Advertisement

ಶೈಕ್ಷಣಿಕ ಕ್ರಾಂತಿ-ಬದಲಾವಣೆಗೆ ನಾಂದಿ

10:49 AM Feb 15, 2022 | Team Udayavani |

ಆಳಂದ: ಜನಪರ ಹೋರಾಟ, ಶಿಕ್ಷಣ, ಸಾಹಿತ್ಯ, ರಾಜಕೀಯ, ಕೃಷಿ ಹೀಗೆ ಹಲವು ಕ್ಷೇತ್ರಗಳಲ್ಲಿ ರಾಜ್ಯದ ಗಮನ ಸೆಳೆದ ತಾಲೂಕು ಕೇಂದ್ರೀಯ ವಿವಿ ಸೇರಿದಂತೆ ಹಲವಾರು ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜು, ವೃತ್ತಿಪರ ಕೋರ್ಸ್‌ಗಳನ್ನು ತೆರೆದುಕೊಂಡು ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳ ಬಾಳು ಬೆಳಗಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದೆ.

Advertisement

ಇದರಿಂದಾಗಿ ಈ ಸಂಸ್ಥೆಗಳಲ್ಲಿ ನೂರಾರು ಸಿಬ್ಬಂದಿ ಬದುಕು ಕಟ್ಟಿಕೊಂಡಿದ್ದಾರೆ. ಮೂರು ದಶಕಗಳಲ್ಲಿ ಶಾಸಕ ಸುಭಾಷ ಗುತ್ತೇದಾರ, ಮಾಜಿ ಶಾಸಕ ಬಿ.ಆರ್‌. ಪಾಟೀಲ ಅವರ ಪರಸ್ಪರ ರಾಜಕೀಯ ಸಂಘರ್ಷದ ನಡುವೆಯೂ ಇಬ್ಬರು ಶೈಕ್ಷಣಿಕ ಕ್ರಾಂತಿಗೆ ಅಪಾರ ಕೊಡುಗೆ ನೀಡಿದ್ದಾರೆ. ರಾಜಕೀಯ ಜೊತೆಗೆ ಎಲ್‌ ಕೆಜಿಯಿಂದ ಪದವಿ, ವೃತ್ತಿಪರ ಕೋರ್ಸ್‌ಗಳ ವರೆಗೆ ಶಿಕ್ಷಣ ಕೇಂದ್ರಗಳನ್ನು ತೆರೆದಿದ್ದಾರೆ. ಇವರಲ್ಲದೇ ಅನೇಕರು ಸಹ ಶಿಕ್ಷಣ ಸಂಸ್ಥೆ ಕಟ್ಟುವ ಮೂಲಕ ಸರ್ಕಾರಿ ಶಾಲೆ, ಕಾಲೇಜು ಶಿಕ್ಷಣ ಸಂಸ್ಥೆಗಳೊಂದಿಗೆ ಖಾಸಗಿಯಾಗಿಯೂ ಕೈಗೊಂಡ ಶೈಕ್ಷಣಿಕ ಪೈಪೋಟಿಯಿಂದಾಗಿ ಕ್ರಾಂತಿಯಾಗಿ ಲಕ್ಷಾಂತರ ವಿದ್ಯಾಥಿಗಳು ಮತ್ತು ಸಂಸ್ಥೆಗಳಲ್ಲಿ ದುಡಿಯುವ ಸಾವಿರಾರು ಸಿಬ್ಬಂದಿ ಬದುಕು ನಿರ್ವಹಿಸುವಂತಾಗಿದೆ.

ಹಲವಾರು ಮಠಗಳಿಂದ ಶಿಕ್ಷಣ ಸಂಸ್ಥೆಗಳು ತಲೆಎತ್ತಿವೆ. ಕಡಗಂಚಿ ಹತ್ತಿರದ ಮೌಂಟ್‌ ಕಾರ್ಮೇಲ್‌ನಂತ ಸಂಸ್ಥೆಗಳು ಶಿಕ್ಷಣ ನೀಡುತ್ತಿವೆ. ಕಡಗಂಚಿ ಬಳಿ ಸ್ಥಾಪಿತವಾದ ಕೇಂದ್ರೀಯ ವಿಶ್ವವಿದ್ಯಾಲಯ, ಖಾಸಗಿ ಐಟಿಐ ಕಾಲೇಜುಗಳು, ಬಿಇಡಿ, ನರ್ಸಿಂಗ್‌, ಆಯುರ್ವೇದ, ಡಿಫಾರ್ಮಸಿಯಂತ ಕೋರ್ಸ್‍ಗಳ ಕಲಿಕೆಗೆ ಸ್ಥಳೀಯವಾಗಿ ಲಭ್ಯವಾಗುತ್ತಿದ್ದ ಅನುಕೂಲ ತಂದಿದೆ. ಮೊರಾರ್ಜಿ ದೇಸಾಯಿ, ಕಿತ್ತೂರಾಣಿ ಚನ್ನಮ್ಮ ವಸತಿ ಶಾಲೆ, ಆದರ್ಶ ಆಂಗ್ಲಶಾಲೆ, ಆಶ್ರಮ ಶಾಲೆಗಳು ಇಲ್ಲಿವೆ. ಜತೆಗೆ ಗ್ರಾಮೀಣದಲ್ಲೂ ಸರ್ಕಾರಿ ಶಾಲೆಯೊಂದಿಗೆ ಅನೇಕರ ಖಾಸಗಿ ಶಿಕ್ಷಣ ಸಂಸ್ಥೆಗಳು ಕಲಿಕೆಗೆ ಪೂರಕವಾಗಿವೆ.

