ಭಾಲ್ಕಿ: ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರ ನಡೆಸುತ್ತಿದೆ. ಆದರೆ, ಕೇಂದ್ರದ ಸಚಿವ ಭಗವಂತ ಖೂಬಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.
ಪಟ್ಟಣದಲ್ಲಿ ನಡೆದ ವಿಧಾನ ಪರಿಷತ್‌ನ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ ಪಾಟೀಲ್ ಪರ ನಡೆದ ಚುನಾವಣೆ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಏಳು ವರ್ಷವಾಯಿತು. ರಾಜ್ಯದಲ್ಲಿ 28 ತಿಂಗಳು ಕಳೆದಿವೆ. ಆದರೆ, ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಕಲ್ಯಾಣ ಭಾಗಕ್ಕೆ ಇನ್ನೂ ಅಭಿವೃದ್ಧಿ ಮಂಡಳಿ ರಚನೆ ಮಾಡಿಲ್ಲ. ಖಾಲಿ ಇರುವ ಹುದ್ದೆಗಳು ಭರ್ತಿ ಆಗಿಲ್ಲ. ಅನುದಾನ ಬಳಕೆ ಆಗಿಲ್ಲ. ಹೀಗದ್ದ ಮೇಲೆ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಶಾಸಕ ರಾಜಶೇಖರ ಪಾಟೀಲ್, ಚುನಾವಣೆ ಉಸ್ತುವಾರಿ, ಮಾಜಿ ಸಂಸದ ಶಿವರಾಮೇಗೌಡ, ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ, ಜಿಲ್ಲಾ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಬಸವರಾಜ ಬುಳ್ಳಾ, ಶಾಸಕ ರಹೀಂಖಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಪಾಟೀಲ್ ಮುಗನೂರ್, ದತ್ತು ಮೂಲಗೆ, ಜಿಪಂ ಮಾಜಿ ಸದಸ್ಯ ಅಂಬಾದಾಸ ಕೋರೆ, ವಿಠಲದಾಸ ಪ್ಯಾಗೆ, ಮೀನಾಕ್ಷಿ ಸಂಗ್ರಾಮ, ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ರಾಜೇಶ್ವರಿ ಮೋರೆ, ಮಡಿವಾಳಪ್ಪ ಮಂಗಲಗಿ, ವೀರಶೆಟ್ಟಿ ಖಂಡ್ರೆ, ನಸೀರ್ ಸೇರಿದಂತೆ ಹಲವರು ಇದ್ದರು.