Advertisement

ರೈತನ ಬಾಳು ಬೆಳಗುವುದೇ ಕೆರೆ ಹೂಳು?

10:19 AM Feb 17, 2019 | Team Udayavani |

ರಾಯಚೂರು: ರೈತಾಪಿ ವರ್ಗದ ಹಿತ ಕಾಯುವ ಸದಾಶಯದೊಂದಿಗೆ ಭಾರತೀಯ ಜೈನ ಸಂಘಟನೆಯಿಂದ ಹಮ್ಮಿಕೊಂಡ ಕೆರೆ ಹೂಳೆತ್ತುವ ಕಾರ್ಯಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಈಗ ಅಲ್ಲಿ ಸಾಗಿಸುತ್ತಿರುವ ಹೂಳಿನ ಭರಾಟೆ ನೋಡಿದರೆ ರೈತರ ಪಾಲಿಗೆ ಮುಂಬರುವ ದಿನಗಳು ಮತ್ತಷ್ಟು ಆಶಾಯದಾಯಕವಾಗಿರಲಿವೆ ಎಂಬ ವಿಶ್ವಾಸ ಮೂಡಿದೆ.

Advertisement

ಸರ್ಕಾರ ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಸಹಯೋಗದಲ್ಲಿ ತಾಲೂಕಿನ ಕಟ್ಲಟೂರು ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ. ನಿತ್ಯ ನೂರಾರು ಟ್ರ್ಯಾಕ್ಟರ್‌ಗಳ ಮೂಲಕ ಸಾವಿರಾರು ಟ್ರಿಪ್‌ ಫಲವತ್ತಾದ ಹೂಳನ್ನು ರೈತರ ಹೊಲಗಳಿಗೆ ಸಾಗಿಸಲಾಗುತ್ತಿದೆ. ಕೇಂದ್ರ ಸರ್ಕಾರ ನೀತಿ ಆಯೋಗದಡಿ ಭಾರತೀಯ ಜೈನ ಸಂಘಟನೆಗೆ ಈ ಯೋಜನೆ ಹೊಣೆ ನೀಡಿದ್ದು, ಇದಕ್ಕೆ ರಾಜ್ಯ ಸರ್ಕಾರ ಹಣಕಾಸಿನ ನೆರವು ನೀಡಿದೆ. 

ಆರಂಭಿಕ ಹಂತದಲ್ಲಿ ಸುಮಾರು 300 ಎಕರೆ ವ್ಯಾಪ್ತಿಯ ಕಟ್ಲಟೂರು ಕೆರೆಯನ್ನು ಹೂಳೆತ್ತಲು ಆಯ್ಕೆ ಮಾಡಲಾಗಿದೆ. ಈ ಕಾಮಗಾರಿಗೆ ಇದೇ ಕೆರೆಯಲ್ಲಿ ಫೆ.1ರಂದು ಚಾಲನೆ ನೀಡಲಾಗಿತ್ತು. ಈವರೆಗೆ 13 ದಿನಗಳ ಕಾಲ ಹೂಳೆತ್ತುವ ಕಾರ್ಯ ನಡೆದಿದ್ದು, 10,700 ಟ್ರ್ಯಾಕ್ಟರ್‌ ಹೂಳು ಸಾಗಿಸಲಾಗಿದೆ. ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೆ ಕೆಲಸ ನಡೆಯುತ್ತಿದ್ದು, ಸುಮಾರು 30 ಕಿ.ಮೀ. ದೂರದಿಂದಲೂ ರೈತರು ಬಂದು ಟ್ರ್ಯಾಕ್ಟರ್‌ಗಳಲ್ಲಿ ಹೂಳು ತೆಗೆದುಕೊಂಡು ಹೋಗುತ್ತಿರುವುದು ವಿಶೇಷ.

