Advertisement

ಕೆರೆ ಅಂಗಳವೀಗ ಬೂದಿ ಮುಚ್ಚಿದ ಕೆಂಡ

11:43 AM Jan 21, 2018 | Team Udayavani |

ಶುಕ್ರವಾರ ಮಧ್ಯಾಹ್ನದಿಂದಲೇ ಬೆಳ್ಳಂದೂರು ಕೆರೆಯ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದ ಯೋಧರು, ಅಗ್ನಿಶಾಮಕ ದಳ, ರಾಜ್ಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ, ಸತತ 27 ಗಂಟೆ ಕಾರ್ಯಾಚರಣೆ ನಡೆಸಿ ಅಗ್ನಿ ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕೆರೆ ಅಂಗಳದಲ್ಲಿ ಇನ್ನೂ ಹೊಗೆಯಾಡುತ್ತಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

Advertisement

ಬೆಂಗಳೂರು: ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದ ಬೆಳ್ಳಂದೂರು ಕೆರೆಯ ನೂರಾರು ಎಕರೆ ಪ್ರದೇಶದಲ್ಲಿ ಶುಕ್ರವಾರ ವ್ಯಾಪಿಸಿದ್ದ ಬೆಂಕಿಯನ್ನು ಯೋಧರು, ಅಗ್ನಿಶಾಮಕ ಇಲಾಖೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಸಿಬ್ಬಂದಿಯ ಸತತ 27 ಗಂಟೆ ಕಾರ್ಯಾಚರಣೆ ನಡೆಸಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆರೆಯ ಏಳು ಕಡೆ ಕಾಣಿಸಿಕೊಂಡಿದ್ದ ಬೆಂಕಿ ಸಂಪೂರ್ಣ ನಂದಿದ್ದರೂ ಅಲ್ಲಲ್ಲಿ ಒಣಗಿದ ಹುಲ್ಲಿನ ಪ್ರದೇಶದಲ್ಲಿ ಮತ್ತೆ ಬೆಂಕಿ ವ್ಯಾಪಿಸಿ ಹೊಗೆ ಕಾಣಿಸಿಕೊಳ್ಳುವುದು ಮುಂದುವರಿದಿದೆ. ಹಾಗಾಗಿ ನಾನಾ ಇಲಾಖೆಗಳು ಬೆಂಕಿ ಮತ್ತೆ ಕಾಣಿಸಿಕೊಳ್ಳದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕಾರ್ಯದಲ್ಲಿ ನಿರತವಾಗಿವೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಹಲವು ನಿರ್ದೇಶನದ ಹೊರತಾಗಿಯೂ ಬೆಂಕಿ ಅನಾಹುತ ಸಂಭವಿಸಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಭೇಟಿ ನೀಡಿದ್ದು, ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಘಟನೆಗೆ ರಾಜ್ಯ ಸರ್ಕಾರವನ್ನೇ ಹೊಣೆ ಎಂದಿದ್ದಾರೆ. ಆದರೆ ಆರೋಪವನ್ನು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅಲ್ಲಗಳೆದಿದ್ದಾರೆ.

ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಅವರು ಘಟನೆ ಕುರಿತು ವರದಿ ನೀಡುವಂತೆ ಸಂಬಂಧಪಟ್ಟ ಎಲ್ಲ ಇಲಾಖೆಗೆ ಸೂಚನೆ ನೀಡಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಡಿಎಗೆ ನೋಟಿಸ್‌ ನೀಡಲು ಮುಂದಾಗಿದೆ. ಶುಕ್ರವಾರ ಬೆಳಗ್ಗೆ 10 ಗಂಟೆ ಹೊತ್ತಿಗೆ ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ವ್ಯಾಪಕವಾಗಿ ಹರಡಿತ್ತು.

Advertisement

ಸಮೀಪದಲ್ಲೇ ಇರುವ ರಕ್ಷಣಾ ಇಲಾಖೆಯ 5000ಕ್ಕೂ ಹೆಚ್ಚು ಸಿಬ್ಬಂದಿ ಮಧ್ಯಾಹ್ನ 12ರ ವೇಳೆಗೆ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾದರು. ಬಳಿಕ ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ನ ಸುಮಾರು 100 ಸಿಬ್ಬಂದಿ ಕಾರ್ಯಾಚರಣೆಗೆ ಕೈಜೋಡಿದರು. ಸುಮಾರು 27 ಗಂಟೆ ನಿರಂತರ ಕಾರ್ಯಾಚರಣೆ ನಂತರ ಶನಿವಾರ ಮಧ್ಯಾಹ್ನದ ಹೊತ್ತಿಗೆ ಬೆಂಕಿ ನಿಯಂತ್ರಣಕ್ಕೆ ಬಂತ್ತು.

