ಕಮಲನಗರ: ಪಟ್ಟಣದ ಡಾ| ಚನ್ನಬಸವ ಪಟ್ಟದ್ದೇವರ ಕೆರೆ ದುರಸ್ತಿಗೆ ಲಕ್ಷಗಟ್ಟಲೆ ಹಣ ಖರ್ಚಾದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳಪೆ ಹಾಗೂ ಅಪೂರ್ಣ ಕಾಮಗಾರಿಯಾಗಿದೆ. ಕೆರೆಗಾಗಿ ಬಂದ ಹಣವನ್ನು ಭ್ರಷ್ಟರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಕೆರೆ ಪಕ್ಕದ ಹೊಲದ ರೈತರು ಆರೋಪಿಸಿದ್ದಾರೆ.
ಈ ಕೆರೆ ನಿರ್ಮಾಣದಿಂದ ಸುತ್ತ-ಮುತ್ತಲಿನ ರೈತರಿಗೆ ತುಂಬಾ ಅನುಕೂಲವಾಗಿತ್ತು. ರೈತರ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಕೆರೆ ನೀರಿನ ಪಾತ್ರ ಬಹುಮುಖ್ಯವಾಗಿರುವುದರಿಂದ ಸರ್ಕಾರ ಸಣ್ಣ ನೀರಾವರಿ ಇಲಾಖೆ ಅಧಿನದಲ್ಲಿ ಕೆರೆ ನಿರ್ಮಿಸಿತ್ತು. ಕೆಲ ವರ್ಷಗಳ ನಂತರ ಕೆರೆಯ ತಳಪಾಯ ಜೀರ್ಣಾವಸ್ಥೆಗೆ ತಲುಪಿದಾಗ ಅದರ ದುರಸ್ತಿಗಾಗಿ ವಿವಿಧ ಯೋಜನೆಗಳಡಿ ವರ್ಷವಾರು ಅಂದಾಜು 86 ಲಕ್ಷ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿ ಕೆರೆ ದುರಸ್ತಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.
ಅಧಿಕಾರಿಗಳು ಹಾಗೂ ಭ್ರಷ್ಟ ಚುನಾಯಿತ ಪ್ರತಿನಿಧಿಗಳ ಅಪವಿತ್ರ ಮೈತ್ರಿಯಿಂದ ಕೆರೆ ದುರಸ್ತಿ ಅಪೂರ್ಣ ಹಾಗೂ ಕಳಪೆಯಾಗಿದ್ದು, ಕೆರೆ ನಿರ್ಮಾಣಕ್ಕೆ ಖರ್ಚಾದ ಹಣದ 20 ಪಟ್ಟು ದುರಸ್ತಿಗಾಗಿ ಖರ್ಚು ಮಾಡಲಾಗಿದೆ. ಆದರೂ ಕೆರೆಯಲ್ಲಿ ನೀರು ನಿಂತಿಲ್ಲ ಎಂದು ರೈತ ಮುಖಂಡ ಪ್ರವೀಣ ಕುಲಕರ್ಣಿ ಆರೋಪಿಸಿದ್ದಾರೆ.
ಕೆರೆಯಲ್ಲಿ ನೀರು ಸಂಗ್ರಹವಾದರೆ ಸುತ್ತ-ಮುತ್ತಲಿನ ಮದನೂರ, ಖತಗಾಂವ, ರಾಂಪೂರ, ಡಿಗ್ಗಿ, ಕಮಲನಗರ ಗ್ರಾಮಕ್ಕೆ ನೀರಿನ ಸಮಸ್ಯೆ ಕಡಿಮೆಯಾಗುತ್ತದೆ. ಆದರೆ ಕೆರೆಯಲ್ಲಿ ಸಂಗ್ರಹವಾಗದ ಕಾರಣ ಅಕ್ಕ-ಪಕ್ಕದ ಗ್ರಾಮಗಳ ಕೊಳವೆ ಬಾವಿ, ತೆರೆದ ಬಾವಿಗಳಲ್ಲಿ ನೀರು ಬತ್ತಿದೆ. ಇದರಿಂದ ನೀರಿಗಾಗಿ ಹಾಹಾಕಾರ ಶುರುವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಗುಣಮಟ್ಟದ ಕಾಮಗಾರಿ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕೆರೆ ದುರಸ್ತಿಗಾಗಿ ಆರ್‌ಆರ್ ಮತ್ತು ಆರ್ ಯೋಜನೆಯಡಿ 2010-11ರಲ್ಲಿ 22.95 ಲಕ್ಷ, 2011-12ರಲ್ಲಿ 43.65 ಲಕ್ಷ, 2012-13ರಲ್ಲಿ 1.00 ಲಕ್ಷ ರೂ. ಹಣ ವೆಚ್ಚ ಮಾಡಲಾಗಿದೆ. ಪ್ರಧಾನ ಕಾಮಗಾರಿ ಕೆರೆಗಳ ಆಧುನೀಕರಣಕ್ಕಾಗಿ 2016-17ರಲ್ಲಿ 10.96 ಲಕ್ಷ ರೂ., 2017-18ರಲ್ಲಿ 8.74 ಲಕ್ಷ ರೂ. ಕೆರೆ ಅಭಿವೃದ್ಧಿಗಾಗಿ ಖರ್ಚಾದರೂ ಕೆರೆಯಲ್ಲಿ ನೀರು ಸಂಗ್ರಹವಾಗಿಲ್ಲ ಎಂದು ಓಂಕಾರ ಸೊಲ್ಲಾಪೂರೆ ತಿಳಿಸಿದ್ದಾರೆ.