Advertisement

ಬೇಡವಾಗಿತ್ತು ಮೈತ್ರಿ

01:34 AM Jun 23, 2019 | Sriram |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸೋಲಿನ ಬಗ್ಗೆ ಮತ್ತೆ ಕೆದಕಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ , ಮೈತ್ರಿ ನಂಬಿ ನಾವೆಲ್ಲಾ ಕೆಟ್ಟು ಹೋದೆವು. ಈ ಮೈತ್ರಿ ಸರ್ಕಾರದ ಬಗ್ಗೆ ರಾಜ್ಯದ ಮತದಾರರಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ ಎಂದು ಬಾಂಬ್‌ ಸಿಡಿಸಿದ್ದಾರೆ.

Advertisement

ಅಷ್ಟೇ ಅಲ್ಲದೆ, ರಾಜ್ಯದ ಯಾವ ಕ್ಷೇತ್ರದಲ್ಲೂ ಮೈತ್ರಿ ಕೆಲಸ ಮಾಡಲಿಲ್ಲ. ಈ ಕಾರಣಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿತು. ರಾಜ್ಯದಲ್ಲಿ ಅಧಿಕಾರ ಹಂಚಿಕೆ, ನೇಮಕಾತಿಗಳಲ್ಲಿ ನಾಯಕರು ಮೇಲುಗೈ ಸಾಧಿಸಿದರೆ ಸಾಲದು, ಕಾರ್ಯಕರ್ತರು ಮೇಲುಗೈ ಸಾಧಿಸಬೇಕು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಎಷ್ಟು ದಿನ ಇರುತ್ತೋ ಎಂಬ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯಿಸಿ, ಅವರು ಒಂದೊಂದು ದಿನ ಒಂದೊಂದು ಹೇಳಿಕೆ ನೀಡುತ್ತಾರೆ. ಅವರ ಬಗ್ಗೆ ಏನೂ ಹೇಳಲಿಕ್ಕೆ ಆಗುವುದಿಲ್ಲ. ನಾವು ಏನಾದರೂ ಹೇಳಿಕೆ ನೀಡಿದರೆ ಅದಕ್ಕೆ ಬದ್ಧರಾಗಿರುತ್ತೇವೆ. ಆದರೆ ಅವರು ಸಮಯ, ಸಂದರ್ಭ ನೋಡಿ ಹೇಳಿಕೆ ಕೊಡುತ್ತಾರೆ. ಅವರು ದೊಡ್ಡವರು ಎಂದು ತಿಳಿಸಿದ್ದಾರೆ.

ಗರಿಗೆದರಿದ ರಾಜಕೀಯ ಚಟುವಟಿಕೆ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಧ್ಯಂತರ ಚುನಾವಣೆ ‘ಬಾಂಬ್‌’ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಶನಿವಾರವೂ ಚಟುವಟಿಕೆಗಳು ಗರಿಗೆದರಿದ್ದವು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆವರು ವಾಸ್ತವ್ಯ ಇರುವ ‘ಕಾವೇರಿ’ ನಿವಾಸಕ್ಕೆ ಸಚಿವರು, ಶಾಸಕರು ಸೇರಿದಂತೆ ಕಾಂಗ್ರೆಸ್‌ ನಾಯಕರು ಭೇಟಿ ನೀಡಿ ಮಾತುಕತೆ ನಡೆಸಿದರು.

Advertisement

ಮೊಯ್ಲಿ ಏನೆಂದರು?: ಚಿಕ್ಕಬಳ್ಳಾಪುರದಲ್ಲಿ ಮಾತ ನಾಡಿದ ವೀರಪ್ಪ ಮೊಯ್ಲಿ , ಮೈತ್ರಿಯಿಂದ ನಮಗೆ ಪೂರ್ಣ ಪ್ರಮಾಣದಲ್ಲಿ ಬೆಂಬಲ ಸಿಗಲಿಲ್ಲ. ಕೆಲ ವೊಂದು ಕಡೆ ನಮ್ಮ ಪಕ್ಷದ ನಾಯಕರು, ಮುಖಂಡರು ಕೂಡ ಕೆಲಸ ಮಾಡಲಿಲ್ಲ ಎಂದು ತಮ್ಮ ಸೋಲಿನ ಬಗ್ಗೆ ಪರಾಮರ್ಶೆ ನಡೆಸಿದರು.

