ಕಾಂಗ್ರೆಸ್-ಜೆಡಿಎಸ್ ಶಾಸಕರ ಸಾಮೂಹಿಕ ರಾಜೀನಾಮೆ ದೋಸ್ತಿ ಸರ್ಕಾರವನ್ನು ತಲ್ಲಣಕ್ಕೀಡು ಮಾಡಿದ್ದು, ಸರ್ಕಾರದ ಭವಿಷ್ಯ ಕೊನೆಯ ಘಟ್ಟಕ್ಕೆ ಬಂದಿದೆ. ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದ ಪಕ್ಷೇತರರಾದ ಆರ್.ಶಂಕರ್ ಹಾಗೂ ಎಚ್.ನಾಗೇಶ್ ಸೋಮವಾರ ಬಿಜೆಪಿಗೆ ಬೆಂಬಲ ಘೋಷಿಸಿದ್ದು ರಾಜಕೀಯ ಪಲ್ಲಟಗಳಿಗೆ ಕಾರಣವಾಗಿದೆ. ಸರ್ಕಾರ ರಚನೆಗೆ ಅಗತ್ಯ “ಮ್ಯಾಜಿಕ್ ಸಂಖ್ಯೆ’ ತಲುಪಿದ್ದರಿಂದ ಬಿಜೆಪಿಯಲ್ಲಿ ಚಟುವಟಿಕೆಗೆ ಗರಿಗೆದರಿದೆ. ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕಸರತ್ತಿನ ನಡುವೆಯೇ, ಸಿಎಂ ಕುಮಾರಸ್ವಾಮಿ ಖಡಕ್ ಎಚ್ಚರಿಕೆ, ಅತೃಪ್ತರಿಗೆ ಮಂತ್ರಿಗಿರಿ ಆಫರ್, ಸಚಿವರಿಂದ ರಾಜೀನಾಮೆಯಂತಹ ಬೆಳವಣಿಗೆಗಳು ಮುಂದುವರಿದಿವೆ…
ಮೈತ್ರಿ ಸರ್ಕಾರದ ವಿರುದ್ಧ ಪ್ರತಿಭಟನೆ ಇಂದು
ಬೆಂಗಳೂರು: ಮೈತ್ರಿ ಸರ್ಕಾರದ ಸಂಖ್ಯಾಬಲ ಕುಸಿದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಮಂಗಳವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ತೀರ್ಮಾನಿಸಿದೆ. ಮಂಗಳವಾರ ಸಂಜೆ 5 ಗಂಟೆಗೆ ಮತ್ತೆ ಶಾಸಕಾಂಗ ಸಭೆ ನಡೆಸಲು ಕಮಲ ಪಾಳಯ ನಿರ್ಧರಿಸಿದೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್, ಜೆಡಿಎಸ್‌ನ 13 ಶಾಸಕರ ರಾಜೀನಾಮೆ ಹಾಗೂ ಪಕ್ಷೇತರ ಶಾಸಕರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆಳವಣಿಗೆ ಕುರಿತು ಚರ್ಚೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಎಲ್ಲ ಶಾಸಕರೂ ಬೆಂಗಳೂರಿನಲ್ಲೇ ಉಳಿಯಬೇಕೆಂದು ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ರಾಜೀನಾಮೆ ನೀಡಿ ಮುಂಬೈನ ಹೋಟೆಲ್‌ನಲ್ಲಿರುವ ಕೆಲ ಶಾಸಕರು ಮಂಗಳವಾರ ಸಂಜೆ ಬೆಂಗಳೂರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಸ್ಪೀಕರ್ ನಡೆಯನ್ನು ಗಮನಿಸಿ ಮುಂದಿನ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಬಿಜೆಪಿ ಮಂಗಳವಾರ ಸಂಜೆ ಮತ್ತೆ ಶಾಸಕಾಂಗ ಸಭೆ ಕರೆದಿದೆ. ಜತೆಗೆ ರೆಸಾರ್ಟ್‌ನಲ್ಲಿ ಶಾಸಕರನ್ನು ಇರಿಸುವ ಚಿಂತನೆಯನ್ನು ಕೈಬಿಟ್ಟಿದೆ ಎಂದು ತಿಳಿಸಿವೆ.
