ವಾಷಿಂಗ್ಟನ್: ವಿಜ್ಞಾನ ಮತ್ತು ನಿಸರ್ಗ ಲೋಕದ ವಿಸ್ಮಯಗಳನ್ನು ಜನರ ಮನೆ ಮನೆಗೆ ತಲುಪಿಸುತ್ತಿದ್ದ ನ್ಯಾಷನಲ್ ಜಿಯೋಗ್ರಾಫಿಕ್ ನಿಯತಕಾಲಿಕೆಯು ಈಗ ತನ್ನಲ್ಲಿ ಕೆಲಸ ಮಾಡುತ್ತಿದ್ದ ಕಟ್ಟಕಡೆಯ ಸಿಬ್ಬಂದಿಯನ್ನೂ ಮನೆಗೆ ಕಳುಹಿಸಿದೆ! ಅಷ್ಟೇ ಅಲ್ಲ, ಮಾಸಿಕವಾಗಿ ಪ್ರಕಟಗೊಳ್ಳುತ್ತಿದ್ದ ಈ ಮ್ಯಾಗಜಿನ್‌ನ ಮುದ್ರಣ ಮುಂದಿನ ವರ್ಷದಿಂದ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ನಿಯತಕಾಲಿಕೆಯ ಸಂಪಾದಕೀಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೊನೆಯ ಒಟ್ಟು 19 ಲೇಖಕರನ್ನು ಕೆಲಸದಿಂದ ಕೈಬಿಡಲಾಗಿದೆ. ಏಪ್ರಿಲ್ ತಿಂಗಳಲ್ಲೇ ಇವರೆಲ್ಲರಿಗೂ ಈ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗಿತ್ತು.
ಬುಧವಾರ ಹಲವು ಹಿರಿಯ ಲೇಖಕರು, ನ್ಯಾಷನಲ್ ಜಿಯೋಗ್ರಾಫಿಕ್‌ನ ಈ ಮಾಸದ ಆವೃತ್ತಿಯಲ್ಲಿ ತಮ್ಮ ಕೊನೆಯ ಲೇಖನ ಪ್ರಕಟವಾಗಿರುವ ಬಗ್ಗೆ ಟ್ವೀಟ್ ಮಾಡುವ ಮೂಲಕ ಸಂಸ್ಥೆಗೆ ವಿದಾಯ ಹೇಳಿದ್ದಾರೆ. ಡಿಸ್ನಿ ಒಡೆತನದ ನ್ಯಾಷನಲ್ ಜಿಯೋಗ್ರಾಫಿಕ್ 1888ರಿಂದ ಪ್ರಕಟಗೊಳ್ಳುತ್ತಿದೆ.