ಸಾಧನೆ ಸಾಕಷ್ಟು

ತಾಲೂಕಿನಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಾಧನೆ ಸಾಕಷ್ಟಿದ್ದರೂ ಸಾಧಿಸಬೇಕಾಗಿರುವುದು ಬಹಳಷ್ಟಿದೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ಶಿಕ್ಷಣ ಸಂಸ್ಥೆಗಳು ಸ್ಥಳೀಯ ಮಟ್ಟದಲ್ಲಿ ಕನ್ನಡ, ಆಂಗ್ಲ, ಉರ್ದು, ಮರಾಠಿ ಭಾಷಿಕರ ಶಾಲೆಗಳು ಇರುವುದರಿಂದ ಸಾವಿರಾರು ವಿದ್ಯಾರ್ಥಿಗಳ ಉನ್ನತ ಭವಿಷ್ಯ ಕಟ್ಟಿಕೊಂಡಿದ್ದಾರೆ.

Advertisement

ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಎಲ್‌ ಕೆಜಿಯಿಂದ ಎಸ್ಸೆಸ್ಸೆಲ್ಸಿ ವರೆಗೆ ಖಾಸಗಿ ಮತ್ತು ಸರ್ಕಾರಿ ಒಟ್ಟು 452 ಶಾಲೆಗಳಲ್ಲಿ 62364 ಮಕ್ಕಳು ಓದುತ್ತಿದ್ದಾರೆ. ಇದರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 96, ಹಿರಿಯ ಪ್ರಾಥಮಿಕ ಶಾಲೆ 162, ಪ್ರೌಢಶಾಲೆಗಳು 48 ಸೇರಿ ಹೀಗೆ ಒಟ್ಟು 306 ಶಾಲೆಗಳಿವೆ. ಸರ್ಕಾರಿ ವಸತಿ ಶಾಲೆಗಳು ಐದು ಇವೆ. ಅಲ್ಲದೇ, ಖಾಸಗಿ ಅನುದಾನಿತ 11 ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ 19 ಶಾಲೆ, ಅನುದಾನ ರಹಿತ ಖಾಸಗಿ ಪ್ರೌಢ, ಹಿರಿಯ ಕಿರಿಯ ಶಾಲೆಗಳು ಒಳಗೊಂಡಿವೆ. ಅಲ್ಲದೆ, ಸರ್ಕಾರದ 13 ಪಿಯು ಕಾಲೇಜು, ಸರ್ಕಾರದ ಆಳಂದ-ಮಾದನಹಿಪ್ಪರಗಾ ಮಹಾವಿದ್ಯಾಲಯ 2, ಖಾಸಗಿ ಪದವಿ ಮಹಾವಿದ್ಯಾಯಲಯ 3, ಒಂದು ಪಿಜಿ ಸೆಂಟರ್‌ ಮುಕ್ತ ಶಿಕ್ಷಣ ಕೇಂದ್ರಗಳ ಶಾಖೆಗಳು ಇಲ್ಲಿವೆ. ಅಲ್ಲದೆ, ಸರ್ಕಾರದ ಕೇಂದ್ರೀಯ ವಿದ್ಯಾಲಯ, ಡಿಪ್ಲೋಮಾ ಕಾಲೇಜಿಗಳಿಗೂ ಪ್ರಸ್ತಾವನೆಯಿದೆ ಎನ್ನುತ್ತಾರೆ ಈಚೆಗಷ್ಟೇ ನಿವೃತ್ತಿಯಾದ ಪ್ರೌಢಶಾಲೆ ಶಿಕ್ಷಕ ಶ್ರೀಮಂತ ಜಿಡ್ಡೆ.

