“ನರಗುಂದ ಬಂಡಾಯ’ ಎಂಬ ಸಿನಿಮಾವೊಂದು ಸೆಟ್ಟೇರಿರುವ ವಿಚಾರ ನಿಮಗೆ ಗೊತ್ತೇ ಇದೆ. ಉತ್ತರ ಕರ್ನಾಟಕದಲ್ಲಿ ನಡೆದ ಬಹುದೊಡ್ಡ ಬಂಡಾಯ ಇದಾಗಿದ್ದು, ಆ ಅಂಶವನ್ನಿಟ್ಟುಕೊಂಡು ಈ ಸಿನಿಮಾ ಮಾಡಲು ಚಿತ್ರತಂಡ ಹೊರಟಿತ್ತು. ಸಿದ್ಧೇಶ್ ವಿರಕ್ತಮಠ ಅವರ ಕಥೆ, ನಿರ್ಮಾಣದ ಈ ಚಿತ್ರವನ್ನು ನಾಗೇಂದ್ರ ಮಾಗಡಿಯವರು ನಿರ್ದೇಶಿಸಲು ಹೊರಟಿದ್ದರು. ಈಗ ಬಹುತೇಕ ಚಿತ್ರೀಕರಣ ಮುಗಿದಿದ್ದು, ಚಿತ್ರತಂಡ ಖುಷಿಯಾಗಿದೆ.
ಖುಷಿಗೆ ಕಾರಣ ಸಿನಿಮಾ ಅಂದುಕೊಂಡಂತೆ ಮೂಡಿಬಂದಿರೋದು. “ಈ ಸಿನಿಮಾ ಆಗಲು ಮುಖ್ಯ ಕಾರಣ ನಿರ್ಮಾಪಕರ ಸಿನಿಮಾ ಪ್ರೀತಿ. ಅವರು ಆ ನೆಲದವರು. ಬಂಡಾಯವನ್ನು ಕಣ್ಣಾರೆ ಕಂಡವರು. ಆ ಕಥೆ ಮಾಡಿಕೊಂಡು ಸಿನಿಮಾ ಮಾಡಬೇಕೆಂಬ ಆಸೆಯಿಂದ ಬೆಂಗಳೂರಿಗೆ ಬಂದವರು. ಈಗ ಅವರ ಆಸೆ ಈಡೇರಿದೆ. ಸಿನಿಮಾ ಆರಂಭವಾಗಿ ಸಾಂಗವಾಗಿ ಸಾಗುತ್ತಿದೆ. ನಿರ್ಮಾಪಕರಿಗೆ ಮತ್ತೂಬ್ಬ ಸಿನಿಮಾ ಪ್ರೇಮಿ ಶೇಖರ್ ಯಲುವಿಗಿ ಸಾಥ್ ನೀಡಿದ್ದಾರೆ.
ಚಿತ್ರದ ವಿತರಣೆಯನ್ನು ಪಡೆದುಕೊಂಡು ನಿರ್ಮಾಣದಲ್ಲೂ ಸಾಥ್ ನೀಡಿದ್ದಾರೆ. ಇಲ್ಲಿವರೆಗೆ ಶೇ.75 ರಷ್ಟು ಭಾಗ ಚಿತ್ರೀಕರಣ, ಇನ್ನು 22 ದಿನ ಚಿತ್ರೀಕರಣ ಬಾಕಿ ಇದೆ’ ಎಂದು ಚಿತ್ರದ ಬಗ್ಗೆ ವಿವರ ಕೊಟ್ಟರು ನಾಗೇಂದ್ರ ಮಾಗಡಿ. ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಸಿದ್ಧೇಶ ವಿರಕ್ತಮಠ ಅವರಿಗೆ ತಮ್ಮ ಕನಸು ಈಡೇರುತ್ತಿರುವ ಖುಷಿ. ಕಥೆ ಹಿಡಿದುಕೊಂಡು ಸುಮಾರು ಎಂಟು ವರ್ಷ ಬೆಂಗಳೂರು ಸುತ್ತಿದರಂತೆ.
ಆದರೆ, ಯಾರೂ ಕೂಡಾ ಸಮರ್ಪಕವಾಗಿ ಸ್ಪಂದಿಸದ ಕಾರಣ, ಇಷ್ಟು ಸಮಯ ಅವರ ಆಸೆ ಈಡೇರಲಿಲ್ಲವಂತೆ. ಆದರೆ, ನಿರ್ದೇಶಕ ಮಾಗಡಿ ಪಾಂಡು ಅವರು, ಕಥೆ ಕೇಳಿ ಆಸಕ್ತರಾಗಿ ಒಳ್ಳೆಯ ತಂಡದೊಂದಿಗೆ ಈ ಸಿನಿಮಾ ಮಾಡಿಕೊಡಲು ಮುಂದಾದರು. ಅದರಂತೆ ಈಗ ಸಿನಿಮಾ ಮಾಡಿದ್ದಾರೆ. ತುಂಬಾ ಅಚ್ಚುಕಟ್ಟು ನಿರ್ದೇಶಕ. ತಮ್ಮ ಕಲ್ಪನೆಗೆ ತಕ್ಕಂತೆ ಸಿನಿಮಾ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರದಲ್ಲಿ ರಕ್ಷಿತ್ ಹಾಗೂ ಶುಭಾ ಪೂಂಜಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ರಕ್ಷಿತ್‌ಗೆ ಈ ಸಿನಿಮಾ ಮೂಲಕ ಹೀರೋ ಆಗಿ ಲಾಂಚ್ ಆಗುತ್ತಿರುವ ಖುಷಿ ಇದೆಯಂತೆ. ಇಂದಿನ ಯುವ ಪೀಳಿಗೆ ತಿಳಿದುಕೊಳ್ಳಬೇಕಾದ ಕಥೆ ಎಂಬುದು ಅವರ ಮಾತು. ಶುಭಾ ಪೂಂಜಾಗೆ ಇಲ್ಲಿ ತೊಡೆ ತಟ್ಟಿ ನಿಲ್ಲುವಂತಹ ಪಾತ್ರ ಸಿಕ್ಕಿದೆಯಂತೆ. ಉಳಿದಂತೆ ಚಿತ್ರದಲ್ಲಿ ನಟಿಸಿದ ಸುರೇಶ್ ರೈ, ಅಶ್ವತ್ಥ್, ಗಂಗಾಧರಯ್ಯ, ಸಂಭಾಷಣೆಕಾರ ಕೇಶಾವಾದಿತ್ಯ ಸೇರಿದಂತೆ ಚಿತ್ರತಂಡವರು ತಮ್ಮ ಅನುಭವ ಹಂಚಿಕೊಂಡರು.