Advertisement

ಮೊರಾರ್ಜಿ’ಯಲ್ಲಿ ಸೌಕರ್ಯ ಕೊರತೆ

05:18 PM Aug 05, 2018 | Team Udayavani |

ಬಸವಕಲ್ಯಾಣ: ಹುಲಸೂರು ಹೊರವಲಯದ ಕೋಂಗಳಿ ರಸ್ತೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಕೋಟ್ಯಂತರ ರೂ. ವೆಚ್ಚ ಮಾಡಿ ಮೊರಾರ್ಜಿ ದೇಸಾಯಿ ಮಾದರಿ ವಸತಿ (ಆಂಗ್ಲ ಮಾಧ್ಯಮ) ಶಾಲೆ ಕಟ್ಟಡ ನಿರ್ಮಿಸಿ ತರಗತಿ ಪ್ರಾರಂಭಿಸಲಾಗಿದೆ. ಆದರೆ ವಿಷಯವಾರು ಶಿಕ್ಷಕರು ಮತ್ತು ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ.

Advertisement

ಇಲ್ಲಿ 6ರಿಂದ 10ನೇ ತರಗತಿ ವರೆಗೆ ವರ್ಗಗಳನ್ನು ನಡೆಸಲಾಗುತ್ತದೆ. ಸಧ್ಯ 238 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದು, ಅದರಂತೆ ಬಾಲಕರ ವಸತಿ ನಿಲಯ, ಬಾಲಕಿಯರ ವಸತಿ ನಿಲಯ, ಪ್ರಾಚಾರ್ಯರ ವಸತಿ ನಿಲಯ, ಅಡುಗೆ ಕೋಣೆ ಮತ್ತು ತರಗತಿ ನಡೆಸಲು ಬೃಹತ್‌ ಆಕಾರದಲ್ಲಿ ಪ್ರತ್ಯೇಕ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ.

ಶಾಲೆಯಲ್ಲಿ 10 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದರಲ್ಲಿ 3 ಶಿಕ್ಷಕರು ಮಾತ್ರ ಕಾಯಂ ಇದ್ದು ಉಳಿದ 7 ಜನ ಶಿಕ್ಷಕರು ಒಪ್ಪಂದದ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯ ಹೇಳುವ ಶಿಕ್ಷಕರನ್ನು ನೇಮಕ ಮಾಡಿಕೊಂಡಿಲ್ಲ. ಹಾಗಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.88, 92ರಷ್ಟು ಬರುವ ಫಲಿತಾಂಶ 2017-18ರಲ್ಲಿ ಶೇ. 42ರಷ್ಟು ಬಂದಿದೆ. ಇದು ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬೇಸರ ಉಂಟು ಮಾಡಿದೆ. 

ಶಿಕ್ಷಕರ ಕೊರತೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿನ ಶಿಕ್ಷಣದ ಆಸಕ್ತಿ ಮತ್ತು ಪ್ರೋತ್ಸಾಹ ಕುಗ್ಗುವಂತೆ ಮಾಡಿದೆ. ಇದಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರತಿವರ್ಷ ಕಡಿಮೆ ಆಗುತ್ತಾ ಹೋಗುತ್ತಿದೆ. ಬೀದರ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿದೆ. ಇದನ್ನು ತಿಳಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳು ಶಾಲೆಗೆ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಿಕೊಳ್ಳದೆ ಇರುವುದು ನೋವಿನ ಸಂಗತಿ. ಒಟ್ಟಿನಲ್ಲಿ ಖಾಸಗಿ ಶಾಲೆಗೂ ಮೀರಿಸುವಂತೆ ಸರಕಾರ ಕಟ್ಟಡವನ್ನು ನಿರ್ಮಾಣ ಮಾಡಿದೆ ಹೊರತು, ಅದಕ್ಕೆ ತಕ್ಕಂತೆ ಶಿಕ್ಷಕರನ್ನು ನೇಮಕ ಮಾಡಿಲ್ಲ. ಇದು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುವಂತೆ ಮಾಡಿದೆ.

