Advertisement

ಭಾಷೆ, ಬಂಧ ಮೀರಿ ಮಿಡಿದ ಜನ ಭಾವನೆ

12:29 PM Nov 26, 2018 | Team Udayavani |

ಬೆಂಗಳೂರು: ಶನಿವಾರ ವಿಧಿವಶರಾದ ರೆಬಲ್‌ ಸ್ಟಾರ್‌ ಅಂಬರೀಶ್‌ ಅವರ ಪಾರ್ಥಿವ ಶರೀರಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಅಭಿಮಾನಿಗಳು ಬೆಳಗ್ಗೆಯಿಂದ ಸಂಜೆವರೆಗೆ ಅಂತಿಮ ನಮನ ಸಲ್ಲಿಸಿದರೆ, ಸಂಜೆ ನಂತರ ಮಂಡ್ಯದಲ್ಲಿ ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಹೀಗಾಗಿ ಬೆಂಗಳೂರಿನಿಂದ ಮಂಡ್ಯದವರೆಗೂ ನೋವಿನ ಯಾತ್ರೆ ವಿಸ್ತರಿಸಿತ್ತು.

Advertisement

ದುಃಖದ ಮಡುವಿನಲ್ಲಿ ಪಾರ್ಥಿವ ಶರೀರ ನೋಡಿದಷ್ಟು ಸಾಲದು ಎಂಬ ಭಾವ ಅಂತಿಮ ನಮನ ಸಲ್ಲಿಸಿದವರ ಮುಖದಲ್ಲಿ ಕಂಡುಬರುತ್ತಿತ್ತು. ಪೊಲೀಸರ ಒತ್ತಡಕ್ಕೆ ಸಾಲಾಗಿ ಮುಂದೆ ಸರಿದರೂ, ಮತ್ತೆ ತಿರುಗಿ ನೋಡುತ್ತಿದ್ದರು. ಇನ್ನು ಹಲವರು ಎರಡು ಮೂರು ಭಾರಿ ಬಂದು ನೋಡಿ ಹೋದರು. ರೆಬೆಲ್‌ ಸ್ಟಾರ್‌ ಇನ್ನಿಲ್ಲ ಎಂಬುದನ್ನು ಸಹಿಸಿಕೊಳ್ಳಲಾಗದೆ ಸಾವಿರಾರು ಅಭಿಮಾನಿಗಳು ಭಾವುಕರಾಗಿದ್ದರು.

ಶೋಕಯಾತ್ರೆಯ ಭಾವ ಪ್ರತಿ ಅಭಿಮಾನಿಯಲ್ಲೂ ವ್ಯಕ್ತವಾಗುತ್ತಿತ್ತು. ಬೆಂಗಳೂರಿನ ವಿವಿಧ ಭಾಗ, ಮಂಡ್ಯ, ಮೈಸೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾಸನ ಸಹಿತವಾಗಿ ರಾಜ್ಯದ ವಿವಿಧ ಭಾಗದಿಂದ ಅಭಿಮಾನಿಗಳು ಅಂಬಿ ಮುಖ ನೋಡುತ್ತಿದ್ದಂತೆ ಬಿಕ್ಕಿಬಿಕ್ಕಿ ಅಳುತ್ತಿದ್ದರು. ಸಹಿಸಿಕೊಳ್ಳಲು, ತೋರ್ಪಡಿಸಲಾಗದ ನೊವಿನಿಂದ ರೋದಿಸುತ್ತಿದ್ದುದು ಕಂಡುಬಂತು.

ಶನಿವಾರ ನಗರದಲ್ಲಿ ಕೊನೆಯುಸಿರೆಳೆದ ಅಂಬರೀಶ್‌ ಅವರ ಪಾರ್ಥಿವ ಶರೀರವನ್ನು ಜೆ.ಪಿ.ನಗರದಲ್ಲಿನ ನಿರ್ಮಾಣ ಹಂತದಲ್ಲಿರುವ ಅವರ ನಿವಾಸಕ್ಕೆ ಭಾನುವಾರ ನಸುಕಿನಲ್ಲಿ ರವಾನಿಸಲಾಯಿತು. ಕೆಲವು ಗಂಟೆಗಳ ಕಾಲ ಅಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕುಟುಂಬದ ಸದಸ್ಯರು, ಸಂಬಂಧಿಗಳು, ಗಣ್ಯರು ಅಂತಿಮ ದರ್ಶನ ಪಡೆದರು.

