Advertisement

ತುಂಗೆಗಾಗಿ ಕಾದಿವೆ ಕೆರೆ-ಬಾಂದಾರಗಳು;ಆಮೆಗತಿಯಲ್ಲಿ 140 ಕೋಟಿ ಮೊತ್ತದ ಯೋಜನೆ

06:22 PM Dec 19, 2023 | Team Udayavani |

ಲಕ್ಷ್ಮೇಶ್ವರ: ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕಿನ ಅಂಚಿಗೆ ಹರಿದಿರುವ ತುಂಗಭದ್ರಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ 140 ಕೋಟಿ ಮೊತ್ತದ (ಇಟಗಿ ಏತ ನೀರಾವರಿ) ಯೋಜನೆ ನನೆಗುದಿಗೆ ಬಿದ್ದಿದ್ದು, 6 ವರ್ಷ ಕಳೆದರೂ ಹನಿ ನೀರು ಕೆರೆಗಳಿಗೆ ಹರಿದಿಲ್ಲ.ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಗೆ ಯೋಜನೆ ಕೈಗನ್ನಡಿಯಾಗಿದೆ.

Advertisement

ಏನಿದು ಯೋಜನೆ?: ಕರ್ನಾಟಕ ನೀರಾವರಿ ನಿಗಮದಿಂದ ಶಿರಹಟ್ಟಿ/ಲಕ್ಷ್ಮೇಶ್ವರ ತಾಲೂಕಿನ 20 ಕೆರೆ ತುಂಬಿದ ಬಳಿಕ ನೈಸರ್ಗಿಕವಾಗಿ ಮಾರ್ಗದ ಬಾಂದಾರಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ 140 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ತಾಲೂಕಿನ ತುಂಗಭದ್ರಾ ನದಿ ಪಾತ್ರದ ಇಟಗಿ ಹತ್ತಿರ ಜಾಕ್‌ವೆಲ್‌ ನಿರ್ಮಿಸಿ ಅಲ್ಲಿಂದ ದೊಡ್ಡ
ಪೈಪ್‌ಲೈನ್‌ ಮೂಲಕ ಎತ್ತುವಳಿಯಾಗುವ ನೀರು 3 ಕಡೆ ಡೆಲಿವರಿ ಚೇಂಬರ್ನಲ್ಲಿ ಸಂಗ್ರಹವಾಗಿ ಅಲ್ಲಿಂದ ತಾಲೂಕಿನ 20 ಪ್ರಮುಖ ಕೆರೆ ಮತ್ತು ಬಾಂದಾರಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.

ಯೋಜನೆಯಲ್ಲಿ ತುಂಗಭದ್ರಾ ನದಿ ಸಮೀಪವೇ ಬೃಹತ್‌ ಜಾಕ್‌ವೆಲ್‌ ನಿರ್ಮಿಸಿ ಅಲ್ಲಿಂದ 835 ಎಚ್‌ಪಿಯ 5 ಮೋಟರ್‌ ಪಂಪ್‌ಗ್ಳ ಮೂಲಕ ದೇವಿಹಾಳದ ಗುಡ್ಡದ ಮೇಲೆ ನಿರ್ಮಿಸುವ ನೀರು ಸಂಗ್ರಹಣಾ ಘಟಕಕ್ಕೆ ನೀರು ಲಿಫ್ಟ್‌ ಮಾಡಲಾಗುವುದು. ಅಲ್ಲಿಂದ ತಾಲೂಕಿನ 20 ಪ್ರಮುಖ ಕೆರೆಗಳಿಗೆ ನೀರು ನೈಸರ್ಗಿಕವಾಗಿ ಹರಿಯಲಿದೆ.

