Advertisement

ಬ್ಯಾಗ್‌ ಕಳೆದ ಜೆಟ್‌ ಏರ್‌ವೇಸ್‌ಗೆ 10 ಸಾವಿರ ದಂಡ

12:35 PM Apr 16, 2018 | Team Udayavani |

ಬೆಂಗಳೂರು: ಸಂದರ್ಶನಕ್ಕೆ ಹಾಜರಾಗಲು ವಿಮಾನದಲ್ಲಿ ಮುಂಬೈಗೆ ತೆರಳಿದ್ದ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಅಧಿಕಾರಿಗೆ ಸೇರಿದ “ಲಗೇಜ್‌ ಬ್ಯಾಗ್‌’ ಕಳೆದು ಹಾಕಿದ್ದ ಜೆಟ್‌ ಏರ್‌ವೇಸ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆಗೆ ಗ್ರಾಹಕರ ವೇದಿಕೆ ದಂಡ ವಿಧಿಸಿದೆ.

Advertisement

ಗ್ರಾಹಕರ ಲಗೇಜ್‌ ಸುರಕ್ಷಿತವಾಗಿಡುವುದು ಹಾಗೂ ವಾಪಾಸ್‌ ನೀಡುವುದು ಸಂಸ್ಥೆಯ ಜವಾಬ್ದಾರಿ. ಆದರೆ, ಈ ಪ್ರಕರಣದಲ್ಲಿ ಗ್ರಾಹಕರ ಲಗೇಜ್‌ ಹಿಂತಿರುಗಿಸದಿರುವುದು ಸಂಸ್ಥೆ ಸಿಬ್ಬಂದಿಯ ಬೇಜವಾಬ್ದಾರಿತನ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಲಗೇಜ್‌ ಹಿಂತಿರುಗಿಸದ ತಪ್ಪಿಗೆ ಬ್ಯಾಂಕ್‌ ಅಧಿಕಾರಿಗೆ 16,415 ರೂ. ಪರಿಹಾರ ನೀಡುವಂತೆ ಬೆಂಗಳೂರಿನ ಎರಡನೇ ಗ್ರಾಹಕ ವೇದಿಕೆ ಆದೇಶಿಸಿದೆ.

ಅಲ್ಲದೆ, ವೃತ್ತಿಜೀವನದ ಪ್ರಮುಖ ಹುದ್ದೆಯ ಸಂದರ್ಶನಕ್ಕೆ ಹಾಜರಾಗಬೇಕಿದ್ದ ಬ್ಯಾಂಕ್‌ ಅಧಿಕಾರಿಯ “ಲಗೇಜ್‌ ಬ್ಯಾಗ್‌’ ಸಕಾಲದಲ್ಲಿ ಸಿಗದೆ ಅವರು ತೊಂದರೆ ಅನುಭವಿಸಿದ್ದಾರೆ. ಕಾನೂನು ಹೋರಾಟದ ಸಂದರ್ಭದಲ್ಲೂ ಮಾನಸಿಕವಾಗಿ ತೊಂದರೆ ಎದುರಿಸಿದ್ದಾರೆ. ಇದಕ್ಕಾಗಿ ಪರಿಹಾರ ರೂಪದಲ್ಲಿ ಮತ್ತೆ 10 ಸಾವಿರ ರೂ. ನೀಡಬೇಕು ಎಂದು ಸೂಚಿಸಿರುವ ಗ್ರಾಹಕರ ವೇದಿಕೆ, ಈ ಆದೇಶವನ್ನು ಮುಂದಿನ 30ದಿನಗಳಲ್ಲಿ ಪಾಲಿಸಬೇಕು ಎಂದು ಜೆಟ್‌ ಏರ್‌ ವೇಸ್‌ ಸಂಸ್ಥೆಗೆ ನಿರ್ದೇಶಿಸಿದೆ.

ಏನಿದು ಪ್ರಕರಣ?: ಬೆಂಗಳೂರಿನ ಎಸ್‌ಬಿಐ ಬ್ಯಾಂಕ್‌ ಶಾಖೆಯೊಂದರ ಡೆಪ್ಯೂಟಿ ಜನರಲ್‌ ಮ್ಯಾನೇಜರ್‌ ಎಸ್‌.ಶಂಕರನಾರಾಯಣನ್‌ ( 56) ಅವರಿಗೆ ಜನರಲ್‌ ಮ್ಯಾನೇಜರ್‌ ಹುದ್ದೆಗೆ ಮುಂಬಡ್ತಿಗಾಗಿ ಮುಂಬೈನಲ್ಲಿ  2016ರ ಜುಲೈ 7ರಂದು ಸಂದರ್ಶನ ನಿಗದಿಯಾಗಿತ್ತು. ಸಂದರ್ಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಜುಲೈ 6ರಂದು ಬೆಂಗಳೂರಿನಿಂದ ಮುಂಬೈಗೆ ತೆರಳಲು ಮತ್ತು ಜುಲೈ 8ರಂದು ವಾಪಸ್‌ ಬರಲು ಜೆಟ್‌ಏರ್‌ವೇಸ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿದ್ದರು.

