Advertisement

ಸಮನ್ವಯತೆಯ ಕೊರತೆ ಸುತ್ತೋಲೆ ವಿವಾದ 

12:04 PM Feb 09, 2018 | Team Udayavani |

ಮಠಗಳು, ಮಠಗಳಿಗೆ ಸೇರಿದ ದೇವಸ್ಥಾನಗಳು, ಮಠಗಳ ನಿಯಂತ್ರಣದಲ್ಲಿರುವ ಧಾರ್ಮಿಕ ಸಂಸ್ಥೆಗಳು ಅಂತೆಯೇ ಜೈನ, ಬೌದ್ಧ ಮತ್ತು ಸಿಖ್‌ ಧರ್ಮೀಯರ ಧಾರ್ಮಿಕ ಸಂಸ್ಥೆಗಳನ್ನು ಸರಕಾರಿ ನಿಯಂತ್ರಣಕ್ಕೊಳಪಡಿಸುವ ಸಲುವಾಗಿ ಧಾರ್ಮಿಕ ದತ್ತಿ ಕಾಯಿದೆಗೆ ತಿದ್ದುಪಡಿ ಮಾಡುವುದಕ್ಕೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸುವ ಮೂಲಕ ಸರಕಾರ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಕೆಲ ದಿನಗಳ ಹಿಂದೆಯಷ್ಟೇ ಅಲ್ಪಸಂಖ್ಯಾಕರ ವಿರುದ್ಧ ದಾಖಲಾಗಿರುವ ಕೇಸುಗಳನ್ನು ಹಿಂಪಡೆಯಲು ಇದೇ ಮಾದರಿಯ ಸುತ್ತೋಲೆಯನ್ನು ಹೊರಡಿಸಿದ್ದು ಭಾರೀ ವಿವಾದಕ್ಕೀಡಾಗಿತ್ತು. ಅದರ ಬೆನ್ನಿಗೆ ಧಾರ್ಮಿಕವಾಗಿ ಅತ್ಯಂತ ಸೂಕ್ಷ್ಮವಾಗಿರುವ ವಿವಾದವನ್ನು ಚುನಾವಣೆ ಕಾಲದಲ್ಲಿ ಕೆದಕಲು ಮುಂದಾಗಿರುವ ಸಾಧ್ಯತೆಯಿಲ್ಲ. ಹಾಗೆಂದು ಸುತ್ತೋಲೆ ಹೊರಬಿದ್ದಿರುವುದೂ ಸುಳ್ಳಲ್ಲ. ಇಲ್ಲಿ ಕಾಣುವ ಸತ್ಯ ಏನೆಂದರೆ ಸರಕಾರದ, ನಿರ್ದಿಷ್ಟವಾಗಿ ಹೇಳುವುದಾದರೆ ಮುಜರಾಯಿ ಸಚಿವ ರುದ್ರಪ್ಪ ಲಮಾಣಿಯ ಗಮನಕ್ಕೆ ಬಾರದೆಯೇ ಸುತ್ತೋಲೆ ಹೊರಡಿಸಲಾಗಿದೆ. ಇದರರ್ಥ-ಒಂದೋ ಸಚಿವರಿಗೆ ತನ್ನ ಇಲಾಖೆಯ ಮೇಲೆಯೇ ಹಿಡಿತವಿಲ್ಲ, ಇಲ್ಲವೇ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಸಮಯ ಕಾದು ನೋಡಿ ಸುತ್ತೋಲೆ ಹೊರಡಿಸಿದ್ದಾರೆ. ಸದ್ಯಕ್ಕೆ ಈ ಎರಡೂ ಅನುಮಾನಗಳನ್ನು ನಂಬಲು ಸಾಕಷ್ಟು ಕಾರಣಗಳಿವೆ.  ಅಲ್ಪಸಂಖ್ಯಾಕರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಸುತ್ತೋಲೆ ವಿಚಾರವೂ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗುತ್ತಿದೆ. ಸರಕಾರಕ್ಕೆ ಸಾಕಷ್ಟು ಮುಜುಗರ ತಂದಿತ್ತ ಮತ್ತು ಹಿಂದು ವಿರೋಧಿ ಎಂಬ ಆರೋಪವನ್ನು ಇನ್ನಷ್ಟು ಗಟ್ಟಿಗೊಳಿಸಿದ ಈ ವಿವಾದದಿಂದ ಪಾರಾಗಲು ಸರಕಾರ ಕಡೆಗೆ ಸುತ್ತೋಲೆಗೆ ತಿದ್ದುಪಡಿ ಮಾಡಬೇಕಾಯಿತು. ಇಲ್ಲೂ ಸರಕಾರ ಅಧಿಕಾರಿಗಳ ಮೇಲೆ ಹರಿಹಾಯ್ದಿದೆ. 

