ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ವ್ಯಾಪ್ತಿಯಲ್ಲಿ ಶೇ. 50:50ರ ಅನುಪಾತದಲ್ಲಿ ನಿವೇಶನ ಹಂಚಿಕೆ ತಪ್ಪು ಎಂಬುದನ್ನು ಸರಕಾರವೇ ಒಪ್ಪಿಕೊಂಡು ಹಿಂದಿನ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅವರನ್ನು ಅಮಾನತು ಪಡಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ನ್ಯಾಯಾಲಯದ ತೀರ್ಪಿಗೆ ಕಾಯದೆ ಗೌರವಯುತವಾಗಿ ರಾಜೀನಾಮೆ ಕೊಡಲಿ ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯಸಚೇತಕ ಎನ್. ರವಿಕುಮಾರ್ ಹಾಗೂ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
“ನಮ್ಮ ಮೈಸೂರು ಚಲೋ’ ಪಾದ ಯಾತ್ರೆಯು ಹಂತ-ಹಂತವಾಗಿ ಯಶಸ್ಸು ನೀಡುತ್ತಿದೆ. ಮುಡಾ ಹಗರಣದಲ್ಲಿ ಸರಕಾರ ತನ್ನ ತಪ್ಪೊಪ್ಪಿಕೊಂಡಿದೆ. ಈ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದರು.
ರವಿಕುಮಾರ್ ಮಾತನಾಡಿ, ಮುಡಾದ ಹಿಂದಿನ ಆಯುಕ್ತ ದಿನೇಶ್ ಕುಮಾರ್ ಅವರನ್ನು ಸರಕಾರ ಅಮಾನತು ಮಾಡಿದ್ದು ಅವರು ನಗರಾಭಿವೃದ್ಧಿ ಕಾಯ್ದೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಬಡಾವಣೆ ನಿರ್ಮಾಣದ ವೇಳೆ ಉದ್ಯಾನಕ್ಕೆ ಶೇ. 15 ಹಾಗೂ ಶೇ. 10ರಷ್ಟು ಸಿಎ ನಿವೇಶನ ಬಿಟ್ಟಿರುವುದನ್ನು ಪರಿಶೀಲಿಸದೆ ಅನುಮತಿ ಕೊಟ್ಟಿದ್ದಾರೆ. 2009ಲ್ಲಿ ರದ್ದಾಗಿದ್ದ ಶೇ.50:50 ಆನುಪಾತದಲ್ಲಿ ನಿವೇಶನ ಹಂಚುವ ನಿಯಮ ಉಲ್ಲಂ ಸಿದ್ದಾರೆ ಎಂದು ಅಮಾನತು ಆದೇಶದಲ್ಲಿಯೇ ಇದೆ. ಇಷ್ಟು ದಿನ ನಾವೂ ಇದನ್ನೇ ಹೇಳುತ್ತ ಬಂದಿದ್ದೆವು. ಸರಕಾರವೀಗ ಒಪ್ಪಿಕೊಂಡಿದೆ ಎಂದರು.
ತಾಂತ್ರಿಕ ಸಮಿತಿಯ ವರದಿ ಮಂಡಿಸಿ
ಅಮಾನತು ಆದೇಶದಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ ಎನ್ನುವ ಸಿದ್ದರಾಮಯ್ಯ ಅವರ ಜಾಣ ಉತ್ತರವು ನಾಡಿನ ಜನರನ್ನು ದಿಗ್ಭ್ರಾಂತರನ್ನಾಗಿಸಿದೆ. ಮೂಢರನ್ನಾಗಿಸುವ ರೀತಿಯ ಉತ್ತರವು ಜನರಿಗೆ ಘಾಸಿ ಮಾಡಿದೆ. ಮುಡಾದಲ್ಲಿ ಏನೇನು ತಪ್ಪಾಗಿದೆ ಎಂಬುದನ್ನು ಪರಿಶೀಲಿಸಲೆಂದೇ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ತಾಂತ್ರಿಕ ಪರಿಣಿತರ ಸಮಿತಿ ರಚನೆಯಾಗಿತ್ತು.
ಆ ಸಮಿತಿಯು 2023ರಲ್ಲಿ ಸರಕಾರಕ್ಕೆ ತನ್ನ ವರದಿ ಸಲ್ಲಿಸಿದೆ. ಅಕ್ರಮವಾಗಿ 10 ಸಾವಿರ ನಿವೇಶನ ಹಂಚಿಕೆಯಾದ ಆರೋಪವಿದೆ. ತಾಕತ್ತಿದ್ದರೆ ಆ ಸಮಿತಿ ವರದಿಯನ್ನು ಬಿಡುಗಡೆ ಮಾಡಿ ಎಂದರು.