ಶಹಾಪುರ: ನವೆಂಬರ್ ತಿಂಗಳಿನಲ್ಲಿಯೇ ಕೃಷ್ಣಾ ಕಾಡಾ ಅಧಿಕಾರಿಗಳು ಕಾಲುವೆಗಳಿಗೆ ನೀರು ಹರಿಸುವುದು ನಿಲ್ಲಿಸಿದ್ದು, ಇದು ಸಂಪೂರ್ಣ ಅವೈಜ್ಞಾನಿಕದಿಂದ ಕೂಡಿದೆ. ಹೀಗಾಗಿ ಪ್ರಸ್ತುತ ಬೆಳೆಗಳಾದ ಶೇಂಗಾ, ಮೆಣಸಿನಕಾಯಿ ಮತ್ತು ಸಜ್ಜೆ ಬೆಳೆಗಳಿಗೆ ನೀರಿನ ಕೊರತೆ ಉಂಟಾಗಿದ್ದು, ಕೂಡಲೇ ಎಡದಂಡೆ ಕಾಲುವೆಗೆ ನೀರು ಹರಿಸಬೇಕೆಂದು ಶಾಸಕ ರಾಜುಗೌಡ ಒತ್ತಾಯಿಸಿದರು.
ನಗರ ಸಮೀಪದ ಭೀಮರಾಯನ ಗುಡಿ ಕೃಷ್ಣಾ ಕಾಡಾ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ವರ್ಷ ಮುಂಗಾರು ಸೇರಿದಂತೆ ಹಿಂಗಾರು ಮಳೆಯೂ ಕೈ ಕೊಟ್ಟಿದ್ದು, ರೈತರು ತೀವ್ರ ಸಂಕಷ್ಟ ಎದುರಿಸವಂತಾಗಿದೆ. ಕೆಬಿಜೆಎನ್ನೆಲ್ ಅಧಿಕಾರಿಗಳು ರೈತರ ಕಷ್ಟ, ಸಮಸ್ಯೆಗಳ ಬಗ್ಗೆ ಸಮರ್ಪಕ ಮಾಹಿತಿ ಪಡೆದುಕೊಂಡು ಅನುಕೂಲ ಕಲ್ಪಿಸಬೇಕು. ಅವೈಜ್ಞಾನಿಕ ನಡೆಯಿಂದ ರೈತರು ಇನ್ನಷ್ಟು ನಷ್ಟ ಅನುಭವಿಸುವಂತಾಗಿದೆ. ಈ ಕುರಿತು ಕೃಷ್ಣಾ ಕಾಡಾ ಅಧಿಕಾರಿಗಳು ಗಮನ ಹರಿಸುವುದು ಒಳಿತು. ನವೆಂಬರ್ ತಿಂಗಳಿನಲ್ಲಿ ಕಾಲುವೆ ನೀರು ನಿಲ್ಲಿಸಿರುವುದು ತಪ್ಪು ನಿರ್ಧಾರ. ತಕ್ಷಣ ಇನ್ನುಳಿದ ಬೆಳೆಗಳಿಗಾದರೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಕ್ಷಣ ಕಾಲುವೆಗೆ ನೀರು ಹರಿಸುಬೇಕೆಂದು ಮನವಿ ಮಾಡಿದರು.
ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ರೈತರ ಸಂಕಷ್ಟ ಅರಿತು ಕೂಡಲೇ ಕಾಲುವೆಗೆ ನೀರು ಹರಿಸಬೇಕು. ಸದರಿ ಬೆಳೆಗಳಾದ ಮೆಣಸಿನಕಾಯಿ, ಶೇಂಗಾ, ಸಜ್ಜೆ ಬೆಳೆಗಳ ಫಲ ಕೈಗೆಟುಕುವಂತೆ ಮಾಡಬೇಕು. ಅಲ್ಲದೆ ಜನ ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸಬೇಕು. ಜಿಲ್ಲೆಯ ರೈತರು ಗುಳೆ ಹೋಗದಂತೆ ತಡೆಯಲು ಕಾಲುವೆಗೆ ನೀರು ಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರತ್ನಾ ಪಾಟೀಲ, ಮುಖಂಡ ಶರಣು ಮಂದ್ರವಾಡ, ಮಲ್ಲಣ್ಣ ಚಿಂತಿ, ಸಾಬಣ್ಣ ಪೂಜಾರಿ, ಭೀಮರಾಯ ಎಡ್ಡಳ್ಳಿ, ಹಣಮಂತ, ಗುಣ್ಣ ದೇಸಾಯಿ, ಕರೆಪ್ಪಗೌಡ ಪಾಟೀಲ ಇದ್ದರು.