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಸೋಲಿನ ಬಗ್ಗೆ ಪ್ರದೇಶ ಕಾಂಗ್ರೆಸ್‌ ಗಂಭೀರ ಚಿಂತನೆ ನಡೆಸಬೇಕಿದೆ. ವೈಯಕ್ತಿಕವಾಗಿ ನಾನು ಯಾರ ಮೇಲೆಯೂ ಆಪಾದನೆ ಹೊರಿಸಲ್ಲ ಎಂದರು. ಕಾಂಗ್ರೆಸ್‌ ಅಭ್ಯರ್ಥಿ ಗಳ ಸೋಲಿನ ಬಗ್ಗೆ ಪ್ರದೇಶ ಕಾಂಗ್ರೆಸ್‌ ಹಾಗೂ ಎಐಸಿಸಿ ನಿರ್ಣಯ ಮಾಡಬೇಕು ಎಂದರು. ಸಂಪುಟ ವಿಸ್ತರಣೆ, ನಿಗಮ, ಮಂಡಳಿ ನೇಮಕದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆಂದು ಕೇಳಿ ಬರುತ್ತಿರುವ ಮಾತಿನ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಮೊಯ್ಲಿ, ನಾಯಕರು ಮೇಲುಗೈ ಸಾಧಿಸು ತ್ತಿರುವುದರಿಂದಲೇ ಪಕ್ಷ ಈ ರೀತಿ ಹೀನಾಯವಾಗಿ ಸೋಲುತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಆದ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿ ಕೊಳ್ಳದ ಪರಿಣಾಮ ನಾವು ಲೋಕಸಭಾ ಚುನಾ ವಣೆಯಲ್ಲಿ ಸೋತೆವು. ಚುನಾವಣೆಗೆ ಸಿದ್ಧರಾಗದೆ ಮಧ್ಯಂತರ ಚುನಾವಣೆ ಎದುರಾದರೆ ಕಾಂಗ್ರೆಸ್‌ ಗೆಲ್ಲುತ್ತದೆ ಎಂದು ಹೇಗೆ ಹೇಳಲು ಸಾಧ್ಯ ಎಂದು ಪ್ರಶ್ನಿಸಿದರು. ಜತೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಘಟಕದ ವಿಸರ್ಜನೆ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡರು.

ಗೌಡರ ಎಚ್ಚರಿಕೆ
ವೀರಪ್ಪ ಮೊಯ್ಲಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವೇಗೌಡರು, ನಾನು ಆ ಬಗ್ಗೆ ಪ್ರತಿಕ್ರಿಯಿಸಲ್ಲ. ನಾನಾಯಿತು, ನನ್ನ ಪಕ್ಷವಾಯಿತು, ನಾನು ಯಾರನ್ನೂ ಕೇಳಿ ಮಾತಾಡಬೇಕಿಲ್ಲ ಎಂದು ಖಾರವಾಗಿಯೇ ಹೇಳಿದ್ದಾರೆ. ಜತೆಗೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸೇರಿ ಎರಡೂ ಪಕ್ಷ ಹೊಂದಿಕೊಂಡು ಹೋದರೆ ಮಾತ್ರ ನಾಲ್ಕು ವರ್ಷದ ಬಳಿಕ ಚುನಾವಣೆ ನಡೆಯುತ್ತದೆ. ಹೊಂದಾಣಿಕೆಯಾಗದಿದ್ದರೆ ಕಷ್ಟವಾಗಬಹುದು ಎಂದು ಹೇಳುವ ಮೂಲಕ ಮಿತ್ರ ಪಕ್ಷ ಕಾಂಗ್ರೆಸ್‌ಗೆ ಮತ್ತೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ದೇವೇಗೌಡರಿಗೆ ಮತ್ತು ಸಿದ್ದರಾಮಯ್ಯನವರಿಗೆ ಒಬ್ಬರ ಮೇಲೊಬ್ಬರಿಗೆ ನಂಬಿಕೆ ಇಲ್ಲ. ಆದ್ದರಿಂದ ಈ ಎರಡೂ ಪಕ್ಷಗಳ ದೋಸ್ತಿ ಬಹಳ ದಿನ ಉಳಿಯುವುದಿಲ್ಲ. ಶೀಘ್ರದಲ್ಲಿ ಮೈತ್ರಿ ಮುರಿದು ಬೀಳಲಿದೆ.
-ಮುರಳೀಧರ ರಾವ್‌, ರಾಜ್ಯ ಬಿಜೆಪಿ ಉಸ್ತುವಾರಿ
ಗೌಡರ ಎಚ್ಚರಿಕೆ

 

Advertisement

Udayavani is now on Telegram. Click here to join our channel and stay updated with the latest news.

Next