Advertisement

ಆಧ್ಯಾತ್ಮಿಕ ಚಿಂತನೆಗೆ ಧಕ್ಕೆ ತರಲು ಎಡರಂಗ ಸರಕಾರ ಯತ್ನ

01:25 AM Feb 16, 2019 | Team Udayavani |

ಕಾಸರಗೋಡು : ಎಡರಂಗ ಸರಕಾರವು ಶಬರಿಮಲೆಗೆ ಯುವತಿಯರನ್ನು ಪ್ರವೇಶಿಸುವಂತೆ ಮಾಡಿ ಕೇರಳದ ಆಧ್ಯಾತ್ಮಿಕ ಚಿಂತನೆಗೆ ಧಕ್ಕೆ ತರಲು ಮುಂದಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್‌ ಆರೋಪಿಸಿದ್ದಾರೆ.

Advertisement

ಶಬರಿಮಲೆ ಸನ್ನಿಧಾನದ ಆಚಾರ ಅನುಷ್ಠಾನಗಳನ್ನು ಬುಡಮೇಲುಗೊಳಿಸಲು ಯತ್ನಿಸುತ್ತಿರುವ ಕೇರಳದ ಪಿಣರಾಯಿ ವಿಜಯನ್‌ ಸರಕಾರದ ಧೋರಣೆಯನ್ನು ಪ್ರತಿಭಟಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ಹೊಸ ಬಸ್‌ ನಿಲ್ದಾಣದ ಪರಿಸರದಲ್ಲಿ ಆಯೋಜಿಸಿದ ಧರಣಿ ಸತ್ಯಾಗ್ರಹದಲ್ಲಿ  ಅವರು ಮಾತನಾಡಿದರು.

ಕೇರಳದಲ್ಲಿ ಕಳೆದ 11 ವರ್ಷಗಳಿಂದ ಭಕ್ತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಇದು ಸಿಪಿಎಂ ಪಕ್ಷವನ್ನು ಸಂಪೂರ್ಣ ವಾಗಿ ನಿದ್ದೆಗೆಡಿಸಿದೆ. ಇದರಿಂದ ಕಂಗೆಟ್ಟ ಕೇರಳದ ಎಡರಂಗ ಸರಕಾರವು ಆಧ್ಯಾತ್ಮಿಕ ಚಿಂತನೆಗೆ ಧಕ್ಕೆ ತರಲು ಯತ್ನಿಸುತ್ತಿದೆ. ಕಳೆದ 15 ವರ್ಷಗಳಲ್ಲಿ ರಾಜ್ಯದಲ್ಲಿ 15000 ದಷ್ಟು ದೇವ ಸ್ಥಾನಗಳು ಪುನರುದ್ಧಾರಗೊಂಡಿವೆ. 

ಇದು ಕೇರಳದ ಜನರಲ್ಲಿ ಆಸ್ತಿಕ ಮನೋಭಾವ ಹೆಚ್ಚುತ್ತಿರು ವುದಕ್ಕೆ ಸಾಕ್ಷಿಯಾಗಿದೆ. ಈಗ ರಾಜ್ಯದ ಎಲ್ಲೆಡೆ ಶ್ರೀ ಕೃಷ್ಣ ಜಯಂತಿ ಆಚರಣೆ, ಗಣೇಶೋತ್ಸವ ಆಚರಣೆ ಇತ್ಯಾದಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ. ಇದು ರಾಜ್ಯದಲ್ಲಿ ಆಧ್ಯಾತ್ಮಿಕ ಹಾಗು ಧಾರ್ಮಿಕ ಮುನ್ನಡೆಯನ್ನು ಎತ್ತಿ ತೋರಿಸುತ್ತಿದೆ. 

ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೆ ನಾಸ್ತಿಕವಾದಕ್ಕೆ  ಪೆಟ್ಟು  ಬಿದ್ದು ಸಿಪಿಎಂ ಪಕ್ಷವು  ನಿರ್ನಾಮಗೊಳ್ಳಲಿದೆ ಎಂಬುದನ್ನು ಮನಗಂಡು ಶಬರಿಮಲೆಗೆ ಯುವತಿಯರು ಪ್ರವೇಶಿಸುವಂತೆ ಮಾಡಿ ಹಿಂದುಗಳ ನಂಬಿಕೆಗಳಿಗೆ ಘಾಸಿ ಯುಂಟು ಮಾಡಿದಾಗ ತಮ್ಮ ಬೇಳೆಯನ್ನು ಬೇಯಿಸಲು ಸಾಧ್ಯವಿದೆ ಎಂಬುದು ಸಿಪಿಎಂನ ಷಡ್ಯಂತ್ರವಾಗಿದೆ.

Advertisement

ಈ ನಿಟ್ಟಿನಲ್ಲಿ ಎಡರಂಗ ಸರಕಾರ ಹಾಗೂ ಆಡಳಿತ ಯಂತ್ರ ಕೂಡ ಕಾರ್ಯವೆಸಗುತ್ತಿದೆ ಎಂದು ಕೆ.ಸುರೇಂದ್ರನ್‌ ಹೇಳಿದರು. ಹಿಂದು ಕ್ಷೇತ್ರಗಳ ಆಸ್ತಿಪಾಸ್ತಿಗಳ ಬಗ್ಗೆ ಹಸ್ತಕ್ಷೇಪ ನಡೆಸುತ್ತಿರುವ ಪಿಣರಾಯಿ ವಿಜಯನ್‌ ಸರಕಾರಕ್ಕೆ ಮುಸ್ಲಿಂ ವಕ್ಫ್ ಮಂಡಳಿಯ ಆಸ್ತಿಗಳ ಬಗ್ಗೆಯಾಗಲಿ ಹಾಗು ಕ್ರಿಶ್ಚಿಯನ್‌ ಸಭಾಗಳು ನಡೆಸುವ ಸಾವಿರ ಕೋಟಿ ರೂ.ಗಳ  ಆಸ್ತಿಗಳ ಬಗ್ಗೆಯಾಗಲಿ ಹಸ್ತಕ್ಷೇಪ ನಡೆಸುವ ಧೈರ್ಯ ಇಲ್ಲ. ಕಾರಣ ಇವೆಲ್ಲಕ್ಕೂ ವೋಟ್‌ ಬ್ಯಾಂಕ್‌ ಪ್ರಮುಖ ಕಾರಣವಾಗಿದೆ. ಆದುದರಿಂದ ಹಿಂದು ಆಚಾರ ಅನುಷ್ಠಾನಗಳಿಗೆ ಧಕ್ಕೆ ತರುವ ಕೇರಳ ಸರಕಾರದ ಧೋರಣೆಯನ್ನು ಪ್ರತಿಭಟಿಸಲು ಪ್ರತಿಯೋರ್ವ ಆಸ್ತಿಕರೂ ಮುಂದೆ ಬರಬೇಕೆಂದು ಅವರು ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್‌ ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ಸುರೇಶ್‌ ಕುಮಾರ್‌ ಶೆಟ್ಟಿ ಪೂಕಟ್ಟೆ, ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next