ಪ್ಯಾರಿಸ್: ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬರಾದ ರಾಫೆಲ್ ನಡಾಲ್ (Rafael Nadal) ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದಾರೆ.
22 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ರಾಫೆಲ್ ನಡಾಲ್ ಅವರು ಸಾರ್ವಕಾಲಿಕ ಅತ್ಯಂತ ಪ್ರೀತಿಯ ಕ್ರೀಡಾಪಟುಗಳಲ್ಲಿ ಒಬ್ಬರಾಗಿ ಟೆನ್ನಿಸ್ ಆಟಕ್ಕೆ ವಿದಾಯ ಹೇಳಿದರು.
ನವೆಂಬರ್ ನಲ್ಲಿ ನಡೆಯಲಿರುವ ಡೇವಿಸ್ ಕಪ್ (Davis cup) ಕೂಟದಲ್ಲಿ ವೃತ್ತಿಪರ ಟೆನಿಸ್ ಆಟಗಾರನಾಗಿ ನಡಾಲ್ ಅವರು ಕೊನೆಯ ಪ್ರವಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ವಿಡಿಯೋ ಮೂಲಕ ನಿವೃತ್ತಿ ಸುದ್ದಿ ಪ್ರಕಟಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ನ ನಂತರ ಅವರು ಡೇವಿಸ್ ಕಪ್ ಮೂಲಕ ಅಂಕಣದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. 2004 ರಲ್ಲಿ, ಯುವ ನಡಾಲ್ ಸ್ಪೇನ್ ಗೆ ಡೇವಿಸ್ ಕಪ್ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಅನುಭವವನ್ನು ಅವರು ತಮ್ಮ ನಿವೃತ್ತಿ ಘೋಷಣೆಯಲ್ಲಿ ಪ್ರೀತಿಯಿಂದ ಉಲ್ಲೇಖಿಸಿದ್ದಾರೆ.
ಫ್ರೆಂಚ್ ಓಪನ್ ನಲ್ಲಿ ಪ್ರಭುತ್ವ ಸಾಧಿಸಿದ್ದ ಸ್ಪೇನ್ ಆಟಗಾರ ನಡಾಲ್ ಅವರು ಗೆದ್ದ 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳಲ್ಲಿ 14 ಪ್ರಶಸ್ತಿಯನ್ನು ಆವೆ ಮಣ್ಣಿನ ಫ್ರೆಂಚ್ ಅಂಗಳದಲ್ಲಿ ಗೆದ್ದುಕೊಂಡಿದ್ದಾರೆ. ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಆಟಗಾರರಲ್ಲಿ ನಡಾಲ್ ಎರಡನೇ ಸ್ಥಾನದಲ್ಲಿದ್ದಾರೆ.
ನಡಾಲ್ ಅವರು 36 ಮಾಸ್ಟರ್ಸ್ ಪ್ರಶಸ್ತಿಗಳು ಮತ್ತು ಒಲಂಪಿಕ್ ಚಿನ್ನದ ಪದಕ ಸೇರಿದಂತೆ ಒಟ್ಟು 92 ಎಟಿಪಿ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ನಡಾಲ್ ಅವರು ಸಿಂಗಲ್ಸ್ ನಲ್ಲಿ ವೃತ್ತಿಜೀವನದ ಗೋಲ್ಡನ್ ಸ್ಲಾಮ್ ಅನ್ನು ಪೂರ್ಣಗೊಳಿಸಿದ ಮೂವರು ಪುರುಷ ಆಟಗಾರರಲಲಿ ಒಬ್ಬರು ಎಂಬ ಅನನ್ಯ ದಾಖಲೆಯನ್ನು ಹೊಂದಿದ್ದಾರೆ.