Advertisement

ಜುಲೈ ಕೊನೇ ವಾರದಲ್ಲಿ ಮೈಷುಗರ್‌ ಆರಂಭ ಖಚಿತ

06:17 PM Jun 09, 2022 | Team Udayavani |

ಮಂಡ್ಯ: ಜುಲೈ ಕೊನೇ ವಾರದಲ್ಲಿ ಕಾರ್ಖಾನೆ ಆರಂಭ ಮಾಡುವುದು ಖಚಿತವಾಗಿದ್ದು, ಯಂತ್ರಗಳ ದುರಸ್ತಿ ಕಾರ್ಯ ಭರದಿಂದ ಸಾಗಿದೆ ಎಂದು ಮೈಷುಗರ್‌ ವ್ಯವಸ್ಥಾಪಕ ಪಾಟೀಲ ಅಪ್ಪಾಸಾಹೇಬ್‌ ಭರವಸೆ ನೀಡಿದರು. ನಗರದ ಮೈಷುಗರ್‌ ಕಾರ್ಖಾನೆ ದುರಸ್ತಿ ಕಾರ್ಯ ಪರಿಶೀಲಿಸಲು ಆಗಮಿಸಿದ್ದ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

Advertisement

15 ಕೋಟಿ ರೂ. ಬಿಡುಗಡೆ: ಮೊದಲ ಹಂತದಲ್ಲಿ ಸರ್ಕಾರದಿಂದ ಈಗಾಗಲೇ 15 ಕೋಟಿ ರೂ. ಬಿಡುಗಡೆಯಾಗಿದೆ. ಅದರಲ್ಲಿ 3.5 ಕೋಟಿ ರೂ. ಖಾತೆಗೆ ಜಮೆ ಆಗಿದ್ದು, ಉಳಿದ ಹಣ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ 2.80 ಕೋಟಿ ರೂ. ದುರಸ್ತಿ ಕಾರ್ಯಗಳಿಗೆ ನೀಡಲಾಗಿದೆ.

ಇನ್ನು ಶೇ.20 ಹಣವನ್ನು 2ನೇ ಕಂತಿನಲ್ಲಿ ನೀಡಬೇಕಾಗಿತ್ತು. ಅದಕ್ಕಾಗಿ 5 ಕೋಟಿ ರೂ. ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜುಲೈ ತಿಂಗಳಲ್ಲಿ ಪ್ರಾಯೋಗಿಕವಾಗಿ ಕಾರ್ಖಾನೆ ಯಂತ್ರಗಳ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

5 ಲಕ್ಷ ಟನ್‌ ಕಬ್ಬು ಅರೆಯುವ ಗುರಿ: ಪ್ರಸ್ತುತ ಸಾಲಿನಲ್ಲಿ 5 ಲಕ್ಷ ಟನ್‌ ಕಬ್ಬು ಅರೆಯುವ ಗುರಿ ಹೊಂದಲಾಗಿದೆ. ಮೈಷುಗರ್‌ ವ್ಯಾಪ್ತಿಯಲ್ಲಿ ಸುಮಾರು 7ರಿಂದ 8 ಟನ್‌ ಕಬ್ಬು ಲಭ್ಯವಿದೆ. ಈಗಾಗಲೇ 1.50 ಲಕ್ಷ ಟನ್‌ ಕಬ್ಬನ್ನು ರೈತರಿಂದ ಒಪ್ಪಿಗೆ ಮಾಡಿಕೊಳ್ಳಲಾಗಿದೆ. ಪ್ರತಿದಿನ 4500 ಟನ್‌ ಕಬ್ಬು ಅರೆಯಲಿದ್ದು, ಪ್ರತಿ ತಿಂಗಳು 1 ಲಕ್ಷ ಟನ್‌ ಕಬ್ಬು ಅರೆಯುವ ಗುರಿ ಇದೆ. ಅದರಂತೆ ಫೆಬ್ರವರಿ ತಿಂಗಳವರೆಗೂ ಕಾರ್ಖಾನೆ ನಡೆಯಲಿದೆ ಎಂದು ವಿವರಿಸಿದರು.