ಕಸದಿಂದ ಹೊಗೆ: ಬೆಂಕಿ ಹೊತ್ತಿಕೊಂಡ ಪ್ರದೇಶದ ಭಾರಿ ಪ್ರಮಾಣದ ಕಸ ರಾಶಿಯಿದ್ದು, ಕೆಳ ಭಾಗದಲ್ಲಿ ಆಸ್ಪತ್ರೆ ತ್ಯಾಜ್ಯ, ಗಾಜಿನ ಚೂರು ತುಂಬಿವೆ. ಹೀಗಾಗಿ ಬೆಂಕಿ ಜ್ವಾಲೆ ತಗ್ಗಿದರೂ ಹೊಗೆಯನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗಿಲ್ಲ. ಹಾಗಾಗಿ ಸದ್ಯ ಬೆಂಕಿ ಹೊತ್ತಿಕೊಂಡ ಪ್ರದೇಶದಲ್ಲಿ ಸುಮಾರು 25 ಪೈಪ್‌‌ ಮೂಲಕ ಎಲ್ಲೆಡೆ ಸ್ಪ್ರಿಂಕ್ಲರ್‌ ಅಳವಡಿಸಿ, ಎರಡು ಪಂಪ್‌ಗ್ಳ ಮೂಲಕ ಕೆರೆಯ ಹರಿಸಿ ನಿಯಂತ್ರಿಸುವ ಕಾರ್ಯ ಮುಂದುವರಿದಿದೆ.

ಸ್ಥಳದಲ್ಲಿದ್ದ 12 ವಾಹನಗಳ ಪೈಕಿ 10 ವಾಹನಗಳು ವಾಪಸ್ಸಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎರಡು ವಾಹನಗಳನ್ನು ಸ್ಥಳದಲ್ಲೇ ಇರಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಬೆಳ್ಳಂದೂರು ಕೆರೆಗೆ ಕೇಂದ್ರ ಸಚಿವ ಪ್ರಕಾಶ್‌ ಜಾವೇಡಕರ್‌, ಸ್ಥಳೀಯ ಶಾಸಕ ಅರವಿಂದ್‌ ಲಿಂಬಾವಳಿ, ಎಎಸ್‌ಸಿ ಸೇನಾ ಕ್ಯಾಂಪ್‌ ಮುಖ್ಯಸ್ಥ ಲೆ. ಜನರಲ್‌ ವಿಪನ್‌ ಗುಪ್ತಾ,  ಮೇಯರ್‌ ಸಂಪತ್‌ರಾಜ್‌ ಭೇಟಿ ನೀಡಿ ಪರಿಶೀಲಿಸಿದರು.

ಯೋಧನಿಗೆ ಕಡಿದ ಹಾವು: ಕೆರೆ ಪಕ್ಕದಲ್ಲೇ ಸೇನಾ ಕ್ಯಾಂಪ್‌ ಇದ್ದು, ಸೇನಾ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದ ವೇಳೆ ಯೋಧ ಮನೋರಂಜನ್‌ ರಾಯ್‌ ಅವರಿಗೆ ಹಾವು ಕಡಿದಿದೆ. ತಕ್ಷಣ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ ಎಂದು ಸೇನಾ ಕ್ಯಾಂಪ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕೆರೆಯಲ್ಲಿನ ಅತ್ಯಂತ ವಿಷಕಾರಿ ಅಂಶಗಳಿಂದ ನೀರು ಸಂಪೂರ್ಣ ಕಲುಷಿತವಾಗಿದೆ. ಇದರಿಂದ ಜಲಚರಗಳಿಗೆ ಮಾತ್ರವಲ್ಲದೆ ಸುತ್ತಮುತ್ತಲ ನಿವಾಸಿಗಳಿಗೂ ತೊಂದರೆಯಾಗಲಿದೆ. ಸುತ್ತಮುತ್ತಲ ಕೈಗಾರಿಕೆಗಳಿಂದ ಕೆರೆಗೆ ಸೇರುತ್ತಿರುವ ವಿಷಕಾರಿ ರಾಸಾಯನಿಕಗಳಿಂದಾಗಿ ನೀರು ಮಲಿನಗೊಂಡಿದೆ.

