ಹಳೆಯಂಗಡಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಲ್ಲಿ ಗ್ರಾಮಸ್ಥರು ತಮ್ಮ ವೈಯಕ್ತಿಕ ಕಾಮಗಾರಿಯ ಯೋಜನೆ ರೂಪಿಸಿಕೊಂಡರೂ ಎಂಜಿನಿಯರ್‌ಗಳ ಕೊರತೆಯಿಂದ ನಿರ್ದಿಷ್ಟ ಸಮಯದಲ್ಲಿ ಮುಗಿಸಲು ಸಾಧ್ಯವಾಗುತ್ತಿಲ್ಲ ಎಂದು ಹಳೆಯಂಗಡಿ ಗ್ರಾಮ ಪಂಚಾಯತ್‌ನಲ್ಲಿ ನಡೆದ ನರೇಗಾ ಸಭೆಯಲ್ಲಿ ಗ್ರಾಮಸ್ಥರ ಸಹಿತ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಹಳೆಯಂಗಡಿ ಗ್ರಾ. ಪಂ.ವ್ಯಾಪ್ತಿಯ ನರೇಗಾ ಯೋಜನೆಯ ಮೊದಲನೇ ಹಂತದ ಸಾಮಾಜಿಕ ಪರಿ ಶೋಧನಾ ಗ್ರಾಮ ಸಭೆಯು ರಾಜೀವ ಗಾಂಧಿ ಸಭಾಭವನದಲ್ಲಿ ಜು.19ರಂದು ಪಂಚಾಯತ್ ಅಧ್ಯಕ್ಷೆ ಜಲಜಾ ಪಾಣಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಬಗ್ಗೆ ಮಾತನಾಡಿದ ಗ್ರಾಮಸ್ಥರು, ಯೋಜನೆಯ ಅನುಷ್ಠಾನದಲ್ಲಿ ಆಸಕ್ತಿ ವಹಿಸುವ ಅಧಿಕಾರಿಗಳು ಸಹ ಯೋಜನೆಯಲ್ಲಿ ಅತೀ ಅಗತ್ಯವಾಗಿರುವ ಎಂಜಿನಿಯರ್‌ಗಳನ್ನು ನಿಯುಕ್ತಿಗೊಳಿಸಲು ಪ್ರಯತ್ನ ನಡೆಸಬೇಕು ಎಂದು ಹೇಳಿದರು. ಇದಕ್ಕೆ ಬೆಂಬಲ ವ್ಯಕ್ತಪಡಿಸಿದ ಸದಸ್ಯ ರಾದ ಎಚ್. ವಸಂತ ಬೆರ್ನಾಡ್, ವಿನೋದ್ ಕುಮಾರ್ ಕೊಳುವೈಲು, ಅಬ್ದುಲ್ ಖಾದರ್, ಕಳೆದ ನಾಲ್ಕು ಸಭೆಗಳ ಲ್ಲಿಯೂ ಎಂಜಿನಿಯರ್‌ಗಳ ಕೊರತೆಯ ಬಗ್ಗೆ ನಿರ್ಣಯಗೊಳಿಸಿ, ಇಲಾಖೆಗೆ ರವಾನಿಸಿದ್ದರು ಪ್ರಯೋಜನ ಇಲ್ಲ. ಕರಾವಳಿ ಭಾಗಕ್ಕೂ ಉತ್ತರ ಕರ್ನಾಟಕ ಭಾಗಕ್ಕೂ ವ್ಯತ್ಯಾಸವಿದೆ. ನಿಯಮಗಳನ್ನು ಸಡಿಲಿಸಿ, ಇಲ್ಲಿನ ವಾಸ್ತವ ಸ್ಥಿತಿಯನ್ನು ಅರ್ಥೈಸಿಕೊಂಡು ರೂಪಿಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯತ್‌ನ ವಿವಿಧ ಕಾಮಗಾರಿಗಳ ಬಗ್ಗೆ ಅಧಿ ಕಾರಿಗಳ ಭೇಟಿ ಹಾಗೂ ವರದಿಯ ಬಗ್ಗೆ ಚರ್ಚೆ ನಡೆಯಿತು. ಪಂಚಾಯತ್‌ನಲ್ಲಿ 3.89 ಲ.ರೂ.