ್ಚು ಹಿರಿಯ ಪ್ರಾಥಮಿಕ ಶಾಲೆಗಳಿವೆ. 20 ಸಾವಿರ ಓದುಗರು ಹಾಗೂ ವಿದ್ಯಾರ್ಥಿಗಳು ಸೇರಿ ಸುಮಾರು 26 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಪಟ್ಟಣದಲ್ಲಿದೆ. ಈ ಗ್ರಂಥಾಲಯ 1980 ನವೆಂಬರ್ 1ರಂದು ಎರಡು ಸಾವಿರ ಪುಸ್ತಕಗೊಂದಿಗೆ ಆರಂಭವಾಗಿದ್ದು, ಸದ್ಯ 14,641 ಪುಸ್ತಕಗಳು ಇವೆ. ನಿತ್ಯ 6 ರಾಜ್ಯ ಮಟ್ಟದ ಪತ್ರಿಕೆ, 2 ಸ್ಥಳೀಯ ಮಟ್ಟದ ಪತ್ರಿಕೆ ಬರುತ್ತವೆ.
-ಸಿಕಂದರ ಎಂ. ಆರಿ