ಸ್ಥಳೀಯರಿಗೂ ಸಮಸ್ಯೆ: ಈ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಹಿಂದೆ ಸಾಕಷ್ಟು ಬಾರಿ ಬೆಂಕಿ ಕಾಣಿಸಿಕೊಂಡಿದೆ. ಜತೆಗೆ ನೊರೆಕೂ ಸೃಷ್ಟಿಯಾಗಿ ಸ್ಥಳೀಯರನ್ನು ಇನ್ನಿಲ್ಲದಂತೆ ಕಾಡಿದೆ. ಇವೆಲ್ಲದರ ಪರಿಣಾಮ, ಸ್ಥಳೀಯರ ಆರೋಗ್ಯ ಹದಗೆಟ್ಟಿದ್ದು, ಅಲರ್ಜಿ, ಅಸ್ತಮಾ, ಕೆಮ್ಮು, ಜ್ವರ ಕಾಣಿಸಿಕೊಳ್ಳುತ್ತಿದೆ. ಕೆರೆ ಸ್ವತ್ಛಗೊಳಿಸುವಂತೆ ಬಿಬಿಎಂಪಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿ ನಿಂಗರಾಜು ಆರೋಪಿಸಿದರು.

ಮಣ್ಣು ಸುರಿಯಬಹುದಿತ್ತು: ಬೆಂಕಿ ಹೊತ್ತಿಕೊಂಡ ಸ್ಥಳಕ್ಕೆ ವಾಹನ ಸಂಚರಿಸಲು ಅವಕಾಶವಿರದ ಕಾರಣ ತ್ವರಿತವಾಗಿ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. 100ಕ್ಕೂ ಅಧಿಕ ಸಿಬ್ಬಂದಿ 16 ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆರೆಯ ತುಂಬಾ ಕಸದ ರಾಶಿ ತುಂಬಿದ್ದು, ವ್ಯಾಪಕವಾಗಿ ಹರಡಲು ಕಾರಣವಾಗಿರಬಹುದು. ಆದರೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಅಗ್ನಿಶಾಮಕ ಇಲಾಖೆಯ ನಿರ್ದೇಶಕ ರಮೇಶ್‌ ತಿಳಿಸಿದರು.

ಕೆರೆ ಸ್ವತ್ಛತೆ ನಮ್ಮ ಕೆಲಸವಲ್ಲ: “ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡ ಬೆಂಕಿ ನಮ್ಮ ಕ್ಯಾಂಪ್‌ ಕಡೆ ಹರಡದಂತೆ ತಡೆಯಲು ನಾವು ಸಮರ್ಥವಾಗಿದ್ದೇವೆ. ಹಾಗೆಂದು ಕೆರೆಯ ಸ್ವತ್ಛತೆ ನಮ್ಮ ಕೆಲಸವಲ್ಲ,’ ಎಂದು ಎಎಸ್‌ಸಿ ಕಾಲೇಜು ಮತ್ತು ಸೆಂಟರ್‌ನ ಲೆಫ್ಟಿನೆಂಟ್‌ ಜನರಲ್‌ ವಿಪನ್‌ ಗುಪ್ತಾ ಹೇಳಿದರು.

ಬೆಳ್ಳಂದೂರು ಕೆರೆ ಅಗ್ನಿ ಅವಘಡ ಕುರಿತ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಮಧ್ಯಾಹ್ನ 12.30ರ ಸುಮಾರಿಗೆ ನಮ್ಮ ಸೆಂಟ್ರಿಗಳಿಂದ ಮಾಹಿತಿ ತಿಳಿಯಿತು. ರಕ್ಷಣಾ ಇಲಾಖೆ ಜಾಗಕ್ಕೂ ವ್ಯಾಪಿಸಿದ್ದರಿಂದ ಕ್ಷಿಪ್ರ ಕಾರ್ಯಾಚರಣೆ ಆರಂಭಿಸಿ ನಂದಿಸಿದ್ದೇವೆ.