ಸಭೆಯ ಬಳಿಕ ಮಾಹಿತಿ ನೀಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಪಕ್ಷದ ಶಾಸಕಾಂಗ ಸಭೆಯಲ್ಲಿ ರಾಜ್ಯ ರಾಜಕೀಯದಲ್ಲಿನ ಸದ್ಯದ ಬೆಳವಣಿಗೆ ಬಗ್ಗೆ ಚರ್ಚಿಸಲಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಪರಸ್ಪರ ಕಚ್ಚಾಡಿಕೊಂಡು ಬಿಜೆಪಿಯನ್ನು ಅನಗತ್ಯವಾಗಿ ಟೀಕಿಸಿದ್ದೇ ಸರ್ಕಾರದ ಸಾಧನೆ. ಬಿಜೆಪಿಯು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿಲ್ಲ. ಯಾರಿಗೂ ಆಮಿಷ ಒಡ್ಡುವ ಕೆಲಸವನ್ನೂ ಮಾಡಿಲ್ಲ. ಮೈತ್ರಿ ಸರ್ಕಾರ ತಾನಾಗಿಯೇ ಪತನವಾಗುವ ಹಂತಕ್ಕೆ ತಲುಪಿದೆ ಎಂದು ಹೇಳಿದರು.
ರಾಜ್ಯಾದ್ಯಂತ ಪ್ರತಿಭಟನೆ: ವಿಧಾನಸಭೆಯಲ್ಲಿ 105 ಶಾಸಕರ ಬಲವಿರುವ ಬಿಜೆಪಿಯನ್ನು ಇಬ್ಬರು ಪಕ್ಷೇತರರು ಬೆಂಬಲಿಸಿರುವುದಿಂದ ಬಿಜೆಪಿ ಸಂಖ್ಯಾಬಲ 107ಕ್ಕೆ ಏರಿಕೆಯಾಗಿದೆ. 13 ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಪಕ್ಷಗಳ ಸಂಖ್ಯಾಬಲ 104ಕ್ಕೆ ಕುಸಿದಂತಾಗಲಿದೆ. ಹಾಗಾಗಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಮಂಗಳವಾರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಇನ್ನೂ 2-3 ದಿನ ಬೆಳವಣಿಗೆಯನ್ನು ಕಾದು ನೋಡಲಾಗುವುದು ಎಂದರು.
ಪಕ್ಷೇತರ ಶಾಸಕರಾದ ಎಚ್.ನಾಗೇಶ್, ಆರ್.ಶಂಕರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ. ಜತೆಗೆ ರಾಜ್ಯಪಾಲರಿಗೂ ರಾಜೀನಾಮೆ ಪತ್ರ ಸಲ್ಲಿಸಿದ್ದು, ಬಿಜೆಪಿ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ವಿಧಾನಸಭೆ ರಚನೆಯಾದ ಆರು ತಿಂಗಳಲ್ಲಿ ಯಾವುದೇ ಪಕ್ಷದ ಸಹ ಸದಸ್ಯತ್ವ ಪಡೆದಿದ್ದರೆ ಕೆಲ ನಿರ್ಬಂಧಗಳಿರುತ್ತವೆ. ಆದರೆ ಆರ್.ಶಂಕರ್ ಅವರು ಆರು ತಿಂಗಳ ಬಳಿಕ ಕಾಂಗ್ರೆಸ್‌ನ ಸಹ ಸದಸ್ಯತ್ವ ಪಡೆದಂತಿದೆ. ಶಂಕರ್ ಅವರು ಬಿಜೆಪಿಯನ್ನು ಹಿಂದೊಮ್ಮೆ ಬೆಂಬಲಿಸಿ ಪತ್ರ ನೀಡಿದ್ದರು ಎಂದು ಹೇಳಿದರು.