2017ರಲ್ಲೇ ಚಾಲನೆ: ರಾಮಕೃಷ್ಣ ದೊಡ್ಡಮನಿ ಅವರು ಶಿರಹಟ್ಟಿ ಶಾಸಕರು ಮತ್ತು ನೀರಾವರಿ ನಿಗಮದ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿದ್ದ ವೇಳೆ ಯೋಜನೆ ತರುವಲ್ಲಿ ಯಶಸ್ವಿಯಾಗಿದ್ದರು. 2017ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರೇ ಯೋಜನೆಗೆ ಚಾಲನೆ ನೀಡಿದ್ದರು. ಆದರೆ ಎರಡು ವರ್ಷದ ಅವ ಧಿಗೆ ಕಾಮಗಾರಿ ಪೂರ್ಣಗೊಳಿಸಬೇಕಿದ್ದ ಮಂಗಳೂರಿನ ಓಷಿಯನ್‌ ಕನಸ್ಟ್ರಕ್ಷನ್‌ ಕಂಪನಿಯವರ ಆಮೆಗತಿಯಿಂದ ಮಹತ್ವಾಕಾಂಕ್ಷಿ ಯೋಜನೆ 6 ವರ್ಷವಾದರೂ ಸಾಕಾರಗೊಂಡಿಲ್ಲ. ಆದರೆ, ಕಾಮಗಾರಿ ವಿಳಂಬಕ್ಕೆ ಕೋವಿಡ್‌, ತಾಂತ್ರಿಕ, ಆಡಳಿತಾತ್ಮಕ ಮತ್ತು ಅರಣ್ಯ ಇಲಾಖೆ ಪರವಾನಗಿ ಕಾರಣ ಎಂದು ಹೇಳುತ್ತಾರೆ ಅಧಿಕಾರಿ ವರ್ಗ. ಈ ಕಾರಣಕ್ಕಾಗಿ ಈಗಾಗಲೇ ಮೂರು ಬಾರಿ ಕಾಮಗಾರಿ ಅವಧಿ ವಿಸ್ತರಣೆ ಮಾಡಿಕೊಡಲಾಗಿದೆ. ಆದಾಗ್ಯೂ ಇನ್ನೂ ಪೈಪ್‌ಲೈನ್‌ ಅಳವಡಿಕೆ, ನೀರು ಸಂಗ್ರಹಣಾ ಘಟಕ ನಿರ್ಮಾಣ, ವಿದ್ಯುತ್‌ ಸರಬರಾಜು ಕಾಮಗಾರಿ ಸೇರಿ ಬಹಳಷ್ಟು ಕಾಮಗಾರಿಗಳು ಬಾಕಿ ಇವೆ.

ಈಗ ಮತ್ತೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿದ್ದು, ಬಿಜೆಪಿ ಶಾಸಕ ಡಾ| ಚಂದ್ರು ಲಮಾಣಿ ಕಾಮಗಾರಿ ಬಗ್ಗೆ ಸದನದಲ್ಲೂ ಧ್ವನಿ ಎತ್ತಿದ್ದಾರೆ. ಇನ್ನಾದರೂ ಕಾಮಗಾರಿ ತ್ವರಿತವಾಗಿ ನಡೆಯಬೇಕಿದೆ. ನದಿ ನೀರು ಹರಿದು ಬರುವ ಕೆರೆಗಳಲ್ಲಿ ಹೂಳು ತುಂಬಿ ಗಿಡಗಂಟಿ ಬೆಳೆದಿದ್ದು, ಕೆರೆ-ಬಾಂದಾರ ಹೂಳೆತ್ತುವ ಕಾರ್ಯವೂ ಆಗಬೇಕಿದೆ.

Advertisement

ತುಂಗಭದ್ರಾ ನದಿ ನೀರು ಹರಿಯುವ ಕೆರೆಗಳು ಶಿರಹಟ್ಟಿ ತಾಲೂಕಿನ ತಂಗೋಡ, ಕೆರೆಕೊಪ್ಪ, ವಡವಿ, ಬೆಳಗಟ್ಟಿ, ತಾರಿಕೊಪ್ಪದಲ್ಲಿ 2, ಬೆಳ್ಳಟ್ಟಿಯಲ್ಲಿ 3, ರಣತೂರು, ದೇವಿಹಾಳ, ಛಬ್ಬಿ, ಮಜ್ನೂರು ಹಾಗೂ ಲಕ್ಷ್ಮೇಶ್ವರ ತಾಲೂಕಿನ
ಕುಂದ್ರಳ್ಳಿ, ಶೆಟ್ಟಿಕೇರಿ, ಅಡರಕಟ್ಟಿ, ಮಂಜಲಾಪುರ, ಇಟ್ಟಿಗೆರೆ ಕೆರೆ, ಕೆಂಪಿಗೆರೆ ಕೆರೆ, ಮುತ್ತಿಕೆರೆಗಳಿಗೆ ನೀರು ತುಂಬಿದ ಬಳಿಕ ನೈಸರ್ಗಿಕವಾಗಿ ಮಾರ್ಗದ ಚೆಕ್‌ ಡ್ಯಾಂಗಳಿಗೆ ಹರಿಯಲಿದೆ.

