Advertisement

ನಗರದ ಸುಸ್ಥಿರ ಅಭಿವೃದ್ಧಿಗೆ ಕೊರತೆಯಾಗಿ ಕಾಡುವ ಫುಟ್‌ಪಾತ್‌, ಚರಂಡಿ ಸಮಸ್ಯೆ

12:46 AM Nov 04, 2019 | Team Udayavani |

ಮಂಗಳೂರು ನಗರ ಬೆಳೆದಂತೆ ಇಲ್ಲಿನ ಸಮಸ್ಯೆಗಳು ಹೆಚ್ಚುತ್ತಿದ್ದು, ಟ್ರಾಫಿಕ್‌-ಪಾರ್ಕಿಂಗ್‌, ಒಳಚರಂಡಿ, ಫುಟ್‌ಪಾತ್‌, ತ್ಯಾಜ್ಯ ನಿರ್ವಹಣೆ ಜ್ವಲಂತ ನಗರ ಸಮಸ್ಯೆಗಳಾಗಿ ಕಾಡುತ್ತಿವೆ. 5 ವರ್ಷಗಳಿಗೊಮ್ಮೆ ಪಾಲಿಕೆ ಚುನಾವಣೆ ನಡೆದು ವಿವಿಧ ರಾಜಕೀಯ ಪಕ್ಷಗಳಿಂದ ಜನಪ್ರತಿನಿಧಿಗಳು ಆಯ್ಕೆಯಾಗಿ ಆಡಳಿತ ನಡೆಸಿ ಹೋಗಿದ್ದಾರೆ. ಆದರೆ ಇಲ್ಲಿನ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಇನ್ನೂ ದೊರಕಿಲ್ಲ. ಇದೀಗ ಮತ್ತೆ ಚುನಾವಣೆ ಬಂದಿದ್ದು, ನಗರದ ಆದ್ಯತೆಯ ನಾಗರಿಕ ಸಮಸ್ಯೆಗಳಿಗೆ ಮುಂದಿನ ಆಡಳಿತಾವಧಿಯಲ್ಲಾದರೂ ಮುಕ್ತಿ ಸಿಗಬೇಕೆಂಬುದು ಮತದಾರರ ನಿರೀಕ್ಷೆಯಾಗಿದ್ದು, ಇದಕ್ಕೆ “ಸುದಿನ’ ಜನರ ಧ್ವನಿಯಾಗಿ “ನಗರ ಸಮಸ್ಯೆ-ಜನರ ನಿರೀಕ್ಷೆ’ ಅಭಿಯಾನ ಇಂದಿನಿಂದ ಪ್ರಾರಂಭಿಸಿದೆ.

Advertisement

ಮಹಾನಗರ: ಮಂಗಳೂರು ನಗರ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆಗಳು ಕಾಂಕ್ರೀಟ್‌ ಕಾಮಗಾರಿ ನಡೆದು ಮೇಲ್ದರ್ಜೆಗೇರಿವೆ. ಆದರೆ ಈ ನಗರದಲ್ಲಿ ಪಾದಚಾರಿಗಳಿಗೆ ಅನುಕೂಲವಾಗುವಂತೆ ಹೆಚ್ಚಿನ ಕಡೆಗಳಲ್ಲಿ ಫುಟ್‌ಪಾತ್‌ ವ್ಯವಸ್ಥೆಯಿಲ್ಲ ಎನ್ನುವುದು ವಾಸ್ತವ.