ಅದರಂತೆ ಜುಲೈ 6ರಂದು ರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೆಟ್‌ ಏರ್‌ವೇಸ್‌ 9ಡಬ್ಲೂ7133 ವಿಮಾನದಲ್ಲಿ ಮುಂಬೈಗೆ ಪಯಣ ಬೆಳೆಸಿದ್ದರು. ಈ ವೇಳೆ ತಮ್ಮ ಸೂಟ್‌ಕೇಸ್‌ ಹಾಗೂ ಲಗೇಜ್‌ನ್ನು ಸಂಸ್ಥೆಯ ಸಿಬ್ಬಂದಿಗೆ ನೀಡಿದ್ದರು. ಮಾರನೇ ದಿನ ಬೆಳಗ್ಗೆ ಮುಂಬೈ ತಲುಪಿದಾಗ ಶಂಕರನಾರಾಯಣನ್‌ ಅವರಿಗೆ ಶಾಕ್‌ ಕಾದಿತ್ತು.

Advertisement

ನಿಮ್ಮ ಲಗೇಜ್‌ ಬದಲಾವಣೆಯಾಗಿದ್ದು, ಬೇರೊಬ್ಬ ಪ್ರಯಾಣಿಕರು ತೆಗೆದುಕೊಂಡಿರುವ ಸಾಧ್ಯತೆಯಿದೆ ಎಂದು ಜೆಟ್‌ ಏರ್‌ವೇಸ್‌ ಸಿಬ್ಬಂದಿ ಹೇಳಿದ್ದರು. ತಮ್ಮ ಬಟ್ಟೆ ಹಾಗೂ ಸಂದರ್ಶನಕ್ಕೆ ಅಗತ್ಯವಾದ ಕೆಲವು ದಾಖಲೆಗಳು ಅದರಲಿದ್ದು, ತಕ್ಷಣ ಹುಡುಕಿಕೊಡಿ ಎಂದು ಕೇಳಿಕೊಂಡರೂ ಸೂಕ್ತ ಸ್ಪಂದನೆ ದೊರೆತಿರಲಿಲ್ಲ. 

ಲಗೇಜ್‌ ಮೌಲ್ಯ ಮೂರೇ ಸಾವಿರ ಎಂದ ಸಂಸ್ಥೆ: ಶಂಕರ್‌ನಾರಾಯಣ್‌ ಮುಂಬೈನಲ್ಲಿ ಹೊಸ ಬಟ್ಟೆ, ಇನ್ನಿತರ ವಸ್ತುಗಳನ್ನು ಖರೀದಿಸಿ ಸಂದರ್ಶನ ಪೂರೈಸಿಕೊಂಡು ಬೆಂಗಳೂರಿಗೆ ವಾಪಸಾಗಿದ್ದರು. ತಮ್ಮ ಲಗೇಜ್‌ ವಾಪಸ್‌ ಕೊಡಿಸುವಂತೆ ಜೆಟ್‌ ಏರ್‌ವೇಸ್‌ ಸಂಸ್ಥೆಗೆ ಹಲವು ಬಾರಿ ಈ-ಮೇಲ್‌ ಮೂಲಕ ಮನವಿ ಮಾಡಿಕೊಂಡಿದ್ದರೂ ಸರಿಯಾದ ಪ್ರತಿಕ್ರಿಯೆ ಸಿಕ್ಕಿಲಿಲ್ಲ.

ಒಂದು ವರ್ಷದ ಬಳಿಕ ಪ್ರತಿಕ್ರಿಯೆ ನೀಡಿದ ಸಂಸ್ಥೆ, ಲಗೇಜ್‌ನಲ್ಲಿದ್ದ ವಸ್ತುಗಳ ಮೌಲ್ಯ 3,150 ರೂ. ಎಂದು  ಅಂದಾಜಿಸಲಾಗಿದ್ದು, ಬಂದು ಹಣ ಪಡೆದುಕೊಳ್ಳಬಹುದು ಎಂದು ಶಂಕರ್‌ನಾರಾಯಣ್‌ಗೆ ಈ-ಮೇಲ್‌ ಕಳುಹಿಸಿತ್ತು.

ಆದರೆ, ಹಣ ಪಡೆಯಲು ನಿರಾಕರಿಸಿದ್ದ ಶಂಕರನಾರಾಯಣನ್‌, ತಮ್ಮ ಲಗೇಜ್‌ನಲ್ಲಿ 36 ಸಾವಿರ ರೂ. ಮೌಲ್ಯದ ವಸ್ತುಗಳಿದ್ದವು. ಸೂಕ್ತ ಸಮಯಕ್ಕೆ ಲಗೇಜ್‌ ನೀಡದೆ ಅಮಸರ್ಪಕ ಸೇವೆ ನೀಡಿದ್ದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ಜತೆಗೆ ನನ್ನ ದೂರಿಗೆ  ಜೆಟ್‌ ಏರ್‌ವೇಸ್‌ ಸಂಸ್ಥೆ ಸ್ಪಂದಿಸದೆ ಬೇಜವಾಬ್ದಾರಿ ಪ್ರದರ್ಶಿಸಿದೆ. ಹೀಗಾಗಿ,  ಪರಿಹಾರ ಕೊಡಿಸಬೇಕು ಎಂದು ಕೋರಿ ಗ್ರಾಹಕರ ವೇದಿಕೆ ಮೊರೆ ಹೋಗಿದ್ದರು.

* ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next