ಖಾಸಗಿ ಕಾರ್ಖಾನೆಗಳ ಕಚೇರಿ ತೆರವಿಗೆ ಸೂಚನೆ: ಖಾಸಗಿ ಕಾರ್ಖಾನೆಗಳು ಕಚೇರಿ ತೆರೆದು ಕಬ್ಬು ಒಪ್ಪಿಗೆ ಮಾಡಿಕೊಳ್ಳಲು ಗ್ಯಾಂಗ್‌ಮೆನ್‌ ನೇಮಕ ಮಾಡಿದ್ದವು. ಈ ಬಗ್ಗೆ ಜಿಲ್ಲಾ ಧಿಕಾರಿಗೆ ದೂರು ನೀಡಿದ್ದೆವು. ಜಿಲ್ಲಾಧಿಕಾರಿ ಖಾಸಗಿ ಕಾರ್ಖಾನೆಗಳು ಕಚೇರಿ ತೆರವುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ. ಇದರಿಂದ ನಮ್ಮ ಕಬ್ಬು ಕಾರ್ಖಾನೆಗೆ ಸಿಗಲಿದೆ. 15ರಿಂದ 20 ಮಂದಿ ಗ್ಯಾಂಗ್‌ಮೆನ್‌ ನೇಮಕ ಮಾಡಿ ಕೊಳ್ಳಲಾಗಿದ್ದು, ಒಪ್ಪಿಗೆ ಕಾರ್ಯ ಮುಂದುವರಿದಿದೆ. ಬೇಗ
ಆರಂಭಗೊಂಡರೆ ಇನ್ನುಳಿದ 2 ಲಕ್ಷ ಟನ್‌ ಕಬ್ಬು ಅರೆಯಲಿದ್ದು, ಸಂಪೂರ್ಣ ಗುರಿ ಮುಟ್ಟಲು ಸಾಧ್ಯವಾಗಲಿದೆ ಎಂದರು.

Advertisement

200 ಮಂದಿ ಕಾರ್ಮಿಕರು: ಪುಣೆ ಹಾಗೂ ಹೈದರಾಬಾದ್‌ನ ಎರಡು ಕಂಪನಿಗಳಿಂದ ಈಗಾಗಲೇ ಯಂತ್ರಗಳ ದುರಸ್ತಿ ಭರದಿಂದ ಸಾಗಿದೆ. 200 ಮಂದಿ ಕಾರ್ಮಿಕರ ಅಗತ್ಯವಿದೆ. ಈಗಾಗಲೇ 100 ಮಂದಿ ಕಾರ್ಮಿಕರು ಆಗಮಿಸಿದ್ದು, ಶನಿವಾರದೊಳಗೆ ಇನ್ನು ಳಿದ 100 ಮಂದಿ ಕಾರ್ಮಿಕರು ಆಗಮಿಸಲಿದ್ದಾರೆ. ಎಲ್ಲಾ ಕಾರ್ಮಿಕರಿಗೂ ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

ಬಾಕಿ ತೀರುವಳಿಗೆ ಸೂಚನೆ: ಸರ್ಕಾರ ಘೋಷಣೆ ಮಾಡಿರುವ 50 ಕೋಟಿ ರೂ. ಅನುದಾನದಲ್ಲಿ ಕಾರ್ಖಾ ನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೌಕರರಲ್ಲಿ ವಿಆರ್‌ ಎಸ್‌ ತೆಗೆದುಕೊಂಡ ನೌಕರರಿಗೆ ಬಾಕಿ ಉಳಿದಿರುವ 3.9 ಕೋಟಿ ರೂ. ತೀರುವಳಿ ಮಾಡಬೇಕಾಗಿದೆ. ಇನ್ನುಳಿದ ಅನುದಾನದಲ್ಲಿ ಕಾರ್ಖಾನೆ ಆರಂಭಿಸುವ ಸರ್ಕಾರದ ಆದೇಶದ ಇದೆ ಎಂದು ತಿಳಿಸಿದರು.

ಸಭೆಯಲ್ಲಿ ಮೈಷುಗರ್‌ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್‌.ಕೃಷ್ಣಶಂಭೂನಹಳ್ಳಿ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌, ರೈತ ಮುಖಂಡ ಮುದ್ದೇಗೌಡ, ಕನ್ನಡ ಸೇನೆ ಸಂಘಟನೆ ಮಂಜುನಾಥ್‌, ಸಿಐಟಿಯು ಸಿ.ಕುಮಾರಿ, ಕೃಷಿ ಪ್ರಾಂತ ರೈತಸಂಘದ ಟಿ.ಎಲ್‌.ಕೃಷ್ಣೇಗೌಡ, ಟಿ.ಯಶವಂತ, ಕೃಷಿ ಕೂಲಿಕಾರರ ಸಂಘದ ಪುಟ್ಟಮಾಧು, ದಸಂಸ ಮುಖಂಡ ಎಂ.ವಿ.ಕೃಷ್ಣ ಮತ್ತಿತರರಿದ್ದರು.