ಪಕ್ಕದ ಹೊಲದಿಂದ ನೀರು: ವಿದ್ಯಾರ್ಥಿಗಳಿಗೆ ಕುಡಿಯಲು ಮತ್ತು ಬಳಕೆಗಾಗಿ ಬೇಕಾಗುವ ನೀರನ್ನು ಪಕ್ಕದ ಹೊಲದ ಬಾವಿಯಿಂದ ಪೈಪ್‌ ಅಳವಡಿಸಿ ತರಬೇಕು. ಮೊರಾರ್ಜಿ ದೇಸಾಯಿ ಮಾದರಿ ಶಾಲೆಯ ಆವರಣದಲ್ಲಿ ಕೊರೆಯಲಾಗಿದ್ದ
ಕೊಳವೆ ಬಾವಿ ಮಳೆಗಾದಲ್ಲೂ ಬತ್ತಿಹೋಗಿದೆ. ಇದರಿಂದ ಬಾವಿಗೆ ಮೋರೆ ಹೋಗುವುದು ಅನಿವಾರ್ಯವಾಗಿದೆ. ಒಂದು ವೇಳೆ ವಿದ್ಯುತ್‌ ಅಥವಾ ಪಂಪ್‌ಸೆಟ್‌ ಕೈ ಕೊಟ್ಟರೆ ಅದನ್ನು ದುರಸ್ಥಿ ಮಾಡುವವರೆಗೂ ಕಾಯಬೇಕಾದ ಅನಿವಾರ್ಯತೆ
ಬರುತ್ತ ದೆ.

Advertisement

ಕಂಪೌಂಡ್‌ ನಿರ್ಮಿಸಿಲ್ಲ: ಕೋಟ್ಯಾಂತರ ರೂ. ಖರ್ಚು ಮಾಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಶಾಲೆಯ ಸುತ್ತ ಕಂಪೌಂಡ್‌ ನಿರ್ಮಾಣ ಮಾಡಿಲ್ಲ. ಇದರಿಂದ ಪ್ರೌಢ ಬಾಲಕಿಯರಿಗೆ ಯಾವುದೇ ಸುರಕ್ಷತೆ ಇಲ್ಲದಂತಾಗಿದೆ. ರಾತ್ರಿ ಸಮಯದಲ್ಲಿ ಅಪರಿಚಿತರು ಒಳಗೆ ನುಗ್ಗುವಂತಿದೆ. ಆದ್ದರಿಂದ ಕಟ್ಟಡದ ಸುತ್ತ ಕಂಪೌಂಡ್‌ ನಿರ್ಮಾಣ ಮಾಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. 

ಕಲ್ಲು ಗುಂಡಿಗಳ ಆವರಣ: ಶಾಲೆಯನ್ನು ಕಲ್ಲು ಗುಂಡಿ ಇರುವ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಹಾಗಾಗಿ ಆವರಣದ ತುಂಬೆಲ್ಲಾ ಸಣ್ಣ ಪ್ರಮಾಣದ ಕಲ್ಲುಗುಂಡಿನ ರಾಶಿ ಇದೆ. ಹೀಗಾಗಿ ವಿದ್ಯಾರ್ಥಿಗಳು ಆಟ ಆಡಲು ಕೂಡ ಇಲ್ಲಿ ಸಮಸ್ಯೆ ಇದೆ. ಶಿಕ್ಷಕರ ಕೊರತೆಯ ಬಗ್ಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಪತ್ರ ಬರೆಯಲಾಗಿದೆ. ಆದರೂ ಈ ವರೆಗೂ ಶಿಕ್ಷಕರನ್ನು ನೇಮಕ ಮಾಡಿಕೊಂಡಿಲ್ಲ.
 ಮಹೇಶ ಬೆಲ್ದಾರ, ಪ್ರಭಾರಿ ಮುಖ್ಯಶಿಕ್ಷಕ  

ವೀರಾರೆಡ್ಡಿ ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next