Advertisement

ಭೂಮಿ ಸಮತಟ್ಟು ಮಾಡಲು ಬಂದಿದೆ ಲೇಸರ್‌ ಯಂತ್ರ

11:38 AM Nov 16, 2018 | |

ಬೆಂಗಳೂರು: ಉಬ್ಬು-ತಗ್ಗು ಭೂ ಪ್ರದೇಶದಲ್ಲಿ ಲೇಸರ್‌ ತಂತ್ರಜ್ಞಾನದ ಮೂಲಕ ಸಮತಟ್ಟು ಮಾಡುವ ಹೊಸ ಯಂತ್ರದ ಮಾಹಿತಿ ಪಡೆಯಬೇಕೇ ಹಾಗದರೇ ಕೃಷಿ ಮೇಳಕ್ಕೆ ಭೇಟಿ ನೀಡಿ. ರಾಜ್ಯದ ಬಳ್ಳಾರಿ, ರಾಯಚೂರು, ದಾವಣಗೆರೆ, ಶಿವಮೊಗ್ಗ, ಕೊಪ್ಪಳ, ಚಿತ್ರದುರ್ಗ ಹಾಗೂ ಗದಗ ಮೊದಲಾದ ಜಿಲ್ಲೆಗಳಲ್ಲಿ ಲೇಸರ್‌ ಲ್ಯಾಂಡ್‌ ಲೆವೆಲರ್‌ ಯಂತ್ರ ಈಗಾಗಲೇ ಭೂಮಿ ಸಮತಟ್ಟು ಮಾಡುತ್ತಿದೆ.

Advertisement

ಅತ್ಯಂತ ಕಡಿಮೆ ಮಾನವ ಸಂಪನ್ಮೂಲ ಬಳಸಿಕೊಂಡು, ಲೇಸರ್‌ ತಂತ್ರಜ್ಞಾನದ ಆಧಾರದಲ್ಲಿ ಭೂಮಿಯ ಎತ್ತರ ಭಾಗದ ಮಣ್ಣನ್ನು ತಗ್ಗು ಭಾಗಕ್ಕೆ ಕೊಂಡೊಯ್ಯುತ್ತದೆ. ಗ್ರಾಮೀಣ ಪ್ರದೇಶದಲ್ಲಿ ರೈತರೇ ಭೂಮಿ ಸಮತಟ್ಟು ಮಾಡುತ್ತಾರೆ. ಇದಕ್ಕೆ ಹೆಚ್ಚಿನ ಸಮಯಾವಕಾಶ ಬೀಳುತ್ತದೆ. ಇನ್ನು ಕೆಲವು ಕಡೆಗಳಲ್ಲಿ ಟ್ರ್ಯಾಕ್ಟರ್‌, ಜೆಸಿಬಿ ಮೂಲಕ ಮಣ್ಣನ್ನು ಸಮತಟ್ಟು ಮಾಡಲಾಗುತ್ತದೆ.

ಆದರೆ, ಅಷ್ಟೊಂದು ಸಮರ್ಪಕವಾಗಿ ಸಮತಟ್ಟಾಗುವುದಿಲ್ಲ. ಲೇಸರ್‌ ಲ್ಯಾಂಡ್‌ ಲೆವೆಲರ್‌ ಯಂತ್ರ ಅಚ್ಚುಕಟ್ಟಾಗಿ ಭೂಮಿ ಸಮತಟ್ಟು ಮಾಡುತ್ತದೆ. ಯಂತ್ರದ ಕಾರ್ಯನಿರ್ವಹಣೆ ಟ್ರ್ಯಾಕ್ಟರ್‌ನ ಹಿಂಭಾಗಕ್ಕೆ ಲೇಸರ್‌ ಲ್ಯಾಂಡ್‌ ಲೆವಲರ್‌ ಯಂತ್ರ ಅಳವಡಿಸಲಾಗುತ್ತದೆ. ಲೇಸರ್‌ ತಂತ್ರಜ್ಞಾನ ಮೂಲಕ ಅದನ್ನು ನಿಯಂತ್ರಣ ಮಾಡಲಾಗುತ್ತದೆ.

