ಕಲಬುರಗಿ: ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅನೇಕ ಮೂಲಭೂತ ಸಮಸ್ಯೆಗಳಿದ್ದು, ಅವುಗಳನ್ನು ನಿವಾರಿಸುವಂತೆ ಆಗ್ರಹಿಸ ಜಿಲ್ಲಾಧಿಕಾರಿಗಳ ಕಚೇರಿ ಎದುರು ಎಐಎಂಎಸ್‌ಎಸ್ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಕಾಲೇಜು 2007-08ರಲ್ಲಿ ಆರಂಭವಾಗಿದೆ. ಸ್ನಾತಕ ಹಾಗೂ ಸ್ನಾತಕೋತ್ತರ ಸೇರಿ 21 ವಿಷಯಗಳಿಗೆ ಇಲ್ಲಿ ಪ್ರವೇಶಾವಕಾಶವಿದೆ. ಗ್ರಾಮೀಣ ಪ್ರದೇಶದಿಂದ ವಿದ್ಯಾರ್ಥಿನಿಯರು ಉನ್ನತ ವ್ಯಾಸಂಗಕ್ಕಾಗಿ ಬರುತ್ತಿದ್ದು, ಅವರಿಗೆ ಕಾಲೇಜನಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿದ್ದು ನಿವಾರಿಸಬೇಕು ಎಂದು ಆಗ್ರಹಿಸಿದರು.
ಕಾಲೇಜಿಗೆ ಸೂಕ್ತ ಕಟ್ಟಡವಿಲ್ಲ. ಬೋಧಕರ ಕೊರತೆಯಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳಿಲ್ಲ. ಗ್ರಂಥಾಲಯ, ಪ್ರಯೋಗಾಲಯ ಸೌಲಭ್ಯವಿಲ್ಲ. ಶುದ್ಧ ಕುಡಿಯುವ ನೀರು, ಶೌಚಾಲಯ ದುರ್ಲಭವಾಗಿವೆ. ಕೂಡಲೇ ಕಾಲೇಜಿಗೆ ಅಗತ್ಯಕ್ಕನುಗುಣವಾಗಿ ಕೊಠಡಿ ನಿರ್ಮಿಸಬೇಕು.
ಭದ್ರತಾ ಗೋಡೆ ಕಟ್ಟಬೇಕು. ಸಮರ್ಪಕ ಹಾಗೂ ಸುಸಜ್ಜಿತ ಗ್ರಂಥಾಲಯ ಸೌಲಭ್ಯ ಕಲ್ಪಿಸಬೇಕು. ಶುದ್ಧ ಕುಡಿಯುವ ನೀರು, ಸಮರ್ಪಕ ಶೌಚಾಲಯಗಳು, ವಿಶ್ರಾಂತಿ ಕಟ್ಟಡದೊಂದಿಗೆ ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣೆಗಾಗಿ ಉಚಿತ ಕರಾಟೆ ತರಬೇತಿ ನೀಡುವಂತೆ ಒತ್ತಾಯಿಸಿದರು.
ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ಡಾ| ಸೀಮಾ ದೇಶಪಾಂಡೆ, ವಿ. ನಾಗಮ್ಮಾಳ ಸೇರಿದಂತೆ ಕಾಲೇಜನ ನೂರಾರು ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.