ಬಿಡುವಿಲ್ಲದ ಕೆಲಸ: ಭಾರತೀಯ ಜೈನ ಸಂಘಟನೆಯವರು ಜೆಸಿಬಿ, ಹಿಟಾಚಿಗಳನ್ನು ಒದಗಿಸಿದ್ದು, ಅದಕ್ಕೆ ಬೇಕಾದ ಡೀಸೆಲ್‌ ಖರ್ಚನ್ನು ಸರ್ಕಾರ ಭರಿಸುತ್ತಿದೆ. ರೈತರು ತಮ್ಮದೇ ವಾಹನ ತಂದು ಯಾವುದೇ ಶುಲ್ಕ ಪಾವತಿಸದೆ ಈ ಹೂಳು ತೆಗೆದುಕೊಂಡು ಹೋಗಬಹುದು. ಆದರೆ, ಈ ಭಾಗದ ಸುತ್ತಲಿನ ಪ್ರದೇಶಗಳಲ್ಲಿ ಇಟ್ಟಿಗೆ ಭಟ್ಟಿಗಳು ಹೆಚ್ಚಾಗಿವೆ. ಆರಂಭದಲ್ಲಿ ಆ ವರ್ತಕರೇ ಹೂಳು ಹೆಚ್ಚಾಗಿ ತೆಗೆದುಕೊಂಡು ಹೋಗಿದ್ದಾರೆ. ಆದರೆ, ಈಗ ರೈತರಿಗೆ ಅದರ ಮಹತ್ವ ಅರಿವಾಗಿದೆ. ಈಗ 230ಕ್ಕೂ ಅಧಿಕ ಟ್ರ್ಯಾಕ್ಟರ ಗಳು ಹೂಳು ಸಾಗಿಸುವ ಕೆಲಸದಲ್ಲಿ ತೊಡಗಿವೆ. ಒಂದು ಇಟಾಚಿ, ಐದು ಜೆಸಿಬಿಗಳು ಬಿಡುವಿಲ್ಲದೇ ಶ್ರಮಿಸುತ್ತಿವೆ. ನಿತ್ಯ ಪ್ರತಿ ಟ್ರ್ಯಾಕ್ಟರ್‌ ಮೂರರಿಂದ ಆರು ಟ್ರಿಪ್‌ ಹೂಳು ಸಾಗಿಸುತ್ತಿದೆ. ನಿತ್ಯ ಸಾವಿರಕ್ಕೂ ಅಧಿಕ ಟ್ರಿಪ್‌ ಹೂಳು ಸಾಗಿಸಲಾಗುತ್ತಿದೆ. ಜೆಸಿಬಿಗಳಿಂದ ಕೆಲಸ ಸಾಗುತ್ತಿಲ್ಲ ಎಂಬ ಕಾರಣಕ್ಕೆ ಆಂಧ್ರದಿಂದ ಮೂರು ಹಿಟಾಚಿಗಳನ್ನು ತರಿಸಲು ಮುಂದಾಗಿದ್ದಾರೆ ಆಯೋಜಕರು.

ಹೂಳಿಗೆ ಭಾರೀ ಮೌಲ್ಯ: ಹೇಳಿ ಕೇಳಿ ಈ ಭಾಗ ಬಿರು ಬಿಸಿಲಿನ ನಾಡಾಗಿದ್ದು, ಮಸಬು ಭೂಮಿ ಹೆಚಾಗಿದೆ. ನೀರಿದ್ದರೆ ಬೆಳೆ ತೆಗೆಯುವುದು ಕಷ್ಟಕರವಾಗಿರುವಾಗ ಇಂಥ ಮಣ್ಣಲ್ಲಿ ಇಳುವರಿ ಪಡೆಯುವುದು ಕಷ್ಟಕರ. ಇದನ್ನರಿತ ಸುತ್ತಲಿನ ಜಮೀನುಗಳ ಮಾಲೀಕರು ಈ ಕೆರೆಯ ಫಲವತ್ತಾದ ಮಣ್ಣನ್ನು ತಮ್ಮ ಜಮೀನುಗಳಿಗೆ ಹಾಕಿಸುತ್ತಿದ್ದಾರೆ. ಎಕರೆಗೆ ಏನಿಲ್ಲವೆಂದರೂ 50 ರಿಂದ 60 ಟ್ರಿಪ್‌ ಹೂಳು ಹಾಕುತ್ತಿದ್ದಾರೆ. 

Advertisement

ಸ್ಥಳೀಯರು ಮಾತ್ರವಲ್ಲದೇ 30 ಕಿ.ಮೀ. ದೂರದಿಂದಲೂ ಟ್ರ್ಯಾಕ್ಟರ್‌ಗಳು ಬರುತ್ತಿದ್ದು, ಜೆಸಿಬಿ, ಹಿಟಾಚಿಗಳಿಗೆ  ಡುವಿಲ್ಲದ ಕೆಲಸವಿದೆ. ಈ ಮಣ್ಣಿನಿಂದ ಕನಿಷ್ಠ 4-5 ವರ್ಷ ಯಾವುದೇ ಗೊಬ್ಬರವಿಲ್ಲದೇ ಉತ್ತಮ ಇಳುವರಿ ಪಡೆಯಬಹುದು ಎನ್ನುವುದು ರೈತರ ಅನಿಸಿಕೆ.