ಫುಟ್‌ಪಾತ್‌ ಕೊರತೆಯ ಜತೆಗೆ ಮಳೆಗಾಲದಲ್ಲಿ ಮಳೆ ನೀರು ಹರಿದು ಹೋಗುವುದಕ್ಕೂ ಬಹಳಷ್ಟು ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಕೂಡ ಇಲ್ಲ. ಹೀಗಿರುವಾಗ, ಸ್ಮಾರ್ಟ್‌ ಸಿಟಿಯಾಗಿ ಗುರುತಿಸಿಕೊಂಡು ಹಲವು ಆಯಾಮಗಳಲ್ಲಿ ಬೆಳೆಯುತ್ತಿರುವ ನಗರದ ಸುಸ್ಥಿರವಾದ ಅಭಿವೃದ್ಧಿಗೆ ಫುಟ್‌ಪಾತ್‌ ಮತ್ತು ಚರಂಡಿ ಸಮಸ್ಯೆಗೆ ಸ್ಪಂದಿಸುವತ್ತ ಗಮನಹರಿಸಬೇಕಾದ ಹೊಣೆಗಾರಿಕೆಯು ಪಾಲಿಕೆಯಲ್ಲಿ ಮುಂದೆ ಆಡಳಿತ ನಡೆಸುವ ಜನಪ್ರತಿನಿಧಿಗಳ ಮುಂದಿದೆ. ನಗರವಾಸಿಗಳ ಬಹುದೊಡ್ಡ ನಿರೀಕ್ಷೆಯೂ ಇದಾಗಿದೆ.

ವ್ಯವಸ್ಥಿತ ಕಾರ್ಯಯೋಜನೆ ಅಗತ್ಯ
ರಸ್ತೆ ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲೇ ಎಲ್ಲ ಪೂರಕ ವ್ಯವಸ್ಥೆಗಳನ್ನು ಒಳಗೊಂಡು ಯೋಜನೆ ಕಾರ್ಯಗತಗೊಂಡರೆ ಅದು ವ್ಯವಸ್ಥಿತ ರಸ್ತೆಯಾಗಿ ರೂಪುಗೊಳ್ಳುತ್ತದೆ. ನಗರದಲ್ಲಿ ಪ್ರಸ್ತುತ ಕಾಂಕ್ರೀಟ್‌ ಕಾಮಗಾರಿ ನಡೆದಿರುವ ಬಹುತೇಕ ರಸ್ತೆಗಳಲ್ಲಿ ವ್ಯವಸ್ಥಿತ ಕಾರ್ಯಯೋಜನೆ ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಸರಕಾರದ ಅನುದಾನವನ್ನು ವಿನಿಯೋಗಿಸುವ ಧಾವಂತ-ತರಾತುರಿಯಲ್ಲಿ ಕಾಮಗಾರಿಗಳನ್ನು ನಡೆಸಿರುವುದು ವಾಸ್ತವ.

ಇದರ ಪರಿಣಾಮಗಳು ಪ್ರಸ್ತುತ ವಿವಿಧ ಸಮಸ್ಯೆಗಳ ರೂಪದಲ್ಲಿ ಗೋಚರಿಸತೊಡಗಿವೆ. ಸುಮಾರು 15 ವರ್ಷಗಳ ಹಿಂದೆ ರಸ್ತೆ ಕಾಂಕ್ರೀಟ್‌, ವಿಸ್ತರಣೆ ಕಾಮಗಾರಿ ನಡೆದಿರುವ ರಸ್ತೆಗಳು ಕೂಡ ಇದರಲ್ಲಿ ಸೇರಿವೆ. ಕೆಲವೆಡೆ ಆಗಿದ್ದರೂ ಅಲ್ಲಲ್ಲಿ ಕಾಮಗಾರಿಗಳು ಬಾಕಿಯುಳಿದಿವೆ. ಅಲ್ಲಲ್ಲಿ ಸರಾಗವಾಗಿ ನಡೆಯದೆ ಮಧ್ಯೆ ಬಿಟ್ಟು ಬಿಟ್ಟು ಮಾಡಲಾಗಿದೆ.

