ತಿರುಪತಿ: ಅತಿಥಿಗೃಹ ನಿರ್ಮಾಣಕ್ಕಾಗಿ ಉದ್ಯಮಿ ವಿಜಯ್ ಮಲ್ಯಗೆ ಹಂಚಿಕೆ ಮಾಡಲಾಗಿದ್ದ ಜಮೀನನ್ನು ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಟ್ರಸ್ಟ್ ರದ್ದುಪಡಿಸಿದೆ. 1991ರ ನ.27ರಂದು ತಿರುಮಲದ ಧರ್ಮಗಿರಿಯಲ್ಲಿ ಅತಿಥಿಗೃಹ ನಿರ್ಮಾಣಕ್ಕಾಗಿ ವಿಜಯ್ ಮಲ್ಯ ಅವರಿಗೆ ಟಿಟಿಡಿ ಜಮೀನು ಹಂಚಿಕೆ ಮಾಡಿತ್ತು. ಈ ಸಂಬಂಧ 1993ರ ಡಿ.8ರಂದು ಟಿಟಿಡಿ ಮತ್ತು ಮಲ್ಯ ನಡುವೆ ಪ್ರಾಥಮಿಕ ಒಪ್ಪಂದ ಏರ್ಪಟ್ಟಿತ್ತು.
9 ಕೊಠಡಿಗಳನ್ನು ಹೊಂದಿರುವ ನೂತನ ಅತಿಥಿಗೃಹವನ್ನು 1997ರ ಡಿ.24ರಂದು ಉದ್ಘಾಟಿಸಲಾಗಿತ್ತು. ಇದಕ್ಕೆ “ವೆಂಕಟ ವಿಜಯಂ’ ಎಂದು ನಾಮಕರಣ ಮಾಡಲಾಗಿತ್ತು. ಇದನ್ನು ಟಿಟಿಡಿಗೆ ಹಸ್ತಾಂತರಿಸಲಾಯಿತು. ಆದರೆ ಅನೇಕ ವರ್ಷಗಳು ಕಳೆದರೂ ಟಿಟಿಡಿ ಮತ್ತು ಮಲ್ಯ ನಡುವೆ ಅಂತಿಮ ಒಪ್ಪಂದ ಏರ್ಪಡಲಿಲ್ಲ. ಇಬ್ಬರೂ ಉತ್ಸಾಹ ತೋರಲಿಲ್ಲ. ನಂತರ 2017ರ ಅ.11ರಂದು ಈ ಸಂಬಂಧ ಮಲ್ಯ ಅವರನ್ನು ಟಿಟಿಡಿ ಸಂಪರ್ಕಿಸಲು ಪ್ರಯತ್ನಿಸಿತು, ಆದರೆ ಸಾಧ್ಯವಾಗಲಿಲ್ಲ.
ಈ ನಡುವೆ “ವೆಂಕಟ ವಿಜಯಂ’ ಅತಿಥಿ ಗೃಹ ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆ ತಲುಪಿತು. ಇದನ್ನು ಪುನಃ ನಿರ್ಮಿಸಬೇಕೆಂದು ಇತ್ತೀಚೆಗೆ ಟಿಟಿಡಿ ಎಂಜಿನಿಯರ್ ವಿಭಾಗವು ತನ್ನ ವರದಿ ನೀಡಿತು. 2023ರ ಏ.3ರಂದು ಮಲ್ಯ ಅವರಿಗೆ ಟಿಟಿಡಿ ಶೋಕಾಸ್ ನೋಟಿಸ್ ನೀಡಿತು. ಆದರೆ ಪ್ರತ್ಯುತ್ತರ ಸಿಗಲಿಲ್ಲ.
ಹೀಗಾಗಿ ಈ ಅತಿಥಿ ಗೃಹದ ಮರು ನಿರ್ಮಾಣಕ್ಕಾಗಿ ನೂತನ ದಾನಿಗೆ ಈ ಜಮೀನನ್ನು ಮರು ಹಂಚಿಕೆ ಮಾಡಲು ಟಿಟಿಡಿ ಮುಂದಾಗಿದೆ. ಇದರ ನಿರ್ಮಾಣಕ್ಕಾಗಿ 5 ಕೋಟಿ ರೂ. ಹಾಗೂ ಮೇಲ್ಪಟ್ಟು ದೇಣಿಗೆ ನೀಡಲು ದಾನಿಗಳು ಮುಂದೆ ಬರಬಹುದು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.