ಕೆರೆಗೆ ನೀರು ತುಂಬಿಸುವ ಇಟಗಿ ಮತ್ತು ನೀರಾವರಿ ಉದ್ದೇಶದ ಜಾಲವಾಡ ಏತ ನೀರಾವರಿ ಯೋಜನೆ ಕಾಮಗಾರಿಗಳು
ಆಮೆಗತಿಯಲ್ಲಿ ಸಾಗುತ್ತಿರುವುದರ ಬಗ್ಗೆ ಬೇಸರವಿದೆ. ಅನೇಕ ಬಾರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಬರುವ ಮಾರ್ಚ್‌ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಎಂಜಿನಿಯರ್‌, ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ.
*ಡಾ| ಚಂದ್ರು ಲಮಾಣಿ, ಶಾಸಕ

ಅನುದಾನ ಕಲ್ಪಿಸಿ ಆರೇಳು ವರ್ಷಗಳು ಕಳೆದರೂ ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷದಿಂದ ಮಹತ್ವಾಕಾಂಕ್ಷಿ
ಯೋಜನೆಗಳು ನನೆಗುದಿಗೆ ಬಿದ್ದಿವೆ. ಕ್ಷೇತ್ರದ ಶಾಸಕರು ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಸಾಗುವಂತೆ ಮಾಡಿ ಆದಷ್ಟು ಬೇಗ ಯೋಜನೆ ಸಾಕಾರಗೊಳ್ಳಲು ಇಚ್ಛಾಸಕ್ತಿ ತೋರಬೇಕು. ಇಲ್ಲದಿದ್ದರೆ ರೈತರೊಡಗೂಡಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ.
*ರಾಮಕೃಷ್ಣ ದೊಡ್ಡಮನಿ, ಮಾಜಿ ಶಾಸಕ

ಜಾಕ್‌ವೆಲ್‌ ನಿರ್ಮಾಣ ಸಂದರ್ಭದಲ್ಲಿ ಹೆಚ್ಚಾದ ನದಿ ಹರಿವು, ಮಾರ್ಗ ಮಧ್ಯದಲ್ಲಿ ಅರಣ್ಯ, ವಿದ್ಯುತ್‌, ಸಾರಿಗೆ ಸೇರಿ ವಿವಿಧ ಇಲಾಖೆಗಳ ಅನುಮೋದನೆ ಮತ್ತು ರೈತರ ಸಹಕಾರ ಪಡೆಯುವುದು, ಸ್ಥಳ ಬದಲಾವಣೆ, ಭೂಸ್ವಾಧೀನ ಮತ್ತು ಕೋವಿಡ್‌
ಕಾರಣದಿಂದ ಯೋಜನೆ ವಿಳಂಬವಾಗಿದೆ. ಈಗಾಗಲೇ ಜಾಕ್‌ವೆಲ್‌ ನಿರ್ಮಾಣ, ಪಂಪ್‌ ಹೌಸ್‌ ನಿರ್ಮಾಣ, ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ. ಇನ್ನಷ್ಟು ಪೈಪ್‌ ಲೈನ್‌, ವಿದ್ಯುತ್‌ ಸಂಪರ್ಕ, ಡೆಲಿವರಿ ಚೇಂಬರ್‌
ಕಾಮಗಾರಿ ಪ್ರಗತಿ ಹಂತದಲ್ಲಿದೆ. ಮಾರ್ಚ್‌ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ.
*ನಾಗರಾಜ ಎಚ್‌.,
ಎಇಇ, ಕರ್ನಾಟಕ ನೀರಾವರಿ ನಿಗಮ

*ಮುಕ್ತಾ ಆದಿ

Advertisement

Udayavani is now on Telegram. Click here to join our channel and stay updated with the latest news.

Next