ಬೆಂಗಳೂರು: “ನಾಟಕ ಕಂಪನಿ ಆರ್ಥಿಕ ನಷ್ಟದಲ್ಲಿದ್ದಾಗ ಸಾಲ ಕೊಟ್ಟವರು ನಾನು ತಲೆ ಮರೆಸಿಕೊಳ್ಳುತ್ತೇನೆ ಅಂದುಕೊಂಡು ನನ್ನ ಎರಡೂ ತೋಳು ಗಳಿಗೆ ಹಗ್ಗ ಕಟ್ಟಿ ಕತ್ತಲೆಯ ಕೋಣೆಗೆ ಕೂಡಿ ಹಾಕಿದ್ದರು’ ಎಂದು ವೃತ್ತಿ ರಂಗಭೂಮಿ ಕಲಾವಿದ ಹಾಗೂ ಕೆ.ಬಿ.ಆರ್.ನಾಟಕ ಕಂಪನಿ ಮಾಲೀಕ ಚಿಂದೋಡಿ ಶ್ರೀಕಂಠೇಶ್ ಕಣ್ಣೀರು ಹಾಕಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ “ಮನೆ ಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ವೃತ್ತಿರಂಗ ಭೂಮಿ ಕಟ್ಟಲು ತಾವು ಅನುಭವಿಸಿದ ಬದುಕಿನ ಏರಿಳಿತವನ್ನು ಮೆಲುಕು ಹಾಕಿದರು.
ವೃತ್ತಿರಂಗಭೂಮಿ ಕಂಪನಿ ನಡೆಸುವುದು ಸುಲಭದ ಮಾತಲ್ಲ. ಇಲ್ಲಿ ಗೆಲವುಗಳಿಗಿಂತ ಸೋಲಿನ ಸವಿ ಹೆಚ್ಚು. ಆದರೆ ಎದೆಗುಂದಬಾರದು. ಬೈಲ ಹೊಂಗಲದಲ್ಲಿ ನಾಟಕ ಪ್ರದರ್ಶಿಸುತ್ತಿದ್ದಾಗ ಸಾಕಷ್ಟು ಆರ್ಥಿಕ ನಷ್ಟ ಅನು ಭವಿಸಿದೆ. ಕಲಾವಿದರಿಗೆ ಹಣಕೊಡಲು ನನ್ನ ಹತ್ತಿರ ಹಣವಿದ್ದಿಲ್ಲ. ಆ ವೇಳೆ, ಸುಮಾರು 80 ಸಾವಿರ ರೂ. ಸಾಲಕ್ಕೆ ಗುರಿಯಾದೆ. ಸಾಲಕೊಟ್ಟವರು ಎಲ್ಲೆಂ ದರಲ್ಲಿ ತಿವಿದರು.
ನಾನು ಪರಾರಿಯಾಗುತ್ತೇನೆ ಎಂದು ಅಂದುಕೊಂಡು ಹಗ್ಗದಿಂದ ಕಟ್ಟಿ, ಎಳೆದಾಡಿ, ಕಾರಿನಲ್ಲಿ ಕರೆದೊಯ್ದರು ಎಂದು ಹೇಳುತ್ತಿ ದ್ದಂತೆ ಕಣ್ಣಾಲಿಗಳು ತೇವಗೊಂಡವು. ಇಷ್ಟೆಲ್ಲಾ ಆದರೂ ಎದೆಗುಂದದೆ ಕುಟುಂಬಸ್ಥರ ಜತೆಗೂಡಿ ಡ್ರಾಮಾ ಕಂಪನಿ ಕಟ್ಟಿದೆ. ಈಗಲೂ ಕಂಪನಿ ಉತ್ತರ ಕರ್ನಾಟಕದ ತುಂಬ ಹೆಸರು ಮಾಡಿದೆ. ಕಲೆಗಾಗಿಯೇ ನನ್ನನ್ನು ನಾನು ಸಮರ್ಪಿಸಿಕೊಂಡ ಹಿನ್ನೆಲೆಯಲ್ಲಿ ಮನೆಯಂಗಳದಲ್ಲಿ ಮಾತುಕತೆವರೆಗೂ ನನ್ನನ್ನು ಕರೆದುಕೊಂಡು ಬಂದಿದೆ ಎಂದು ಹೇಳಿದರು.