ಸರ್ಕಾರದಿಂದಲೇ ದೂರು ದಾಖಲಿಸಲು ಕ್ರಮ
ಕಾರ್ಖಾನೆಯಲ್ಲಿ 121 ಕೋಟಿ ರೂ. ಅವ್ಯವಹಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಅಧ್ಯಕ್ಷರಾಗಿದ್ದ ನಾಗರಾಜಪ್ಪ ವಿರುದ್ಧ ದೂರು ದಾಖಲಿಸುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವ ಆದೇಶಕ್ಕೆ ಸರ್ಕಾರದಿಂದಲೇ ದೂರು ದಾಖಲಿಸಲು ಕ್ರಮ ವಹಿಸಲಾಗಿದೆ. ಇಲ್ಲಿ ದೂರು ದಾಖಲಿಸಿದರೆ ಪ್ರಭಾವ ಬೀರುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರದ ಮಟ್ಟದಲ್ಲೇ ದೂರು ದಾಖಲಿಸಿ 121 ಕೋಟಿ ರೂ.ಗೆ ಶೇ.18 ಬಡ್ಡಿ ವಸೂಲಿ ಮಾಡಲು ಕ್ರಮ ವಹಿಸಲಾಗುವುದು ಎಂದು ಎಂಡಿ ಪಾಟೀಲ ಅಪ್ಪಾಸಾಹೇಬ ಸಂಘಟನೆಗಳ ಮುಖಂಡರಿಗೆ ಪ್ರಕರಣದ ಸಂಬಂಧ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌.ಕೃಷ್ಣಶಂಭೂನಹಳ್ಳಿ ಸರ್ಕಾರ ಮಟ್ಟದಲ್ಲಿಯೇ ಪ್ರಕರಣ ದಾಖಲಾದರೆ ಅದಕ್ಕೆ ಅಗತ್ಯ ದಾಖಲಾತಿ ಹಾಗೂ ನಮ್ಮ ಕಡೆಯಿಂದಲೂ ಮತ್ತೂಂದು ಪ್ರಕರಣ ದಾಖಲಿಸಲಾಗುವುದು ಎಂದು “ಉದಯವಾಣಿ’ಗೆ ತಿಳಿಸಿದರು.

ದುರಸ್ತಿ ಪರಿಶೀಲಿಸಿದ ಸಂಘಟನೆಗಳು ಜುಲೈನಲ್ಲಿ ಕಾರ್ಖಾನೆ ಆರಂಭಿಸುವ ಬಗ್ಗೆ ತಿಳಿಸಲಾಗಿತ್ತು. ಅದರಂತೆ ಕೆಲಸ ನಡೆಯುತ್ತಿವೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲು ವಿವಿಧ ಸಂಘಟನೆಗಳ ಮುಖಂಡರು ಬುಧವಾರ ಕಾರ್ಖಾನೆಗೆ ಭೇಟಿ ನೀಡಿದರು. ಕಾರ್ಖಾನೆಯ ಎಲ್ಲಾ ವಿಭಾಗಗಳಿಗೂ ತೆರಳಿ ದುರಸ್ತಿ ಕಾರ್ಯದ ಮಾಹಿತಿ ಪಡೆದರು.

ಸರ್ಕಾರದಿಂದ ಬಿಡುಗಡೆಯಾಗುವ 50 ಕೋಟಿ ರೂ. ಅನುದಾನ ಸಂಪೂರ್ಣ ಕಾರ್ಖಾನೆ ಅಭಿವೃದ್ಧಿಗೆ ಬಳಕೆಯಾಗಬೇಕು. ಜತೆಗೆ ನಿಗದಿಪಡಿಸಿರುವ ದಿನಾಂಕದಂದು ಕಾರ್ಖಾನೆ ಆರಂಭವಾಗಬೇಕು.
ಸುನಂದಜಯರಾಂ,
ರೈತನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next