ಬೆಳಗ್ಗೆ 8 ಗಂಟೆಗೆ ಕಂಠೀರವ ಕ್ರೀಡಾಂಗಂದಲ್ಲಿ ಸಾರ್ವಜನಿಕ ದರ್ಶನ ಶುರುವಾಯಿತು. ರಾಜಾರಾಂ ಮೋಹನ್‌ರಾಯ್‌ ರಸ್ತೆ ಕಡೆಗಿನ ಮುಖ್ಯದ್ವಾರದಿಂದ ಸಾರ್ವಜನಿಕರು ಸರತಿ ಸಾಲಿನಲ್ಲಿ ಕ್ರೀಡಾಂಗಣ ಪ್ರವೇಶಿಸಿ ಪಾರ್ಥಿವ ಶರೀರದ ದರ್ಶನ ಪಡೆದು, ಮಲ್ಯ ಆಸ್ಪತ್ರೆಯ ರಸ್ತೆಯ ದ್ವಾರದ ಮೂಲಕ ಹೊರ ಹೋಗುವ ವ್ಯವಸ್ಥೆ ಮಾಡಲಾಗಿತ್ತು.

Advertisement

ಪಾರ್ಥಿವ ಶರೀರದ ಸಮೀಪವೇ ನಿಂತಿದ್ದ ಪತ್ನಿ ಸುಮಲತಾ ಅಂಬರೀಶ್‌ ಹಾಗೂ ಪುತ್ರ ಅಭಿಷೇಕ್‌ಗೌಡ ಅವರ ಕಂಬನಿ ಕಡೆವರೆಗೂ ಕರಗಲೇ ಇಲ್ಲ. ಪಕ್ಕದಲ್ಲಿ ಅಂಬರೀಷ್‌ ಅವರ ರೇಖಾಚಿತ್ರದ ಕಟೌಟ್‌ ಇರಿಸಲಾಗಿತ್ತು. ನಟ ಯಶ್‌, ಎಸ್‌.ನಾರಾಯಣ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮೊದಲಾದವರು ಪಾರ್ಥಿವ ಶರೀರದ ಸಾರ್ವಜನಿಕ ದರ್ಶನದ ಮೆಲುಸ್ತುವಾರಿ ನೋಡಿಕೊಂಡರು.

ಚಿತ್ರರಂಗದ ಪ್ರಮುಖರಾದ ಅನಂತ ನಾಗ್‌, ಶ್ರೀನಾಥ್‌, “ಮುಖ್ಯಮಂತ್ರಿ’ ಚಂದ್ರು, ಜಯಂತಿ, ಸುಹಾಸಿನಿ, ಲೀಲಾವತಿ, ಬಿ.ಸರೋಜಾ ದೇವಿ, ಭಾರತಿ ವಿಷ್ಣುವರ್ಧನ್‌, ಗಾಯತ್ರಿ, ಶ್ರುತಿ, ದೊಡ್ಡಣ್ಣ,  ವೈಜನಾಥ್‌ ಬಿರಾದಾರ, ಸಾ.ರಾ.ಗೋವಿಂದು, ನಾಗತಿಹಳ್ಳಿ ಚಂದ್ರಶೇಖರ್‌, ಟಿ.ಎನ್‌.ಸೀತಾರಾಂ, ಪವಿತ್ರಾ ಲೋಕೇಶ್‌, ರಾಘವೇಂದ್ರ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಸುದೀಪ್‌, ಸುಧಾರಾಣಿ, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಭವ್ಯಾ, ವಿಜಯಲಕ್ಷ್ಮೀ ಸಿಂಗ್‌, ಜೈ ಜಗದೀಶ್‌, ಚರಣ್‌ ರಾಜ್‌, ಶೋಭರಾಜ್‌, ದೇವರಾಜ್‌,

ಮಾಲಾಶ್ರೀ, ರೇಖಾ, ಶರಣ್‌, ಅಜಯ್‌ ರಾವ್‌, ಆಶಿಕಾ, ರಕ್ಷಿತ್‌ ಶೆಟ್ಟಿ, ರಿಷಬ್‌ ಶೆಟ್ಟಿ, ಸಾಧುಕೋಕಿಲಾ, ಹರ್ಷಿಕಾ, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ, ಸುಂದರ್‌ರಾಜ್‌, ಪ್ರಮೀಳಾ ಜೋಷಾಯಿ, ಮೇಘನಾ ರಾಜ್‌, ಸೃಜನ್‌ ಲೋಕೇಶ್‌, ಧನಂಜಯ, ವಶಿಷ್ಠಸಿಂಹ, ರಚಿತಾರಾಮ್‌, ಗಣೇಶ್‌, ಶಿಲ್ಪಾ ಗಣೇಶ್‌, ಪ್ರಜ್ವಲ್‌, ವಿನಯ್‌ ರಾಜ್‌ಕುಮಾರ್‌, ರಾಜ್‌ ಬಿ.ಶೆಟ್ಟಿ, ನೀನಾಸಂ ಸತೀಶ್‌, ಅನಿರುದ್ಧ, ಅಮೂಲ್ಯ, ಕೀರ್ತಿರಾಜ್‌, ಪ್ರಶಾಂತ್‌, ಯೋಗೇಶ್‌ ಸೇರಿದಂತೆ ಕನ್ನಡ ಚಿತ್ರರಂಗದ ನಟ, ನಟಿಯರು, ನಿರ್ದೇಶಕ, ನಿರ್ಮಾಪಕರು, ಕಲಾವಿದರು ಅಂತಿಮ ದರ್ಶನ ಪಡೆದರು.