ಬಣ್ಣದ ಸೆಳೆತದಿಂದ ಓದು ಬಿಟ್ಟೆ: ಬಣ್ಣದ ಸೆಳೆತ ನನಗೆ ಬಾಲ್ಯದಿಂದಲೂ ಇತ್ತು. ಹೀಗಾಗಿಯೇ 9ನೇ ತರಗತಿಗೆ ಓದು ಬಿಟ್ಟು, ಬಣ್ಣದ ಲೋಕಕ್ಕೆ ಹೆಜ್ಜೆಯಿರಿಸಿದೆ. ಬೆಂಗಳೂರಿನಲ್ಲಿ ನಾಟಕ ಕಂಪನಿ ಬಿಡಾರ ಹೂಡಿದ ಮೇಲೆ ನಾಟಕದಲ್ಲಿ ಅಭಿನಯ ಮಾಡತೊಡಗಿದೆ. ನಮ್ಮಪ್ಪ ಟಿಪ್ಪುವಿನ ಪಾತ್ರ ಮಾಡುತ್ತಿದ್ದರು. ನಾನು ಟಿಪ್ಪುವಿನ ಮಗನ ಪಾತ್ರ ಮಾಡುತ್ತಿದ್ದೇ. ಹೀಗೆ…ಬಣ್ಣದ ಕಾಯಕ ಮುಂದುವರಿಸಿದೆ ಎಂದರು.
ನಮ್ಮ ಕಂಪನಿಯ ನಾಟಕಗಳಲ್ಲಿ ಹಿರಿಯ ನಟ ವಜ್ರಮುನಿ ಮತ್ತು ಶ್ರೀನಾಥ್ ಕೂಡ ನಟಿಸುತ್ತಿದ್ದರು. ಸುಮಾರು 50 ಕಲಾವಿದರು ಕಂಪನಿಯಲ್ಲಿದ್ದರು. ಹುಬ್ಬಳ್ಳಿಯಲ್ಲಿ ನಾಟಕ ಪ್ರದರ್ಶಿಸುತ್ತಿದ್ದ ವೇಳೆ ಊಟಕ್ಕೆ ಅಕ್ಕಿಯೇ ಇರಲಿಲ್ಲ. ಅಂತಹ ದಿನಗಳಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಪರ ದಾಡಿದ್ದು ಇದೆ. ಹುಬ್ಬಳಿಯಲ್ಲಿ ತರಕಾರಿ ಮಾರುವವರು ನಮ್ಮ ಸಂಕಷ್ಟಕ್ಕೆ ಮಿಡಿದು ಜೋಳಿಗೆಯಲ್ಲಿ ತರಕಾರಿ ನೀಡಿದ ದಿನಗಳಿವೆ ಎಂದು ಹಳೆಯದನ್ನು ನೆನಪಿಸಿಕೊಂಡರು.
ಸಿನಿಮಾ ಕೈ ಹಿಡಿಯಲಿಲ್ಲ: ಕಲೆ ಎಲ್ಲರನ್ನೂ ಒಳಗೆ ಕರೆದುಕೊಳ್ಳುತ್ತದೆ. ಆದರೆ, ಕೆಲವರನ್ನು ಮಾತ್ರ ಕೈ ಹಿಡಿಯುತ್ತದೆ. ರಂಗಭೂಮಿಯಲ್ಲಿನ ಯಶ ಸ್ಸಿನ ನಂತರ ಸಿನಿಮಾ ನಿರ್ಮಿಸಲು ಮುಂದಾದೆ. ಆದರೆ, ಅಲ್ಲಿ ಯಶಸ್ಸು ಸಿಗಲಿಲ್ಲ. ಇಲ್ಲಿ ಸುಮಾರು 2 ಕೋಟಿ ರೂ.ಕಳೆದುಕೊಂಡೆ. ನಂತರ ಮತ್ತೆ ವೃತ್ತಿ ರಂಗಭೂಮಿಗೆ ಮರಳಿ ಹೊಸ-ಹೊಸ ಪ್ರಯೋಗಗಳಿಗೆ ಕೈ ಹಾಕಿದೆ. ಹಾಸ್ಯಪಾತ್ರ, ಕಥಾನಾಯಕ, ಖಳನಾಯಕ, ಪೋಷಕ ಕಲಾವಿದ ಸೇರಿ ದಂತೆ ಹಲವು ಪಾತ್ರಗಳಿಗೆ ಈಗಲೂ ಬಣ್ಣ ಹಚ್ಚುತ್ತಿದ್ದೇನೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕಲಾವಿದರ ಬದುಕು ಸಂಕಷ್ಟದಲ್ಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರ ನೆರವಿಗೆ ಬರಬೇಕು. ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಕಲಾವಿದರ ಹಿತ ಕಾಯಲು ಮುಂದಾಗಿದ್ದರು. ಮತ್ತೆ ಸರ್ಕಾರ ಕಲಾವಿದರ ಹಿತ ಕಾಯಲು ಮುಂದಾಗಬೇಕು ಎಂದು ಮನವಿ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ಉಪಸ್ಥಿತರಿದ್ದರು.