ಇನ್ನೂ 15 ದಿನ ಬೇಕು: ಇದು 95 ಹೆಕ್ಟೇರ್‌ ಪ್ರದೇಶದ ದೊಡ್ಡ ಕೆರೆಯಾಗಿದೆ. ಕಳೆದ 13 ದಿನಗಳಲ್ಲಿ 3 ಹೆಕ್ಟೇರ್‌ನಷ್ಟು ಮಾತ್ರ ಹೂಳು ಸಾಗಿಸಲಾಗಿದೆ. ತಗ್ಗು ದಿನ್ನೆಗಳು ಹೆಚ್ಚಾಗಿದ್ದರಿಂದ ಅವುಗಳನ್ನು ಸಮತಟ್ಟು ಮಾಡಿಕೊಳ್ಳಲು ಸಾಕಷ್ಟು ಸಮಯ ಹಿಡಿದಿದೆ. ಅಲ್ಲದೇ, ಹೆಚ್ಚುವರಿ ಹಿಟಾಚಿಗಳನ್ನು ತರಿಸುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ತೀವ್ರವಾಗಿ ಕೆಲಸ ಮಾಡಬಹುದು. ಇನ್ನೂ 15 ದಿನಗಳಲ್ಲಿ ಕೆರೆ ಹೂಳು ಸಾಗಿಸುವ ಕೆಲಸ ಮುಗಿಯಬಹುದು ಎನ್ನುತ್ತಾರೆ ಬಿಜೆಎಸ್‌ ಸದಸ್ಯರು.

ಸರ್ಕಾರ ಕೆರೆ ಹೂಳೆತ್ತಲು ಪ್ರತಿ ವರ್ಷ ಕೋಟ್ಯಂತರ ಹಣ ಖರ್ಚು ಮಾಡುತ್ತಿದ್ದರೂ ಜಿಲ್ಲೆಯಲ್ಲಿ ಒಂದೇ ಒಂದು ಕೆರೆ ಚಿತ್ರಣ ಬದಲಾಗಿಲ್ಲ. ನರೇಗಾದಡಿಯೂ ಸಾವಿರಾರು ಮಾನವ ದಿನಗಳನ್ನು ವ್ಯಯಿಸಿದರೂ ಪ್ರತಿಫಲ ಶೂನ್ಯ. ಆದರೆ, ಭಾರತೀಯ ಜೈನ ಸಂಘಟನೆ ಕೈಗೊಂಡಿರುವ ಕೆರೆ ಹೂಳೆತ್ತುವ ಯೋಜನೆಗೆ ಆರಂಭದಲ್ಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಫಲಿತಾಂಶ ಕಂಡು ಬಂದಿದೆ.

ಎಲ್ಲೆಲ್ಲಿ ಕೆರೆ ಕಾಮಗಾರಿ ಆರಂಭದಲ್ಲಿ ಈ ಕೆರೆ ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಸುಮಾರು 40 ಕೆರೆಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 8, ನಗರ ಕ್ಷೇತ್ರ ವ್ಯಾಪ್ತಿಯಲ್ಲಿ 6, ದೇವದುರ್ಗ ಕ್ಷೇತ್ರದಲ್ಲಿ 6, ಮಾನ್ವಿಯಲ್ಲಿ 5, ಲಿಂಗಸುಗೂರು, ಮಸ್ಕಿಯಲ್ಲಿ ತಲಾ 7 ಹಾಗೂ ಸಿಂಧನೂರು ಕ್ಷೇತ್ರದಲ್ಲಿ 1 ಕೆರೆ ಹೂಳೆತ್ತಲಾಗುವುದು. ಅದರ ಜತೆಗೆ ಫೆ.20ರಂದು ಯಾದಗಿರಿ ಜಿಲ್ಲೆಯಲ್ಲಿಯೂ ಈ ಯೋಜನೆಗೆ ಚಾಲನೆ ಸಿಗಲಿದೆ.