ಬಹುಭಾಷಾ ನಟರಾದ ರಜನೀಕಾಂತ್‌, ಪ್ರಕಾಶ್‌ ರಾಜ್‌, ಚಿರಂಜೀವಿ,  ಶರತ್‌ ಕುಮಾರ್‌, ರಾಧಿಕಾ, ಅರ್ಜುನ್‌ ಸರ್ಜಾ, ಮೋಹನ್‌ ಬಾಬು ಮೊದಲಾದವರು ಕೂಡ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಪ್ರಮುಖರಾದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ರಾಜ್ಯಸಭಾ ಸದಸ್ಯ ರಾಜೀವ್‌ಗೌಡ, ಶಾಸಕರಾದ ಎಸ್‌.ಆರ್‌.ವಿಶ್ವನಾಥ್‌, ಗೋಪಾಲಯ್ಯ, ಎನ್‌.ಎ.ಹ್ಯಾರೀಸ್‌, ಅನಿತಾ ಕುಮಾರಸ್ವಾಮಿ, ಮುನಿರತ್ನ, ಮಾಜಿ ಶಾಸಕ ಅಶೋಕ ಖೇಣಿ, ನಿವೃತ್ತ ಐಪಿಎಸ್‌ ಅಧಿಕಾರಿ ಶಂಕರ ಬಿದರಿ, ವಾಟಾಳ್‌ ನಾಗರಾಜ್‌ ಮೊದಲಾದವ ಗಣ್ಯರು ಅಂತಿಮ ದರ್ಶನ ಪಡೆದರು.

ಹೆಲಿಕಾಪ್ಟರ್‌ ಮೂಲಕ ಮಂಡ್ಯಕ್ಕೆ: ಬೆಳಗ್ಗೆ 8 ಗಂಟೆಯಿಂದ ಸಂಜೆ 3.40ರವರೆಗೂ ಕಂಠೀರವ ಕ್ರೀಡಾಂಗಣದಲ್ಲೇ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. 3.40ಕ್ಕೆ ಸರಿಯಾಗಿ ಪಾರ್ಥಿವ ಶರೀರವನ್ನು ಆ್ಯಂಬುಲೆನ್ಸ್‌ ಮೂಲಕ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಪೊಲೀಸ್‌ ಭದ್ರತೆಯೊಂದಿಗೆ ಜೀರೋ ಟ್ರಾಫಿಕ್‌ನಲ್ಲಿ ರವಾನಿಸಲಾಯಿತು. ಅಲ್ಲಿಂದ ಸೇನೆಯ ಮೂರು ಹೆಲಿಕಾಪ್ಟರ್‌ ಮೂಲಕ ಮಂಡ್ಯದ ಸರ್‌.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಕೊಂಡೊಯ್ಯದರು. 

ಅಂಬರೀಶ್‌ ಅವರ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣದಿಂದಲೇ ಹೆಲಿಕಾಪ್ಟರ್‌ ಮೂಲಕ ಮಂಡ್ಯಕ್ಕೆ ರವಾನಿಸಲು ಆರಂಭದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಹೀರೋ ಇಂಡಿಯನ್‌ ಲೀಗ್‌ ಫ‌ುಟ್ಬಾಲ್‌ ಪಂದ್ಯಾವಳಿ ನಡೆಯುತ್ತಿರುವ ಜತೆಗೆ ಕ್ರೀಡಾಂಗಣದ ಸುತ್ತಲು ದೊಡ್ಡ ಮರಗಳು ಇರುವುದರಿಂದ ಲ್ಯಾಂಡಿಂಗ್‌ಗೆ ಸಮಸ್ಯೆಯಾಗಬಹುದು ಎಂಬ ಉದ್ದೇಶದಿಂದ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯದು ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಮಂಡ್ಯಕ್ಕೆ ಸಾಗಿಸಲಾಯಿತು.

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next