Advertisement

ಚರಂಡಿ, ಫುಟ್‌ಪಾತ್‌ ಕಾಮಗಾರಿ ಬಾಕಿ
ನಗರದ ಕೇಂದ್ರ ಪ್ರದೇಶಗಳಾದ ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌ನಿಂದ ಹಂಪನಕ್ಟೆ ಸಿಗ್ನಲ್‌ ವೃತ್ತದವರೆಗಿನ ರಸ್ತೆ (ಬಲಬದಿ) ಕೆ.ಎಸ್‌.ರಾವ್‌ ರಸ್ತೆಯಿಂದ ಪಿವಿಎಸ್‌ ವೃತ್ತ, ಗಣಪತಿ ಹೈಸ್ಕೂಲ್‌ ರಸ್ತೆ, ಕೇಂದ್ರ ಮಾರುಕಟ್ಟೆ ರಸ್ತೆ, ಭವಂತಿ ಸ್ಟ್ರೀಟ್‌, ರಾಘವೇಂದ್ರ ಮಠ ರಸ್ತೆ, ಲೇಡಿಗೋಶನ್‌ನ ಹಿಂಭಾಗದ ಬೇಬಿ ಅಲಾಬಿ ರಸ್ತೆ, ಕೊಡಿಯಾಲ ವೃತ್ತದಿಂದ ಪಿವಿಎಸ್‌ ವೃತ್ತದ ವರೆಗಿನ ರಸ್ತೆ, ಮಲ್ಲಿಕಟ್ಟೆಯಿಂದ ಕದ್ರಿ ಪಂಪ್‌ಹೌಸ್‌ವರೆಗೆ ರಸ್ತೆಗಳು ಸಹಿತ ಪ್ರಮುಖ ಪ್ರದೇಶಗಳು ಇದರಲ್ಲಿ ಸೇರಿವೆ. ಅಂಬೇಡ್ಕರ್‌ ವೃತ್ತದಿಂದ ಸ್ಟೇಟ್‌ಬ್ಯಾಂಕ್‌ವರೆಗೆ ರಸ್ತೆ ಕಾಂಕ್ರೀಟ್‌ ಹಾಕಿ ಹಲವು ವರ್ಷಗಳಾದರೂ ಕೆಲವೆಡೆ ಇನ್ನೂ ಚರಂಡಿ, ಫುಟ್‌ಪಾತ್‌ ಕಾಮಗಾರಿಗಳು ಬಾಕಿಯುಳಿದಿವೆ. ಇದೀಗ ಕ್ಲಾಕ್‌ ಟವರ್‌ನಿಂದ ಬಿ.ಶೆಟ್ಟಿ ಸರ್ಕಲ್‌ವರೆಗಿನ ರಸ್ತೆ ಸ್ಮಾರ್ಟ್‌ಸಿಟಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಅದರಲ್ಲಿ ಆ ವ್ಯಾಪ್ತಿಯಲ್ಲಿ ವ್ಯವಸ್ಥಿತ ಫುಟ್‌ಪಾತ್‌, ಚರಂಡಿ ವ್ಯವಸ್ಥೆ ನಿರ್ಮಾಣವಾಗುವುದಾಗಿ ಹೇಳಲಾಗಿದೆ.

ಬಂಟ್ಸ್‌ಹಾಸ್ಟೇಲ್‌ನಿಂದ ಕದ್ರಿ ಮಲ್ಲಿಕಟ್ಟೆ ರಸ್ತೆ, ಲೇಡಿಹಿಲ್‌ನಿಂದ ಬಲ್ಲಾಳ್‌ಬಾಗ್‌, ಕರಂಗಲ್ಪಾಡಿ ರಸ್ತೆ, ಬಂಟ್ಸ್‌ಹಾಸ್ಟೆಲ್‌ನಿಂದ ಅಂಬೇಡ್ಕರ್‌ ವೃತ್ತ ರಸ್ತೆ ಸಹಿತ ವಿಧೆಡೆಗಳಲ್ಲಿ ಫುಟ್‌ಪಾತ್‌, ಚರಂಡಿ ನಿರ್ಮಾಣ ಸಾಗುತ್ತಿದೆ. ಆದರೆ ಈ ಕಾಮಗಾರಿ ಆರಂಭಗೊಂಡು ತಿಂಗಳು ಕಳೆದರೂ ಇನ್ನೂ ಪೂರ್ಣಗೊಳ್ಳುವ ಹಂತಕ್ಕೆ ತಲುಪಿಲ್ಲ.