Advertisement

  ಬುಧವಾರ ಧಾರ್ಮಿಕ ದತ್ತಿ ಇಲಾಖೆಯ ಸುತ್ತೋಲೆ ಹೊರ ಬಿದ್ದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಲಮಾಣಿ ಮತ್ತು ಇಲಾಖೆಯ ಉನ್ನತ ಅಧಿಕಾರಿಗಳನ್ನು ಕರೆಸಿ “ಕ್ಲಾಸ್‌’ ತೆಗೆದುಕೊಂಡಿದ್ದಾರೆ ಎನ್ನುವ ವರದಿಯಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕಾರ್ಯಾಂಗ ಸರಕಾರದ ವಿರುದ್ಧವೇ ತಿರುಗಿ ಬೀಳುತ್ತಿದೆಯೇ ಎಂಬ ಅನುಮಾನ ಈ ಎರಡು ಬೆಳವಣಿಗೆಗಳಿಂದ ಉಂಟಾಗುತ್ತಿದೆ.  ಸಿದ್ದರಾಮಯ್ಯ ನೇತೃತ್ವದ ಸರಕಾರ ಆರಂಭದಿಂದಲೇ ಕಾರ್ಯಾಂಗದ ಜತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿರಲಿಲ್ಲ. ಬಹುತೇಕ ಎಲ್ಲ ಇಲಾಖೆಗಳಲ್ಲಿ ಸಚಿವರ ಮತ್ತು ಅವರ ಆಪ್ತ ವಲಯದವರ ಹಸ್ತಕ್ಷೇಪ ನಡೆಯುತ್ತಿತ್ತು ಎನ್ನುವುದಕ್ಕೆ ಪದೇ ಪದೆ ಅಧಿಕಾರಿಗಳು ಮತ್ತು ಸರಕಾರದ ನಡುವೆ ನಡೆಯುತ್ತಿದ್ದ ಸಂಘರ್ಷವೇ ಸಾಕ್ಷಿ. ಐಎಎಸ್‌ ಅಧಿಕಾರಿಯ ಆತ್ಮಹತ್ಯೆಯಂತಹ ಘಟನೆಯನ್ನು ರಾಜ್ಯದ ಜನತೆ ನೋಡಿದೆ. ಪ್ರಾಮಾಣಿಕ ಅಧಿಕಾರಿಗಳನ್ನು ಯದ್ವಾತದ್ವಾ ವರ್ಗಾವಣೆ ಮಾಡಿದ ಪರಿಣಾಮವಾಗಿ ಹಲವು ಅಧಿಕಾರಿಗಳು ರಾಜ್ಯದ ಉಸಾಬರಿಯೇ ಬೇಡ ಎಂದು ಕೇಂದ್ರದ ಡೆಪ್ಯುಟೇಶನ್‌ ಮೇಲೆ ಹೋಗಿದ್ದಾರೆ. ಇತ್ತೀಚೆಗೆ ಹಾಸನದ ಜಿಲ್ಲಾಧಿಕಾರಿಯನ್ನು ವರ್ಗಾಯಿಸಲು ನಡೆಸಿದ ಪ್ರಯತ್ನ ಅಧಿಕಾರಿಗಳಿಗೆ ಸರಕಾರ ಯಾವ ಪರಿ ಕಿರುಕುಳ ನೀಡುತ್ತಿದೆ ಎನ್ನುವುದಕ್ಕೊಂದು ಉದಾಹರಣೆ. ಪೊಲೀಸ್‌ ಇಲಾಖೆಯಂತೂ ಬಾಹ್ಯ ಹಸ್ತಕ್ಷೇಪದಿಂದ ಅತಿ ಹೆಚ್ಚು ಹಾನಿಗೊಳಗಾಗಿದೆ. ಪೊಲೀಸ್‌ ಅಧಿಕಾರಿಯ ಸಂಶಯಾಸ್ಪದ ಸಾವಿನ ಪ್ರಕರಣದಿಂದ ಇಡೀ ವ್ಯವಸ್ಥೆಯನ್ನೇ ಜನರು ಜುಗುಪ್ಸೆಯಿಂದ ನೋಡುವಂತಾದರೂ ಸರಕಾರ ಬುದ್ಧಿ ಕಲಿತುಕೊಂಡಿಲ್ಲ. ಪೊಲೀಸರೇ ಮುಷ್ಕರ ಹೂಡಿದ ಅಪರೂಪದ ವಿದ್ಯಮಾನವೂ ಹಾಲಿ ಸರಕಾರದ ಅವಧಿಯಲ್ಲಿ ಸಂಭವಿಸಿದೆ. ಹೀಗಾಗಿ ಅಧಿಕಾರಿಗಳು ತಮ್ಮ ಅಸಮಾಧಾನವನ್ನು ಈ ರೀತಿ ಹೊರ ಹಾಕುತ್ತಿರಬಹುದು ಎನ್ನುವುದು ಒಂದು ಸಂದೇಹ.  