ಪ್ರತಿ ತಂಡದಲ್ಲಿ 700-800 ಮಂದಿಯಂತೆ 5000 ಯೋಧರು ಹಾಗೂ ಆರು ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ ನಡೆಸಿ ಕ್ಯಾಂಪ್‌ ಕಡೆ ಬೆಂಕಿ ಹರಡದಂತೆ ಎಚ್ಚರಿಕೆ ವಹಿಸಲಾಯಿತು. ಶುಕ್ರವಾರ ರಾತ್ರಿ 7.30ಕ್ಕೆ ಮತ್ತೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಜ್ವಾಲೆಯಿಂದ ಕೆರೆಯಲ್ಲಿದ್ದ ಜಲಚರಗಳು ಹೊರಬಂದಿದ್ದು, ಯೋಧರೊಬ್ಬರಿಗೆ ಹಾವು ಕಡಿದಿದೆ.

ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಬೆಂಕಿ ಹೊತ್ತಿಕೊಂಡಿರುವುದು ಬೆಳ್ಳಂದೂರು, ಇಬ್ಬಲೂರು ಭಾಗದಿಂದ. ಹೀಗಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು. ಮೇಜರ್‌ ಜನರಲ್‌ ಎನ್‌.ಎಸ್‌.ರಾಜ್‌ಪುರೋಹಿತ್‌ ಇತರರು ಉಪಸ್ಥಿತರಿದ್ದರು.

ಆಡಳಿತ ವೈಫ‌ಲ್ಯವೇ ದುರಂತಕ್ಕೆ ಕಾರಣ: ಬಿಎಸ್‌ವೈ: ರಾಜ್ಯ ಸರ್ಕಾರದ ಆಡಳಿತ ವೈಫ‌ಲ್ಯದಿಂದ ಬೆಳ್ಳಂದೂರು ಕೆರೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ. 2015ರ ಮೇ 16ರಂದು ನಡೆದ ಘಟನೆಯ ನಂತರವೂ  ಸರ್ಕಾರದ ವಿವಿಧ ಆಡಳಿತ ಘಟಕಗಳು ಎಚ್ಚೆತ್ತುಕೊಂಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ.

ಬೆಳ್ಳಂದೂರು ಕರೆ ಸಂಪೂರ್ಣ ಮಲಿನವಾಗಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶದ ಅಂತರ್ಜಲವೂ ಮಲೀನವಾಗುತ್ತಿದೆ. ಬಿಬಿಎಂಪಿ, ಬಿಡಬ್ಲೂಎಸ್‌ಎಸ್‌ಬಿ, ಬಿಡಿಎ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕೆರೆ ಮಲಿನಕ್ಕೆ ಸಂಬಂಧಿಸಿದ ಸಂಸ್ಥೆ ಹಾಗೂ ಅಪಾರ್ಟ್‌ಮೆಂಟ್‌ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.

ಹಸಿರು ನ್ಯಾಯಪೀಠದಿಂದ ರಾಜ್ಯ ಸರ್ಕಾರವನ್ನು ತರಾಟೆ ತೆಗೆದುಕೊಂಡಿದೆ. ಇಷ್ಟಾದರೂ ರಾಜ್ಯ ಸರ್ಕಾರ ಯಾವುದೇ ಕ್ರಮವಹಿಸಿಲ್ಲ ಎಂದು ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಸತತ 27 ಗಂಟೆ ಅವಿರತ ಕಾರ್ಯಾಚರಣೆಯಿಂದ ಬೆಂಕಿ ನಂದಿಸಲಾಗಿದೆ. ಸುಮಾರು 100 ಎಕರೆ ವ್ಯಾಪಿಸಿದ್ದ ಬೆಂಕಿಯನ್ನು 100ಕ್ಕೂ ಅಧಿಕ ಸಿಬ್ಬಂದಿ 16 ವಾಹನಗಳ ಮೂಲಕ ನಂದಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಅಗ್ನಿಶಾಮಕ ವಾಹನಗಳನ್ನು ಸ್ಥಳದಲ್ಲಿ ಇರಿಸಲಾಗಿದೆ.
-ಬಸವಣ್ಣ, ಮುಖ್ಯಅಗ್ನಿಶಾಮಕ ಅಧಿಕಾರಿ

ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಉರಿಯುತ್ತಿರುವ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್‌ ಅಹ್ಮದ್‌ ಅವರಿಗೆ ಸೂಚಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು.
-ಟಿ.ಸುನಿಲ್‌ ಕುಮಾರ್‌, ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next