ಮೈಸೂರು: ಸಮಾಜದಲ್ಲಿ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಉಪ್ಪಾರ ಸಮಾಜ ಸೇರಿದಂತೆ ಇನ್ನಿತರ ಸಮಾಜಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಬದ್ಧತೆ ಬಿಜೆಪಿ ಹೊಂದಿದೆ ಎಂದು ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಹೇಳಿದರು.
ವರುಣಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಉಪ್ಪಾರ ಸಮಾಜದ ಮುಖಂಡರನ್ನು ಸ್ವಾಗತಿಸಿ ಮಾತನಾಡಿದ ಅವರು, ಈ ಹಿಂದೆ ಬಿ.ಎಸ್.ಯಡಿಯೂರಪ್ಪಆಡಳಿತಾವಧಿಯಲ್ಲಿ ಹಿಂದುಳಿದ ಸಮಾಜಗಳ ಅಭಿವೃದ್ಧಿಗೆ ಹಾಗೂ ಈ ಸಮುದಾಯಗಳು ಎಲ್ಲಾ ಕ್ಷೇತ್ರಗಳಲ್ಲಿ ಸಾಮರ್ಥ್ಯ ತೋರುವಂತೆ ಮಾಡಲು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ಉಪ್ಪಾರ ಸಮಾಜ ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ ಎಂಬುದನ್ನು ತಾವು ಅರಿತಿದ್ದು, ಈ ಸಮಾಜಕ್ಕೆ ಸಮರ್ಥ ರಾಜಕೀಯ ನಾಯಕತ್ವ ರೂಪಿಸುವ ಜತೆಗೆ ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಮೇಲೆತ್ತುವ ಜವಾಬ್ದಾರಿ ತಮ್ಮದಾಗಲಿದೆ.
ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಅಸಂಘಟಿತ ಹಿಂದುಳಿದ ಸಮಾಜಗಳನ್ನು ಕಾಂಗ್ರೆಸ್ ಮತಬ್ಯಾಂಕ್ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಮತಬ್ಯಾಂಕ್ ರಾಜಕಾರಣಕ್ಕೆ ಅಂತ್ಯ ಹಾಡಲು ಈ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ. ಹೀಗಾಗಿ ವರುಣಾ ಕ್ಷೇತ್ರದ ಉಪ್ಪಾರ ಸಮಾಜದ ಮುಖಂಡರು ಚುನಾವಣೆಯಲ್ಲಿ ತಮ್ಮ ಕೈಹಿಡಿಯಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆರ್.ರಘು, ಉಪ್ಪಾರ ಸಮಾಜದ ಶಿವಕುಮಾರ್, ಮಹದೇವಶೆಟ್ಟಿ, ಉಪ್ಪಾರ ಯುವ ವೇದಿಕೆಯ ಸೋಮಶೇಖರ್, ಹೆಮ್ಮರಗಾಲ ಸೋಮಣ್ಣ, ತಾಪಂ ಸದಸ್ಯರಾದ ವೆಂಕಟೇಶ್, ಗಿರೀಶ್ ಇನ್ನಿತರರು ಹಾಜರಿದ್ದರು.