 ಇನ್ನು ಸಚಿವರಿಗೆ ಇಲಾಖೆಗಳ ಮೇಲೆ ಲಗಾಮಿಲ್ಲ ಎನ್ನುವುದನ್ನು ನಂಬುವುದಕ್ಕೂ ಹಲವು ಕಾರಣಗಳಿವೆ. ಕೆಲವು ಇಲಾಖೆಗಳು ಅಕ್ಷರಶಃ ಅಧಿಕಾರಿಗಳ ಮರ್ಜಿಯಂತೆ ನಡೆಯುತ್ತಿವೆಯೇ ಹೊರತು ಸರಕಾರದ ನೀತಿಗಳ ಪ್ರಕಾರ ಅಲ್ಲ. ಬಹುತೇಕ ಸಚಿವರು ವಾರಕ್ಕೊಮ್ಮೆಯೂ ಕಚೇರಿಗೆ ಭೇಟಿ ಕೊಡುವುದಿಲ್ಲ. ಅದರಲ್ಲೂ ಚುನಾವಣೆಯ ಕಾವು ಏರಿದ ಬಳಿಕ ಸಚಿವರನ್ನು ಕಾಣುವುದೇ ಅಪರೂಪವಾಗಿದೆ ಎಂಬ ದೂರು ಇದೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಮರೆಯುವುದು ಸಹಜ. ಶಾಸಕಾಂಗ ಮತ್ತು ಕಾರ್ಯಾಂಗ ಪರಸ್ಪರ ಪೂರಕವಾಗಿದ್ದರೆ ಮಾತ್ರ ಆಡಳಿತಯಂತ್ರ ಸುಗಮವಾಗಿ ನಡೆಯಲು ಸಾಧ್ಯ.ಆದರೆ ರಾಜ್ಯದಲ್ಲಿ ಇವೆರಡು ತದ್ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿರುವಂತೆ ಕಾಣಿಸುತ್ತಿದೆ.
 

Advertisement

Udayavani is now on Telegram. Click here to join our channel and stay updated with the latest news.

Next