ಟ್ರ್ಯಾಕ್ಟರ್‌ ಚಾಲಕ ಟ್ರ್ಯಾಕ್ಟರ್‌ ಅನ್ನು ಹಿಂದೆ ಅಥವಾ ಮುಂದೆ ಕೊಂಡೊಯ್ಯುತ್ತಿದ್ದಂತೆ ಲ್ಯಾಂಡ್‌ ಲೆವೆಲರ್‌ ಯಂತ್ರವು ಎತ್ತರ ಪ್ರದೇಶ ಮಣ್ಣನ್ನು ತಗ್ಗು ಪ್ರದೇಶಕ್ಕೆ ತಳ್ಳುವ ಮೂಲಕ ಸಮತಟ್ಟು ಮಾಡುತ್ತದೆ ಎಂದು ವರ್ಷ ಕೃಷಿ ಉಪಕರಣ ಸಂಸ್ಥೆಯ ಸಿಬ್ಬಂದಿ ವಿವರಿಸಿದರು. ಕೃಷಿ ಮೇಳದಲ್ಲಿ ಇದರ ಪ್ರತ್ಯಕ್ಷಿಕೆ ಇಡಲಾಗಿದೆ. ಲೇಸರ್‌ ತಂತ್ರಜ್ಞಾನದ ಮೂಲಕ ಹೇಗೆ ಭೂಮಿಯನ್ನು ಸಮತಟ್ಟು ಮಾಡಬಹುದು ಎಂಬುದರ ಸಮಗ್ರ ವಿವರ ಇಲ್ಲಿ ಲಭ್ಯವಿದೆ.

ವರ್ಷಾ ಕೃಷಿ ಉಪಕರಣಗಳ ಸಂಸ್ಥೆಯು ಈ ಯಂತ್ರ ಗಂಟೆ ಲೆಕ್ಕದಲ್ಲಿ ಬಾಡಿಗೆಯ ರೂಪದಲ್ಲೂ ನೀಡುತ್ತದೆೆ. ಸಂಸ್ಥೆಯ ಸಿಬ್ಬಂದಿ ಬಂದು ಲೇಸರ್‌ ಲ್ಯಾಂಡ್‌ ಲೆವೆಲರ್‌ ಮೂಲಕ ಭೂಮಿ ಸಮತಟ್ಟು ಮಾಡಿಕೊಡುತ್ತಾರೆ. ಅಗತ್ಯವಿರುವ ರೈತರು ಖರೀದಿಸಲು ಅವಕಾಶ ಇದೆ. ಯಂತ್ರದ ಮೂಲ ಬೆಲೆ 3.82 ಲಕ್ಷವಾಗಿದ್ದು, ಇದಕ್ಕೆ ಒಂದು ಲಕ್ಷ ಸಬ್ಸಿಡಿ ಇದೆ. 

Advertisement

ರಸಗೊಬ್ಬರ ಸಿಂಪಡಿಸಲು ಡ್ರೋಣ್‌: ಕೃಷಿ ಭೂಮಿಗೆ ಔಷಧ ಹಾಗೂ ರಸಗೊಬ್ಬರ ಸಿಂಪಡಿಸಲು ಡ್ರೋಣ್‌ ಬಂದಿದೆ. 5, 10 ಹಾಗೂ 12 ಲೀಟರ್‌ ಸಾಮರ್ಥ್ಯದ ಡ್ರೋಣ್‌ಗಳಿವೆ. ಒಮ್ಮೆಗೆ ಹದಿನೈದು ನಿಮಿಷ ರನ್‌ ಮಾಡಬಹುದಾಗಿದೆ. ಒಂದು ಗಂಟೆಗೆ 6ರಿಂದ 8 ಎಕರೆ ಕೃಷಿ ಭೂಮಿಗೆ ಡ್ರೋಣ್‌ ಮೂಲಕ ರಸಗೊಬ್ಬರ ಸಿಂಪಡಿಸಬಹುದಾಗಿದೆ.