ಮಳೆ ಬಂದರೆ ನೆರೆ ಸಮಸ್ಯೆ
ಅಪೂರ್ಣ, ಅಸಮರ್ಪಕ ಫುಟ್‌ಪಾತ್‌, ಚರಂಡಿಯಿಂದಾಗಿ ಮಳೆ ಬಂದಾಗ ನೀರು ಪ್ರವಾಹದ ರೂಪದಲ್ಲಿ ರಸ್ತೆಯಲ್ಲಿ ಹರಿಯುತ್ತದೆ. ಕೆಲವು ಕಡೆ ಕೊಳದ ರೂಪವನ್ನು ಪಡೆದುಕೊಳ್ಳುತ್ತದೆ. ಈ ಅವ್ಯವಸ್ಥೆಗೆ ಯೋಜನೆಯಲ್ಲಿ ಲೋಪ ಒಂದೆಡೆಯಾದರೆ, ಚರಂಡಿ ನಿರ್ಮಾಣ ಕಾರ್ಯವನ್ನು ವಹಿಸಿಕೊಂಡಿರುವ ಗುತ್ತಿಗೆ ಸಂಸ್ಥೆ ಅರ್ಧಂಬರ್ಧ ಕಾಮಗಾರಿ ನಿರ್ಮಿಸಿ ಹಾಗೆಯೇ ಬಿಟ್ಟಿರುವುದು, ಕೆಲವು ಕಡೆ ಜಾಗ ವಿವಾದ ರಸ್ತೆ ವಿಸ್ತರಣೆ, ವ್ಯವಸ್ಥಿತ ಚರಂಡಿ ನಿರ್ಮಾಣಕ್ಕೆ ಅಡಚಣೆಯಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ಮಳೆ ಬಂದಾಗ ಕೃತಕ ನೆರೆ ಆವರಿಸಿ ಹಲವು ಕಡೆಗಳಲ್ಲಿ ಜನರ ನಿದ್ದೆಗೆಡಿಸುತ್ತದೆ.

ಅಸಮರ್ಪಕ ಕಾಮಗಾರಿ
ಚರಂಡಿ, ಫುಟ್‌ಪಾತ್‌ ಕಾಮಗಾರಿಗಳಲ್ಲೂ ಕೆಲವು ಕಡೆ ಅವ್ಯವಸ್ಥೆಗಳು ಕಂಡುಬಂದಿವೆ. ನಗರದಲ್ಲಿ ಈ ಹಿಂದೆ ನಡೆದಿದ್ದ ಚರಂಡಿ ಕಾಮಗಾರಿಗಳಲ್ಲಿ ರಸ್ತೆಯ ನೀರು ಚರಂಡಿಯೊಳಗೆ ಹೋಗಲು ಸಮರ್ಪಕ ವ್ಯವಸ್ಥೆಗಳು ಇಲ್ಲದಿರುವುದು, ಇದ್ದರೂ ಅದನ್ನು ವ್ಯವಸ್ಥಿತವಾಗಿ ಮತ್ತು ಯೋಜನಾಬದ್ಧವಾಗಿ ಮಾಡದಿರುವ ಪರಿಣಾಮ ಮಳೆಗಾಲದಲ್ಲಿ ನೀರು ಚರಂಡಿಯೊಳಗೆ ಹೋಗದೆ ನೀರಿನ ಜತೆಯೇ ಪಾದಚಾರಿಗಳು, ವಾಹನಗಳು ಸಾಗಬೇಕಾದ ಅನಿವಾರ್ಯ ಇದೆ. ಹಿಂದಿನ ಕಾಮಗಾರಿಗಳಲ್ಲಿ ಕಂಡುಬಂದಿರುವ ಸಮಸ್ಯೆಗಳನ್ನು ಗಮನಿಸಿಕೊಂಡು ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳ ಸಂದರ್ಭ ಈ ಲೋಪಗಳನ್ನು ಸರಪಡಿಸುವ ಬಗ್ಗೆಯೂ ಕ್ರಮಗಳನ್ನು ಕೈಗೊಂಡರೆ ಉತ್ತಮ. ಒಟ್ಟಾರೆಯಾಗಿ ಮಂಗಳೂರಿನಲ್ಲಿ ಫುಟ್‌ಪಾತ್‌, ಚರಂಡಿ ಸಮಸ್ಯೆ ಒಂದು ಪೂರ್ಣ ಪ್ರಮಾಣದ ಅಂತ್ಯ ಕಾಣಬೇಕು ಎಂಬುದು ಜನರ ನಿರೀಕ್ಷೆಯಾಗಿದೆ.

  -ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next