ಗಳ ಯೋಜನೆಯ ಬಗ್ಗೆ ಮಾಹಿತಿ ನೀಡಲಾಯಿತು. ನೋಡೆಲ್ ಅಧಿಕಾರಿಯಾಗಿ ಪಶು ಸಂಗೋಪನಾ ಇಲಾಖೆಯ ಡಾ| ವಿಶ್ವಾರಾಧ್ಯ ಭಾಗವಹಿಸಿ, ಮಾರ್ಗದರ್ಶನ ನೀಡಿದರು. ಯೋಜನೆಯ ತಾಲೂಕು ಸಂಯೋಜಕರಾದ ಧನಲಕ್ಷ್ಮೀ ಪಂಚಾಯತ್ ನ ವರದಿಯನ್ನು ಮಂಡಿಸಿ, ವಿವಿಧ ಸಲಹೆಗಳನ್ನು ನೀಡಿ ವಯಕ್ತಿಕ ಫಲಾನುಭವಿಗಳು ದನದ ಹಟ್ಟಿ, ಕೋಳಿ ಹಟ್ಟಿ, ತೋಟ, ಕೃಷಿ, ತ್ಯಾಜ್ಯ ಸಂಗ್ರಹ, ಕುಡಿಯುವ ನೀರಿನ ಬಾವಿಯನ್ನು ನಿರ್ಮಿಸುವ ಬಗ್ಗೆ ಮಾಹಿತಿ ನೀಡಿದರು.
ತಾಲೂಕು ಪಂಚಾಯತ್ ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು, ಪಂಚಾಯತ್‌ನ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಎಚ್. ವಸಂತ ಬೆರ್ನಾಡ್, ವಿನೋದ್‌ಕುಮಾರ್ ಕೊಳುವೈಲು, ಅಬ್ದುಲ್ ಖಾದರ್, ಚಿತ್ರಾ ಸುರೇಶ್, ಹಮೀದ್, ಶರ್ಮಿಳಾ ಕೋಟ್ಯಾನ್, ಯೋಜನೆಯ ಗ್ರಾಮ ಸೌಲಭ್ಯದ ಸಂಪನ್ಮೂಲ ವ್ಯಕ್ತಿಗಳಾದ ರೇಖಾಮಣಿ, ಅಶ್ವಿತಾ ಉಪಸ್ಥಿತರಿದ್ದರು. ಪಂಚಾಯತ್‌ನ ಪ್ರಭಾರ ಪಿಡಿಒ ಕೇಶವ ದೇವಾಡಿಗ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ ಶೈಲ ವಂದಿಸಿದರು.
ಓರ್ವ ಎಂಜಿನಿಯರ್‌ಗೆ 15 ಪಂಚಾಯತ್
ನರೇಗಾ ಯೋಜನೆಯಲ್ಲಿ ತಾಲೂಕಿನಲ್ಲಿ 15 ಗ್ರಾಮ ಪಂಚಾಯತ್‌ಗಳಿಗೆ ಒಂದರಂತೆ ಎಂಜಿನಿಯರ್‌ಗಳಿದ್ದು, ಇವರಿಂದಲೇ ಎಲ್ಲ ಕೆಲಸ ಆಗಬೇಕಿದೆ. ಅಳೆದು ತೂಗಿದರೂ ಸಹ ತಿಂಗಳಿಗೆ ಎರಡು ಬಾರಿ ಮಾತ್ರ ಪಂಚಾಯತ್‌ಗಳಿಗೆ ಎಂಜಿನಿಯರ್ ಭೇಟಿ ನೀಡಲು ಸಾಧ್ಯ. ಯೋಜನೆಯನ್ನು ಹೇಗೆ ಸಮರ್ಪಕವಾಗಿ ನಿಭಾಯಿಸಬಹುದು. ಕಾಮಗಾರಿ ನಿರ್ಮಿಸಿದ ಅನಂತರ ಗ್ರಾಮಸ್ಥರು ಪಂಚಾಯತ್ ಅನ್ನು ಪ್ರಶ್ನಿಸುತ್ತಾರೆ. ಇಲಾಖೆಯು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲಿ ಎಂದು ಸಭೆಯಲ್ಲಿ ಪಂಚಾಯತ್‌ನ ಸದಸ್ಯರು ಮತ್ತು ಗ್ರಾಮಸ್ಥರು ತಿಳಿಸಿದರು.