ಹಾವೇರಿ: ಬಗರ್ ಹುಕುಂ ಸಾಗುವಳಿ ಭೂಮಿಯನ್ನು ಸಕ್ರಮಗೊಳಿಸಿ, ಪಟ್ಟಾ ನೀಡಲು ಆಗ್ರಹಿಸಿ ಕರ್ನಾಟಕ ಭೂ ಹಕ್ಕುದಾರ ವೇದಿಕೆ, ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕ, ನವೋದಯ ಶಿಕ್ಷಣ ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆಯ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸ್ಥಳೀಯ ಕಾಗಿನಲೆ ರಸ್ತೆಯ ಮುರುಘರಾಜೇಂದ್ರ ಮಠದ ಆವರಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಿ.ಬಿ. ರಸ್ತೆ ಮಾರ್ಗವಾಗಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಮಾವೇಶಗೊಂಡಿತು. ನಂತರ ಪ್ರತಿಭಟನಾ ರೈತರು ಮಾನವ ಸರಪಳಿ ನಿರ್ಮಿಸಿ ಕೆಲಹೊತ್ತು ರಸ್ತೆ ಬಂದ್ ಮಾಡಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ಬಾರ್ಕಿ, ಸುಮಾರು 40 ವರ್ಷಗಳಿಂದ ಅರಣ್ಯ ಭೂಮಿಯನ್ನು ರೈತರು ಸಾಗುವಳಿ ಮಾಡುತ್ತ ಬಂದಿದ್ದು ರೈತರಿಗೆ ಸಂಬಂಧಿಸಿದ ಇಲಾಖೆಗಳಿಂದ ಈ ವರೆಗೂ ಸಾಗುವಳಿ ಚೀಟಿ, ಭೂಮಿ ಹಿಡುವಳಿ ಹಕ್ಕು ಪತ್ರವನ್ನು ನೀಡಿಲ್ಲ. ಹಕ್ಕುಪತ್ರ ವಿತರಣೆಗೆ ಫಾರ್ಮ್ ನಂ. 50 ಮತ್ತು 53ರಲ್ಲಿ ಅರಣ್ಯ ಕಾಯ್ದೆ 2006ರ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿದರೂ ಹಕ್ಕುಪತ್ರ ನೀಡಿಲ್ಲ. ಹೀಗಾಗಿ ಹಲವಾರು ಕುಟುಂಬಗಳು ತೊಂದರೆಯನ್ನು ಅನುಭವಿಸುತ್ತಿವೆ. ಕೆಲ ಕುಟುಂಬಗಳು ಜೀವನ ನಿರ್ವಹಣೆ ಮಾಡಲಾಗದೇ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಭೂ ಹಕ್ಕುದಾರ ವೇದಿಕೆ ಜಿಲ್ಲಾಧ್ಯಕ್ಷ ರವೀದ್ರಗೌಡ ಪಾಟೀಲ ಮಾತನಾಡಿ, ಬಗರ ಹುಕುಂ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು. ಅರ್ಜಿ ಕೊಟ್ಟ ಫಲಾನುಭವಿಗಳಿಗೆ ಪಟ್ಟಾ ವಿತರಣೆ ಮಾಡಬೇಕು. ಈಗಾಗಲೇ ಪಟ್ಟಾ ಪಡೆದಿರುವ ರೈತರಿಗೆ ಪಹಣಿ ಪತ್ರಿಕೆ ನೀಡಬೇಕು. ಸರ್ಕಾರಿ ಸಾಲ ಮತ್ತು ಬ್ಯಾಂಕ್ ಸಾಲ ಸೌಲಭ್ಯ ಸಿಗುವಂತೆ ಮಾಡಬೇಕು. ಬಗರ್‌ಹುಕುಂ ಸಾಗುವಳಿ ಭೂಮಿಯನ್ನು ಸರ್ವೇ ಇಲಾಖೆಯಿಂದ ಹದ್ದುಬಸ್ತ್ ಮಾಡಬೇಕು. ಬಗರ್‌ಹುಕುಂ ರೈತರನ್ನು ಒಳಗೊಂಡ ಭೂ ಮಾಪಕ ಅಧಿಕಾರಿಗಳು ಹಾಗೂ ತಾಲೂಕು ತಹಸೀಲ್ದಾರ ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ಬಗರ್ ಹುಕುಂ ಸಮಿತಿ ರಚಿಸಬೇಕು, ತಾಲೂಕು ಮಟ್ಟದಲ್ಲಿ ಸಭೆ ಕರೆಯಬೇಕು ಎಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಎಚ್.ಎಫ್. ಅಕ್ಕಿ, ಎಂ. ಕರಿಬಸಪ್ಪ, ಖಂಡೆಪ್ಪ ನೆಗಳೂರು, ಬಸವರಾಜ ಕನ್ನಮ್ಮನವರ, ರಾಜಪ್ಪ.ಡಿ, ಹಾಲಪ್ಪ ಎಚ್., ರಾಜು ಗುಂಜಾಳ, ನಿಲಪ್ಪ ಹರಿಜನ, ತಿಮ್ಮಣ್ಣ ಸವಣೂರ, ಹೇಮಣ್ಣ ಸಾಲಿ, ನಾಗಪ್ಪ ನರೇಗಲ್ಲ, ಹನುಮಂತ ಸಾಲಿ ಸೇರಿದಂತೆ ಇತರರು ಇದ್ದರು.