Advertisement

ಕಾರ್ಮಿಕ ಚಳವಳಿಗೆ ಹೊಸ ರೂಪ ಅಗತ್ಯ

12:23 AM May 02, 2019 | Team Udayavani |

ಬೆಂಗಳೂರು: “ಕಾರ್ಮಿಕ ಚಳವಳಿಗಳನ್ನು ಆಮೂಲಾಗ್ರವಾಗಿ ಬದಲಾವಣೆ ಮಾಡಿ, ಹೊಸ ರೀತಿಯಲ್ಲಿ ಕಟ್ಟುವ ಅವಶ್ಯಕತೆ ಇದೆ’ ಎಂದು ರಂಗಕರ್ಮಿ ಹಾಗೂ ಪ್ರಗತಿಪರ ಚಿಂತಕ ಪ್ರಸನ್ನ ಅಭಿಪ್ರಾಯಪಟ್ಟರು.

Advertisement

ಕಾರ್ಮಿಕ ದಿನಾಚರಣೆ ಅಂಗವಾಗಿ ಬುಧವಾರ ಕರ್ನಾಟಕ ಇಂಡಸ್ಟ್ರಿಯಲ್‌ ಆಂಡ್‌ ಅದರ್‌ ಎಸ್ಟಾಬ್ಲಿಷ್‌ಮೆಂಟ್ಸ್‌ ಎಂಪ್ಲಾಯೀಸ್‌ ಫೆಡರೇಷನ್‌, ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕರ ಸಭೆಯಲ್ಲಿ ಮಾತನಾಡಿದರು.

ಕಾಯಂ ನೌಕರಿ ಕಲ್ಪಿಸುವುದೇ ಕಾರ್ಮಿಕ ಸಂಘಗಳ ಜವಾಬ್ದಾರಿ ಆಗಿದ್ದ ಒಂದು ಕಾಲ ಇತ್ತು. ಆದರೆ, ಇಂದು ಕಾರ್ಖಾನೆಗಳು ಮತ್ತು ಮನುಷ್ಯರ ನಡುವಿನ ಸಂಪರ್ಕವನ್ನು ಸಾಧ್ಯವಾದಷ್ಟು ಕಡಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.

ಉತ್ಪಾದಕತೆ ಹೆಸರಲ್ಲಿ ಅತಿರೇಕ ವಿಜೃಂಭಿಸುತ್ತಿದೆ. ಈ ಧೋರಣೆಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ಚಳವಳಿ ರೂಪಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಚಳವಳಿಯನ್ನು ಮೂಲದಿಂದಲೇ ಬದಲಾಯಿಸಿ, ಹೊಸ ರೀತಿಯಲ್ಲಿ ಕಟ್ಟಬೇಕಿದೆ ಎಂದು ಪ್ರತಿಪಾದಿಸಿದರು.

ಧರ್ಮ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತ್ಯೇಕವಾಗಿ ನೋಡುವ ಪರಿಪಾಠ ಇದೆ. ಸಾಮಾಜಿಕ ನ್ಯಾಯವೆಂಬ ಅಸಾಧಾರಣ ಸಂಗತಿಯನ್ನು ನಾವು ಕೊಳಕು ಮಾಡಿದ್ದೇವೆ. ಅದೇ ರೀತಿ, ಧರ್ಮವನ್ನು ಜಗಳಗಂಟನನ್ನಾಗಿಸಿದ್ದೇವೆ.

Advertisement

ಈ ಎರಡರ ನಡುವಿನ ಬಿರುಕು ತೊಡೆದುಹಾಕಬೇಕು. ಕಾಯಕ ಧರ್ಮವಾಗಬೇಕು ಎಂದ ಅವರು, ರವಿದಾಸ, ಕಬೀರದಾಸ ಸೇರಿದಂತೆ ಅನೇಕ ಸಂತರು, ಶರಣರು ಮಾಡಿದ್ದೂ ಇದನ್ನೇ ಎಂದು ಹೇಳಿದರು.

ಪ್ರಸ್ತುತ ಸಂದರ್ಭದಲ್ಲಿ ರಾಜಕಾರಣಿಗಳು ಮತ್ತು ಉದ್ಯಮಿಗಳು ಉತ್ಪಾದಕತೆ ಹಿಂದೆ ಬಿದ್ದಿದ್ದಾರೆ. ಇದಕ್ಕಾಗಿ ಯಂತ್ರಗಳ ಅವಲಂಬನೆ ಹೆಚ್ಚಾಗುತ್ತಿದೆ. ಮಾನವ ಮಾಡುವ ಕೆಲಸಗಳನ್ನು ಮಾನವಯಂತ್ರ (ರೋಬೋಟ್‌) ಮಾಡುತ್ತದೆ.

