ತುಮಕೂರು: ವಿದ್ಯಾವಂತರಲ್ಲಿಯೇ ಮತದಾನದ ಬಗ್ಗೆ ಅರಿವಿನ ಕೊರತೆ ಕಾಣುತ್ತಿರುವುದು ವಿಷಾದದ ಸಂಗತಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರಾಜೇಂದ್ರ ಬಾದಾಮಿಕರ್ ಅಭಿಪ್ರಾಯಪಟ್ಟರು.
ನಗರದ ನ್ಯಾಯಾಂಗ ಸಂಕೀರ್ಣಗಳ ಆವರಣ ದಲ್ಲಿರುವ ಬಾರ್ ಆಸೋಸಿಯೇಷನ್ ಸಭಾಂಗಣ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಮತ್ತು ಸ್ವೀಪ್ ಸಮಿತಿಯ ಸಹಯೋಗದಲ್ಲಿ ನ್ಯಾಯಾಧೀಶರು, ವಕೀಲರು ಹಾಗೂ ಸಿಬ್ಬಂದಿವರ್ಗದವರಿಗಾಗಿ ಬುಧವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಮತದಾನದ ಬಗ್ಗೆ ವಿದ್ಯಾವಂತರಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಉತ್ತಮ ನಾಯಕರನ್ನು ಆಯ್ಕೆ ಮಾಡಿ ರಾಜ್ಯದ ಅಭಿವೃದ್ಧಿಗೆ ನಾಂದಿಯಾಗಬೇಕು. ಈ ನಿಟ್ಟಿನಲ್ಲಿ ಮತದಾನ ಮಾಡುವುದು ಮೂಲಭೂತ ಹಕ್ಕು ಎಂದು ನಾವೆಲ್ಲರೂ ಮನವರಿಕೆ ಮಾಡಿಕೊಳ್ಳಬೇಕು. ನ್ಯಾಯಾಧೀಶರು ಹಾಗೂ ವಕೀಲರು ಮತದಾನದ ಮಹತ್ವದ ಬಗ್ಗೆ ತಿಳಿದುಕೊಳ್ಳುವುದಲ್ಲದೆ ನೆರಹೊರೆಯವರಿಗೆ ಮನವರಿಕೆ ಮಾಡಿಸಿ ಮತದಾನ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿಯ ಅಧ್ಯಕ್ಷೆ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಮತದಾನ ವ್ಯವಸ್ಥೆ ಸರಿಯಿಲ್ಲ ಎಂಬ ಆರೋಪಗಳನ್ನು ದೂರಮಾಡಲು ವಿವಿಪ್ಯಾಟ್ ಅನ್ನು ಪರಿಚಯಿಸಲಾಗಿದೆ. ಇದರಿಂದ ನಾವು ಯಾರಿಗೆ ಮತ ಚಲಾಯಿಸಿದ್ದೇವೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಸ್ವೀಪ್ ಸಮಿತಿಯಿಂದ ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಮತದಾನ ಹಾಗೂ ವಿವಿಪ್ಯಾಟ್ ಯಂತ್ರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹರಿಕುಮಾರ್ ಮಾತನಾಡಿ, ಮತದಾರರು ಯಾವುದೇ ಗೊಂದಲವಿದಲ್ಲದೆ ನಿರ್ಭೀತಿಯಿಂದ ಮತದಾನ ಮಾಡಬೇಕು ಎಂದು ತಿಳಿಸಿದರು. ಈ ವೇಳೆಯಲ್ಲಿ ವಿವಿಪ್ಯಾಟ್ ಬಳಕೆ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು, ಚುನಾವಣಾ ಸಿಬ್ಬಂದಿ, ಜಿಲ್ಲಾಮಟ್ಟದ ನ್ಯಾಯಾಧೀಶರು ಮತ್ತು ವಕೀಲರು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.