ಸಂಘಟನೆಗಳ ಕಿರಿಕಿರಿ ಆರಂಭದಲ್ಲಿ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು ಈ ಕಾರ್ಯಕ್ಕೆ ಅನಗತ್ಯ ಕಿರಿಕಿರಿ ನೀಡಿದ್ದಾರೆ. ನಮ್ಮ ವಾಹನಗಳನ್ನು ಪಡೆಯಿರಿ, ಹೂಳನ್ನು ನೀವೇ ಸಾಗಿಸಿ, ನಮ್ಮ ಜೆಸಿಬಿಗಳನ್ನೇ ಕೆಲಸಕ್ಕೆ ಪಡೆಯಿರಿ ಎಂಬಿತ್ಯಾದಿ ತಗಾದೆಗಳನ್ನು ತೆಗೆದಿದ್ದಾರೆ. ಈ ಕುರಿತು ಸಂಘಟನೆಯವರು ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ, ಜಿಲ್ಲಾಧಿಕಾರಿಗಳೇ ಮಧ್ಯಪ್ರವೇಶಿಸಿ ಇದು ಸರ್ಕಾರಿ ಕೆಲಸ. ಯಾರಾದರೂ ಅಡ್ಡಿಪಡಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈಗ ಎಲ್ಲವೂ ಸುಸೂತ್ರವಾಗಿ ಸಾಗಿದೆ

ನಮ್ಮ ಸಂಘಟನೆ ಈ ಮುಂಚೆ ಬೇರೆ ರಾಜ್ಯಗಳಲ್ಲಿ ಈ ಯೋಜನೆ ಜಾರಿಗೊಳಿಸಿದೆ. ಈಗ ಕಟ್ಲಟೂರಲ್ಲಿ ಕೆರೆ ಹೂಳೆತ್ತುವ ಕಾರ್ಯ ಆರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ. ದೊಡ್ಡ ಕೆರೆಯಾಗಿರುವ ಕಾರಣ ಹೆಚ್ಚು ಕೆಲಸ ಮಾಡಬೇಕಿದೆ. ಇದಕ್ಕಾಗಿ ದೊಡ್ಡ ಮಟ್ಟದ ಹಿಟಾಚಿಗಳನ್ನು ತರಿಸಲು ಟೆಂಡರ್‌ ಕರೆಯಲಾಗಿದೆ. 15 ದಿನಗಳಲ್ಲಿ ಈ ಕೆರೆ ಕೆಲಸ ಮುಗಿಯಲಿದ್ದು, ಶೀಘ್ರದಲ್ಲೇ ಬಾಕಿ ಕೆರೆಗಳ ಕಾಮಗಾರಿ ಆರಂಭಿಸಲಾಗುವುದು.  ಗೌತಮ್‌ ಘಿಯಾ, ಕೆರೆ ಹೂಳೆತ್ತುವ ಯೋಜನೆ ಉಸ್ತುವಾರಿ ಈ ಯೋಜನೆಗೆ ಜಿಲ್ಲಾಡಳಿತ ನೀಡಿದ ಸಹಕಾರ ಸ್ಮರಣೀಯ.

 ನಿರೀಕ್ಷೆ ಮೀರಿ ಜನ ಹೂಳು ಸಾಗಿಸುತ್ತಿದ್ದಾರೆ. ಆದರೆ, ಇನ್ನೂ ಪ್ರಚಾರದ ಅಗತ್ಯವಿದೆ. ಈ ಹೂಳು ಬಳಸುವುದರಿಂದ ಭೂಮಿ ಫಲವತ್ತತೆ ಹೆಚ್ಚುವುದರ ಜತೆಗೆ ಕರೆಯಲ್ಲಿ ನೀರು ನಿಂತರೆ ಅಂತರ್ಜಲವೂ ಹೆಚ್ಚಲಿದೆ. ಈ ಬಗ್ಗೆ ಜನರಿಗೆ ಮಾಹಿತಿ ನೀಡಬೇಕಿದೆ. ಈಗಾಗಲೇ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕೆರೆಗಳ ಪಟ್ಟಿಯನ್ನು ಜಿಲ್ಲಾಡಳಿತ ಅಂತಿಮಗೊಳಿಸಿದ್ದು, ಶೀಘ್ರದಲ್ಲೇ ಬಾಕಿ ಕೆಲಸ ಆರಂಭಿಸಲಾಗುವುದು.
 ಅಜಿತ್‌ರಾಜ್‌ ಸಂಚೇಟಿ,  ರಾಜ್ಯ ಸಂಯೋಜಕ, ಕೆರೆ ಹೂಳೆತ್ತುವ ಯೋಜನೆ, ಬಿಜೆಎಸ್‌

„ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next