ಇನ್ನೂ ವಿಶೇಷವೆಂದರೆ, ಆ ಯಂತ್ರ ಯಾವುದೇ ಸೌಲಭ್ಯಗಳನ್ನು ಬಯಸುವುದಿಲ್ಲ. ರಜೆ ಕೇಳುವುದಿಲ್ಲ. ಚಳವಳಿ, ಸಹಕಾರ, ಸಮಾನತೆ ಬಗ್ಗೆ ಮಾತನಾಡುವುದಿಲ್ಲ. ಆದ್ದರಿಂದ ಆಳುವ ವರ್ಗ ದುರಾಸೆಗೆ ಬಿದ್ದಿದೆ.

ಈ ಮೂರ್ಖ ವ್ಯವಸ್ಥೆಯನ್ನು ತಿದ್ದುವ ಕೆಲಸ ಕಾರ್ಮಿಕ ಚಳವಳಿಯಿಂದ ಆಗಬೇಕಿದೆ. ಹಾಗೊಂದು ವೇಳೆ ಯಂತ್ರಚಾಲಿತ ಸಮಾಜವನ್ನು ಒಪ್ಪಿಕೊಂಡರೆ, ನಮ್ಮ ವಿನಾಶ ಖಚಿತ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಮಿಕರ ರಕ್ಷಣೆಗೆ ಕೋರ್ಟ್‌ಗಳು: ಲೋಕಾಯುಕ್ತ ಪಿ. ವಿಶ್ವನಾಥ ಶೆಟ್ಟಿ ಮಾತನಾಡಿ, ದೇಶದ ನ್ಯಾಯಾಂಗ ವ್ಯವಸ್ಥೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವವರೆಗೂ ಇಲ್ಲಿನ ಯಾವೊಬ್ಬ ಪ್ರಜೆಯೂ ಹೆದರಬೇಕಿಲ್ಲ. ನ್ಯಾಯಾಲಯಗಳು ಆ ವ್ಯಕ್ತಿಯ ರಕ್ಷಣೆಗೆ ನಿಲ್ಲಲಿವೆ. ಅದರಲ್ಲೂ ಕಾರ್ಮಿಕರು ದೇಶದ ಸಂಪತ್ತು. ಅವರನ್ನು ಉಳಿಸಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.

ಕಾನೂನಿನಲ್ಲಿ ಕಾರ್ಮಿಕರ ಪ್ರತಿಭಟನೆ ಮತ್ತು ಕೈಗಾರಿಕೆಗಳಿಗೆ ಬೀಗ ಹಾಕಲು ಅವಕಾಶ ಇದೆ. ಆದರೆ, ಇವುಗಳಲ್ಲಿ ಯಾವುದಾದರೂ ಒಂದು ಮಾಡಿದರೂ, ಇಬ್ಬರಿಗೂ ಸಮಸ್ಯೆ ಆಗುತ್ತದೆ ಎಂದ ಲೋಕಾಯುಕ್ತರು, ಕಾರ್ಮಿಕರ ಬೇಡಿಕೆಗಳು ನ್ಯಾಯಸಮ್ಮತ ಮತ್ತು ಸಮಂಜಸವಾಗಿರಬೇಕು. ಆಗ, ಉದ್ಯಮಿಗಳೂ ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಿಳಿಸಿದರು.

ಒಕ್ಕೂಟದ ಅಧ್ಯಕ್ಷ ಟಿ.ಎಸ್‌. ಅನಂತರಾಮ್‌, ಉಪಾಧ್ಯಕ್ಷ ಡಿ. ಗಂಗಭೈರಯ್ಯ, ಪ್ರಧಾನ ಕಾರ್ಯದರ್ಶಿ ಕೆ.ಎ.ಗಂಗಣ್ಣ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಸ್ವಾತಂತ್ರ್ಯ ಉದ್ಯಾನದಿಂದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದವರೆಗೆ “ಕಾರ್ಮಿಕರ ಮೆರವಣಿಗೆ’ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next