ಭತ್ತ, ರಾಗಿ, ಜೋಳ, ಅವರೆ, ಸೂರ್ಯಕಾಂತಿ ಮೊದಲಾದ ಬೆಳೆಗಳಿಗೆ ಅತ್ಯಂತ ಸುಲಭದಲ್ಲಿ ಡ್ರೋಣ್‌ ಬಳಸಿ ರಸಗೊಬ್ಬರ ಸಿಂಪಡಿಸಬಹುದು. ಆದರೆ, ತೆಂಗು, ಅಡಕೆ ಮೊದಲಾದ ಬೆಳೆಗಳಿಗೆ ಡ್ರೋಣ್‌ ಬಳಕೆ ಸ್ವಲ್ಪ ಕಷ್ಟ ಎಂದು ವರ್ಷಾ ಕೃಷಿ ಉಪಕರಣ ಸಂಸ್ಥೆಯ ಪರಿಕರ ಉಸ್ತುವಾರಿ ಸಂಪತ್‌ ಕುಮಾರ್‌ ವಿವರಿಸಿದರು. ಕೇಂದ್ರ ಸರ್ಕಾರದ ಅನುಮತಿಯೊಂದಿಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಡ್ರೋಣ್‌ ಬಳಸಿ ರಸಗೊಬ್ಬರ ಸಿಂಪಡಿಸಿದ್ದೇವೆ.

ಜಿಪಿಎಸ್‌ ತಂತ್ರಜ್ಞಾನ ಬಳಸಿ ಒಂದು ಸಾವಿರ ಮೀಟರ್‌ ಒರೆಗೂ ಡ್ರೋಣ್‌ ಕಂಟ್ರೋಲ್‌ ಮಾಡಬಹುದಾದಗಿದೆ. ಸುಮಾರು 72 ಅಡಿಯಷ್ಟು ಎತ್ತಕ್ಕೆ ಹಾರುತ್ತದೆ. ಬೆಳೆಗಳ ಗುಣಲಕ್ಷಣಕ್ಕೆ ಅನುಗುಣವಾಗಿ ಎಷ್ಟು ಎತ್ತರಕ್ಕೆ ಹಾರಿಸಬೇಕು ಎಂಬುದನ್ನು ಮೊದಲೇ ನಿರ್ಧರಿಸಿ, ಡ್ರೋಣ್‌ ಮೂಲಕ ಸಿಂಪಡಿಸುತ್ತೇವೆ. ಔಷಧ, ನೀರು ಹಾಗೂ ರಸಗೊಬ್ಬರ ಕೃಷಿಕರೇ ನೀಡಿದರೆ, ಒಂದು ಎಕರೆಗೆ 500 ರೂ. ದರ ನಿಗದಿ ಮಾಡಿದ್ದೇವೆ. ಎಂದು ಮಾಹಿತಿ ನೀಡಿದರು.  

ಸೋಲರ್‌, ವಿಂಡ್‌ ವಿದ್ಯುತ್‌ ಯಂತ್ರ: ಸೂರ್ಯ ಹಾಗೂ ಪವನ ಶಕ್ತ ಎರಡೂ ಬಳಸಿಕೊಂಡು ಮನೆಗೆ ಸಾಕಾಗುಷ್ಟು ವಿದ್ಯುತ್‌ ಉತ್ಪತ್ತಿ ಮಾಡಿಕೊಳ್ಳಬಹುದಾದ ಯಂತ್ರವು ಕೃಷಿ ಮೇಳದ ಆರ್ಕಷಣೆಯಾಗಿದೆ. ಮನೆಯೆ ಮೇಲೆ  ಬೃಹದಾಕಾರದ ಫ್ಯಾನ್‌ ಸೆಟ್‌ ಮಾಡಲಾಗುತ್ತದೆ. ಅದರ ಪಕ್ಷದಲ್ಲೇ ಸೋಲರ್‌ ಪ್ಯಾನಲ್‌ ಅಳವಡಿಸಲಾಗುತ್ತದೆ. ಇದರಿಂದ 1500 ಕಿ.ವ್ಯಾಟ್‌ ವಿದ್ಯುತ್‌ ಉತ್ಪಾದಿಸ ಬಹುದಾಗಿದೆ. ಉತ್ಪತ್ತಿಯಾದ ವಿದ್ಯುತ್‌ ಶೇಖರಿಸಿಕೊಳ್ಳಲು ವ್ಯವಸ್ಥೆ ಇದೆ ಎಂದು ಮಾರುತಿ ಕೃಷಿ ಉದ್ಯೋಗ್‌ ಸಂಸ್ಥೆಯ ಅರುಣ್‌ ವಿವರಿಸಿದರು.   

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next