ಮೈಸೂರು: ಚೆಲುವಾಂಬ ಆಸ್ಪತ್ರೆಯಲ್ಲಿನ ಅಶುಚಿತ್ವ, ಶೌಚಾಲಯಗಳ ಕೊರತೆ ಹಾಗೂ ರೋಗಿಗಳ ಬಗ್ಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸುವ ಕಾರ್ಯವೈಖರಿ ಬಗ್ಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರತಿಷ್ಠಿತ ಚೆಲುವಾಂಬ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಹಾಸಿಗೆ ಕೊರತೆ, ಅಶುಚಿತ್ವ ಕುರಿತು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿದರು. ಆಸ್ಪತ್ರೆಗೆ ಭೇಟಿ ನೀಡುವ ಕುರಿತು ಯಾವುದೇ ಮುನ್ಸೂಚನೆ ನೀಡದೆ ಆಗಮಿಸಿದ ಶಾಸಕರು,
ಮಧ್ಯಾಹ್ನ 1.30ರವರೆಗೆ ರೋಗಿಗಳು ಹಾಗೂ ಅವರ ಸಂಬಂಧಿಕರು ಆಸ್ಪತ್ರೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಮಾಹಿತಿ ಪಡೆದರು. ಭೇಟಿ ವೇಳೆ ನೇರವಾಗಿ ಬಾಣಂತಿಯರ ವಾರ್ಡ್‌ಗೆ ತೆರಳಿದ ಶಾಸಕರು, ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿರುವ ಮಹಿಳೆಯರು ನೆಲದ ಮೇಲೆ ಮಲಗಿರುವುದನ್ನು ಕಂಡು ಆಸ್ಪತ್ರೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆ ಸಿಬ್ಬಂದಿಗೆ ಪರಿಜ್ಞಾನವಿಲ್ಲ: ಹೆರಿಗೆಗೆಂದು ಬಂದಿರುವ ಬಾಣಂತಿಯರಿಗೆ ಹಾಸಿಗೆ ನೀಡದೆ ನೆಲೆದ ಮೇಲೆ ಮಲಗಿಸಿದ್ದೀರಾ, ನಿಮಗೆ ಸ್ವಲ್ಪವೂ ಪರಿಜ್ಞಾನವಿಲ್ಲವೇ? ಮಳೆಗಾಲವಾದ ಕಾರಣ ಅವರಿಗೆ ಶೀತವಾಗಲಿದ್ದು, ಇದರಿಂದ ತಾಯಿ ಮತ್ತು ಮಗು ಇಬ್ಬರಿಗೂ ಸೋಂಕು ತಗುಲುವುದಿಲ್ಲವೇ? ಎಂದು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಹರಿಹಾಯ್ದರು.
ಅಲ್ಲದೆ ಆಸ್ಪತ್ರೆಯಲ್ಲಿ ಇಷ್ಟೊಂದು ಸಮಸ್ಯೆಗಳಿದ್ದರೂ, ಯಾವುದೇ ಮಾಹಿತಿ ನೀಡದೆ ರೋಗಿಗಳ ಜೀವನದ ಜತೆಗೆ ಆಟವಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತುಪಡಿಸಬೇಕಿದ್ದು, ಆಗ ಮಾತ್ರವೇ ನೀವು ಬುದ್ಧಿ ಕಲಿಯುತ್ತೀರಾ ಎಂದು ಎಚ್ಚರಿಸಿದರು.
ಸಮಸ್ಯೆ ಪರಿಹಾರಕ್ಕೆ ಸಿಎಂಗೆ ವರದಿ: ಸುದ್ದಿಗಾರರೊಂದಿಗೆ ಶಾಸಕ ನಾಗೇಂದ್ರ ಮಾತನಾಡಿ, ಆಸ್ಪತ್ರೆ ಅಧಿಕಾರಿ ಮತ್ತು ಸಿಬ್ಬಂದಿ ಬೇಜವಾಬ್ದಾರಿತನದಿಂದ ಚೆಲುವಾಂಬ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಈ ಕೂಡಲೇ ಸಂಬಂಧಪಟ್ಟವರು ಸೂಕ್ತ ಕ್ರಮಕೈಗೊಳ್ಳಬೇಕಿದೆ.
ಈ ಹಿನ್ನೆಲೆಯಲ್ಲಿ ಚೆಲುವಾಂಬ ಆಸ್ಪತ್ರೆ, ಕೆ.ಆರ್.ಆಸ್ಪತ್ರೆ ಅವ್ಯವಸ್ಥೆ ಹಾಗೂ ಅಶುಚಿತ್ವದಿಂದ ಕೂಡಿದ್ದು, ಈ ನಿಟ್ಟಿನಲ್ಲಿ ಆಸ್ಪತ್ರೆಯ ಸಮಸ್ಯೆಗಳನ್ನು ಪರಿಶೀಲನೆ ನಡೆಸಿ ಸಂಪೂರ್ಣ ವರದಿಯನ್ನು ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.