ಹಾಸನ: ಶಿಕ್ಷಣದ ಕೊರತೆ ಎಲ್ಲಿರುತ್ತದೆಯೋ ಅಲ್ಲಿ ಬಡತನ ಕಂಡುಬರುತ್ತೆ. ಶಿಕ್ಷಣವೇ ಬಡತನ ನಿವಾರಣೆಯ ಅಸ್ತ್ರ ಎಂದು ಜಿಲ್ಲಾ ಹೆಚ್ಚವರಿ ಪೊಲೀಸ್ ಮುಖ್ಯಾಧಿಕಾರಿ ಜ್ಯೋತಿ ವೈಜನಾಥ್ ಹೇಳಿದರು.
ಹಾಸನದ ಶ್ರೀನಗರ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಶ್ರೀನಗರ ಬಡಾವಣೆ ಎಂದರೆ ಕೆಟ್ಟ ದೃಷ್ಟಿಯಿಂದ ನೋಡಲಾಗುತ್ತಿದ್ದು, ಇಲ್ಲಿ ಗಾಂಜಾ ಮಾರಾಟ, ಮಟ್ಕಾ ದಂಧೆ ಸೇರಿ ಸಮಾಜ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ.
ಈ ಬಡಾವಣೆಯ ರಾಹುಲ್ ಎಂಬಾತನ ಮೇಲೆ ವಿವಿಧ 9 ಕೇಸುಗಳಿವೆ. ಆದಿಲ್ ಎಂಬುವನ ಮೇಲೆ 10 ಪ್ರಕರಣಗಳು ದಾಖಲಾಗಿದೆ. ಇಂತಹ ಅಪರಾಧಿ ಚಟುವಟಿಕೆಗಳಿಂದ ಇಲ್ಲಿನ ಜನರು ಹೊರ ಬರಲು ಮನಃಪರಿವರ್ತನೆ ಆಗಬೇಕಾಗಿದೆ. ಅದಕ್ಕೆ ಪೊಲೀಸ್ ಇಲಾಖೆಯ ಪೂರ್ಣ ಸಹಕಾರವಿದೆ ಎಂದರು.
ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವರರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಚಿಕ್ಕ ಮಕ್ಕಳಿಂದಲೇ ಪೋಷಕರು ಒಳ್ಳೆಯ ಸಂಸ್ಕೃತಿ ಬೆಳೆಸುವ ಮೂಲಕ ಮುಂದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ದಾರಿದೀಪ ಆಗಬೇಕು. ಮುಂದಿನ ದಿನಗಳಲ್ಲಿ ಶ್ರೀನಗರ ಎಂದರೇ ಇತರರಿಗೆ ಆದರ್ಶ ನಗರವಾಗಿ ಆಗಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.
ಇನ್‌ಸ್ಪೆಕ್ಟರ್ ಸತ್ಯನಾರಾಯಣ್ ಮಾತನಾಡಿ, ಇತ್ತಿಚೆಗೆ ಗಾಂಜಾ ಮಾರಾಟದ ಜಾಲ ಶ್ರೀನಗರ ಮನೆಗಳಲ್ಲಿ ಕಂಡು ಬಂದಿದೆ. ಮಟ್ಕಾ ಜೂಜಾಟ ದಂಧೆ ನಡೆಯುತ್ತಿದೆ. ಈ ದಂಧೆ ನಡೆಸುವವರ ಬಗ್ಗೆ ಮಾಹಿತಿ ನೀಡಿದರೆ ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವರು ಎಂದರು. ನಗರ ಠಾಣೆ ಸಬ್‌ಇನ್ಸ್‌ಪೆಕ್ಟರ್ ಸುರೇಶ್, ವಕೀಲ ಸಂದೀಪ್, ಫೈರೋಜ್, ಎ.ಪಿ.ಅಹಮದ್, ನಗರಸಭೆ ಸದಸ್ಯ ಕುಮಾರ್ ಇತರರು ಇದ್ದರು.