Advertisement

ಶಿಕ್ಷಣ ಸಚಿವರೇ ಇಲ್ಲದಿರುವುದು ನಾಚಿಕೆಗೇಡು: ಎಚ್‌.ವಿಶ್ವನಾಥ್‌

11:41 PM Apr 30, 2019 | Team Udayavani |

ಬೆಂಗಳೂರು: “ಕಳೆದ ಆರು ತಿಂಗಳಿಂದ ರಾಜ್ಯದಲ್ಲಿ ಶಿಕ್ಷಣ ಸಚಿವರೇ ಇಲ್ಲದಿರುವುದು ನಾಚಿಕೆಗೇಡು. ಶಿಕ್ಷಣವು ಮೂಲಭೂತ ಹಕ್ಕು ಆಗಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಧಿಕ್ಕಾರ…’

Advertisement

ಮಕ್ಕಳ ಶಿಕ್ಷಣದಲ್ಲಿ ಸರ್ಕಾರದ ಧೋರಣೆ ಬಗ್ಗೆ ಹೀಗೆ ಅಸಮಾಧಾನ ಹೊರಹಾಕಿದವರು ಮೈತ್ರಿ ಸರ್ಕಾರದ ಭಾಗವಾದ ಸ್ವತಃ ಜೆಡಿಎಸ್‌ ರಾಜ್ಯಘಟಕದ ಅಧ್ಯಕ್ಷ ಎಚ್‌. ವಿಶ್ವನಾಥ್‌.

ಸ್ಟುಡೆಂಟ್‌ ಕ್ರಿಶ್ಚಿಯನ್‌ ಮೂವ್‌ಮೆಂಟ್‌ ಆಫ್ ಇಂಡಿಯಾ (ಎಸ್‌ಸಿಎಂಐ)ದಲ್ಲಿ ಮಂಗಳವಾರ ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ, ನ್ಯಾಷನಲ್‌ ಲಾ ಸ್ಕೂಲ್‌ ಆಫ್ ಇಂಡಿಯಾ ಯೂನಿವರ್ಸಿಟಿಯ ಮಗು ಮತ್ತು ಕಾನೂನು ಕೇಂದ್ರ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಸಂಯುಕ್ತವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

“ಬಾಲ ಕಾರ್ಮಿಕ ನಿರ್ಮೂಲನೆ ಒತ್ತಟ್ಟಿಗಿರಲಿ, ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಬಗ್ಗೆ ಕಾರ್ಮಿಕ ಇಲಾಖೆಯಾಗಲಿ ಅಥವಾ ಶಿಕ್ಷಣ ಇಲಾಖೆಯಾಗಲಿ ಗಮನ ಕೂಡ ಹರಿಸಿಲ್ಲ. ಇದು ತುಂಬಾ ದುರದೃಷ್ಟಕರ. ವಿಚಿತ್ರವೆಂದರೆ, ಸರ್ಕಾರದಲ್ಲಿ ಶಿಕ್ಷಣ ಸಚಿವರೇ ಇಲ್ಲ.

ಈ ಹಿಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಸರ್ಕಾರವು ಶಿಕ್ಷಣದ ಮೂಲಕ ಎಲ್ಲ ಅನಿಷ್ಟಗಳನ್ನು ಹೊಡೆದುಹಾಕಲು “ಕಡ್ಡಾಯ ಶಿಕ್ಷಣ ಕಾಯ್ದೆ’ ಜಾರಿಗೊಳಿಸಿತ್ತು. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದಿಂದ ಆಯ್ಕೆಯಾದ 14 ಸದಸ್ಯರಿದ್ದಾರೆ. ಆದರೆ, ಅವರು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಚರ್ಚೆ ನಡೆಸುವುದಿಲ್ಲ. ಬದಲಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ, ಶಿಕ್ಷಕರ ವರ್ಗಾವಣೆಯಂತಹ ವಿಷಯಗಳಿಗೆ ಅವರ ಚರ್ಚೆ ಸೀಮಿತವಾಗಿರುತ್ತದೆ.

ಸರ್ಕಾರಿ ಶಾಲೆಗಳಲ್ಲಿ ಓದುವವರು ಬಡವರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಅಲ್ಪಸಂಖ್ಯಾತ ಮಕ್ಕಳೇ ಹೆಚ್ಚಾಗಿರುತ್ತಾರೆ. ಅವರ ಬಗ್ಗೆ ಯಾರಿಗೂ ಆಸಕ್ತಿ ಇಲ್ಲವಾಗಿದೆ. ಕಾರ್ಮಿಕ ಇಲಾಖೆಯಲ್ಲಿ ಸಾಕಷ್ಟು ಅನುದಾನ ಇದೆ. ಆದರೆ, ಆ ಅನುದಾನದಿಂದ ಮಕ್ಕಳ ಕಲ್ಯಾಣಕ್ಕೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮ ರೂಪಿಸುತ್ತಿಲ್ಲ. ಸಂಬಂಧಪಟ್ಟ ಸಚಿವರು ಓದುವುದಿಲ್ಲ, ತಿಳಿದುಕೊಳ್ಳುವುದೂ ಇಲ್ಲ ಎಂದರು.

69,700 ಬಾಲ ಕಾರ್ಮಿಕರು?: ಮಗು ಮತ್ತು ಕಾನೂನು ಕೇಂದ್ರದ ಶಿಕ್ಷಣ ಕಾರ್ಯಕ್ರಮದ ಮುಖ್ಯಸ್ಥ ಡಾ.ನಿರಂಜನಾರಾಧ್ಯ ಮಾತನಾಡಿ, ಸ್ವತಃ ಶಿಕ್ಷಣ ಇಲಾಖೆ ನಡೆಸಿದ ಇತ್ತೀಚಿನ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 69,700 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅವರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಬಾಲಕಾರ್ಮಿಕರೇ ಆಗಿರುತ್ತಾರೆ. ಹಾಗಾಗಿ, ಅವರನ್ನು ಮತ್ತೆ ಶಾಲೆಗೆ ಕರೆ ತರುವ ನಿಟ್ಟಿನಲ್ಲಿ ಸರ್ಕಾರ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ಅಖೀಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಸವರಾಜ ಗುರಿಕಾರ, ನ್ಯಾಷನಲ್‌ ಲಾ ಸ್ಕೂಲ್‌ ಆಫ್ ಇಂಡಿಯಾ ಯೂನಿವರ್ಸಿಟಿಯ ಸಾಮಾಜಿಕ ನೀತಿ ನಿರೂಪಣಾ ಸಂಸ್ಥೆಯ ಮುಖ್ಯಸ್ಥ ಪ್ರೊ.ಬಾಬು ಮ್ಯಾಥುÂ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next