ಎಚ್‌ಕೆಇ ಮೊದಲು ಪದವಿ ಕಾಲೇಜು

1980ರಲ್ಲಿ ಎಚ್‌ಕೆಇ ಪದವಿ ಕಾಲೇಜು ಮೊದಲು ಆರಂಭಗೊಂಡಿದ್ದು ವಿಶೇಷವಾಗಿ ಹೆಣ್ಣುಮಕ್ಕಳಿಗೆ. ಆನಂತರ ಯುವಕರಿಗೂ ಅನುಕೂಲ ಕಲ್ಪಿಸಿತು. ಹೆಚ್ಚಾಗಿ ಸಾಮಾಜಿಕ ಮತ್ತು ಪ್ರಗತಿಪರ ಚಳವಳಿಗಳ ತವರು ಮಹಾರಾಷ್ಟ್ರದ ಗಡಿ ಹೊಂದಿಕೊಂಡಿದ್ದ ತಾಲೂಕು ಇದಾಗಿದ್ದರಿಂದ ಇಲ್ಲಿನವರಿಗೆ ಪ್ರೇರಣೆಯಾಗಿ ಶೈಕ್ಷಣಿಕ, ಹೋರಾಟ ಮತ್ತು ಸಾಮರಸ್ಯದಲ್ಲಿ ಮುನ್ನೆಡೆ ಪಡೆಯಲು ಸಾಧ್ಯವಾಗಿದೆ. 70ಕ್ಕೂ ಹೆಚ್ಚು ಮಂದಿ ಪಿಎಚ್‌ಡಿ ಪಡೆದಿದ್ದು, ಒಬ್ಬರು ಕುಲಪತಿ, ಐಎಎಸ್‌, ಐಪಿಎಸ್‌, ಉಪನ್ಯಾಸಕರು, ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್‌, ಐಪಿಎಸ್‌, ಡಿವೈಎಸ್‌ಪಿ, ಪಿಎಸ್‌ಐ ಸೇರಿದಂತೆ ಸಣ್ಣ ಹಾಗೂ ದೊಡ್ಡ ಮಟ್ಟದ ಅನೇಕ ಹುದ್ದೆಗಳನ್ನು ನೀಡಿದ್ದು ಆಳಂದ ತಾಲೂಕು ಎನ್ನುವುದು ಹೆಮ್ಮೆಯ ವಿಷಯ.

ಶೂನ್ಯದಿಂದ ಸಾಧನೆ

ದೇಶಕ್ಕೆ ಸ್ವಾತಂತ್ರ್ಯ 1947ರಲ್ಲಾದರೆ 1950ರಲ್ಲಿ ಸಂವಿಧಾನ ಜಾರಿಗೆ ಬಂತು. ಬಳಿಕ 1952ರಲ್ಲಿ ಚುನಾವಣೆ ನಡೆದು ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ 1956ರಲ್ಲಿ ಭಾಷಾವಾರು ಪ್ರಾಂತ ರಚನೆಯಾಗಿ ಮೈಸೂರು ರಾಜ್ಯ ಸ್ಥಾಪನೆಯಾಗಿ 1973ರಲ್ಲಿ ಕರ್ನಾಟಕವೆಂದು ನಾಮಕರಣವಾದ ಮೇಲೆ 1956ರ ನಂತರ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕನ್ನಡ ಶಾಲೆಗಳು ತೆರೆದವು. ಇದಕ್ಕೂ ಮೊದಲು ಉರ್ದು, ಮರಾಠಿ ಶಾಲೆಗಳಲ್ಲೇ ಮಕ್ಕಳು ಕಲಿಯುತ್ತಿದ್ದರು. ಗಡಿಯಲ್ಲಿದ್ದವರು ಮರಾಠಿ, ಕನ್ನಡ ಮಾತಾಡಿದರೆ, ನೌಕರಿಗಾಗಿ ಮರಾಠಿ ಶಿಕ್ಷಣವನ್ನೇ ಅವಲಂಬಿಸಿದ್ದರು. ಕ್ರಮೇಣವಾಗಿ ಕನ್ನಡ ಶಾಲೆಗಳನ್ನು ತೆರೆದ ಮೇಲೆ ಪ್ರಗತಿಗೆ ಚಾಲನೆ ಶುರವಾಗಿದ್ದು, ಈಗಲೂ ಬೃಹತ್‌ ಪ್ರಮಾಣದಲ್ಲಿ ಶೈಕ್ಷಣಿಕ ಕ್ರಾಂತಿ ಉಂಟಾಗಿದೆ. -ಡಾ| ಪ್ರಭು ಖಾನಾಪುರೆ, ಹಿರಿಯ ಬಂಡಾಯ ಸಾಹಿತಿ, ಕಲಬುರಗಿ

-ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next