ರಾಯಚೂರು: ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪನೆಗಾಗಿ ಸಮೀಪದ ಸಿಂಗನೋಡಿ ಹಾಗೂ ಬೋಳಮಾನ ದೊಡ್ಡಿಯಲ್ಲಿ ಸುಮಾರು 690 ಎಕರೆ ಜಮೀನು ಗುರುತಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಕೆ.ಆರ್. ದುರಗೇಶ ತಿಳಿಸಿದರು.
ನಗರದ ಡಿಸಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಏಕ ಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಕೈಗಾರಿಕೆಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಮೆಗಾ ಟೆಕ್ಸ್‌ಟೈಲ್ಸ್ ಪಾರ್ಕ್ ಸ್ಥಾಪನೆಗಾಗಿ ಸುಮಾರು ಒಂದು ಸಾವಿರ ಎಕರೆ ಭೂಮಿ, 33/132 ಕೆವಿ ಸಾಮರ್ಥ್ಯದ ವಿದ್ಯುತ್ ನಿರಂತರ ಸರಬರಾಜು ವ್ಯವಸ್ಥೆ ಹಾಗೂ 150 ಕೋಟಿ ಲೀಟರ್ ನೀರಿನ ವ್ಯವಸ್ಥೆ ಹೊಂದಿರುವ ಸೂಕ್ತ ಭೂಮಿ ಗುರುತಿಸಿ ಸರ್ಕಾರಕ್ಕೆ ಮಾಹಿತಿ ಸಲ್ಲಿಸುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಆಯುಕ್ತರು ಹಾಗೂ ನಿರ್ದೇಶಕರು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ದೇವದುರ್ಗ ತಾಲೂಕಿನಲ್ಲಿ ಈಗಾಗಲೇ ಹೆಚ್ಚುವರಿಯಾಗಿ ಒಂದು ಸಾವಿರ ಎಕರೆ ಭೂಮಿಯನ್ನು ಗುರುತಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕಾರ್ಖಾನೆ ಮಾಲೀಕರ ಸಂಘದ ಮುಖಂಡರು ಮಾತನಾಡಿ, ಕೈಗಾರಿಕೆಗಳಿಗೆ ಸರಿಯಾಗಿ ನೀರು ಸರಬರಾಜು ಆಗುವುದಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ ಘಟಕದವರಿಗೆ ನೀರಿನ ಸಂಪರ್ಕ ಮಾಡಿದ್ದು, ಕೆಲವೊಂದು ಕೈಗಾರಿಕಾ ಘಟಕಗಳಿಗೆ ಬೋರ್‌ವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಕೈಗಾರಿಕೆಗಳಿಗೆ ನೀರು ಪೂರೈಸಲಾಗುವುದು ಎಂದರು.
ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಬಸವರಾಜ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್, ಕೈಮಗ್ಗ ಮತ್ತು ಜವಳಿ ಸಹಾಯಕ ನಿರ್ದೇಶಕ ರಾಘವೇಂದ್ರ ಎಸ್.ಹೊಸಮನಿ, ರಾಯಚೂರು ನಗರಸಭೆ ಪೌರಾಯುಕ್ತ ಕೆ.ಮುನಿಸ್ವಾಮಿ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಬು ಬಳಗಾನೂರು, ರೈಸ್ ಮಿಲ್ ಅಸೋಸಿಯೇಶನ್ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಸಾವಿತ್ರಿ ಪುರುಷೋತ್ತಮ ಸೇರಿ ಅನೇಕರು ಸಭೆಯಲ್ಲಿದ್ದರು.