ಬೀದರ: ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣಗಳ ದಿನೇ-ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರವೇಶಿಸುವ ವ್ಯಕ್ತಿಗಳ ಮೇಲೆ ವಿಶೇಷ ನಿಗಾವಹಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರು ಕರ್ನಾಟಕಕ್ಕೆ ಆಗಮಿಸುವ ಸಮಯದಲ್ಲಿ 72 ಗಂಟೆಯೊಳಗೆ ಪಡೆದುಕೊಂಡಿರುವ ಆರ್‌ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ತೋರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅದರಂತೆ ಪಂಜಾಬ್ ಮತ್ತು ಚಂಡೀಘಡ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರವೇಶಿಸುವ
ಪ್ರಯಾಣಿಕರಿಗೂ ಈ ನಿಯಮವು ಮಾ.25ರಿಂದಲೇ ಅನ್ವಯವಾಗಿರುತ್ತದೆ.
ಮಹಾರಾಷ್ಟ್ರ, ಕೇರಳ, ಪಂಜಾಬ್ ಮತ್ತು ಚಂಡೀಘಡದಿಂದ ಕರ್ನಾಟಕಕ್ಕೆ ವಿಮಾನ, ಬಸ್, ರೈಲು ಮತ್ತು ವೈಯಕ್ತಿಕ ಟ್ರಾನ್ಸ್‌ಪೊರ್ನ್ ಮೂಲಕ ಬರುವ ಪ್ರಯಾಣಿಕರು ಕಡ್ಡಾಯವಾಗಿ 72 ಗಂಟೆಯೊಳಗೆ ಪಡೆದಿರುವ ಆರ್‌ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರವನ್ನು ತೋರಿಸಬೇಕು. ಅಲ್ಲಿಂದ ವಿಮಾನದ ಮೂಲಕ ಕರ್ನಾಟಕಕ್ಕೆ ಪ್ರವೇಶಿಸುವ ಪ್ರಯಾಣಿಕರು ಕೂಡ 72ಗಂಟೆಯೊಳಗೆ ಮಾಡಿಸಿಕೊಂಡಿರುವ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿದ್ದಲ್ಲಿ ಮಾತ್ರ ಅಂತವರಿಗೆ ಬೋರ್ಡಿಂಗ್ ಪಾಸ್ ನೀಡಲಾಗುವುದು. ಜತೆಗೆ ರೈಲ್ವೆ ಮತ್ತು ಬಸ್‌ಗಳ ಮೂಲಕ ಆಗಮಿಸುವ ಪ್ರಯಾಣಿಕರು ಕಡ್ಡಾಯ ಆರ್‌ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರಗಳನ್ನು ಹೊಂದಿರುವ ಬಗ್ಗೆ ರೈಲ್ವೆ ನಿಲ್ದಾಣದ ಅಧಿಕಾರಿಗಳು ಮತ್ತು ಬಸ್ ನಿರ್ವಾಹಕರು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಕೇರಳ, ಪಂಜಾಬ್ ಮತ್ತು ಚಂಡೀಘಡದಿಂದ ಕರ್ನಾಟಕಕ್ಕೆ ಪ್ರವೇಶಿಸುವ ವಾಹನಗಳನ್ನು ಪರಿಶೀಲಿಸಲಾಗುತ್ತದೆ. ಈ ವೇಳೆ ವಿಶೇಷ ಕಾರ್ಯಕರ್ತರು ಮತ್ತು ಆರೋಗ್ಯ ವೃತ್ತಿಪರರಿಗೆ ಮತ್ತು 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ ಕುಟುಂಬದಲ್ಲಿ ಸಾವು, ವೈದ್ಯಕೀಯ ಚಿಕಿತ್ಸೆ ಇತ್ಯಾದಿ ಭೀಕರ ತುರ್ತು ಪರಿಸ್ಥಿತಿಯಲ್ಲಿ ಕರ್ನಾಟಕಕ್ಕೆ ಆಗಮಿಸುವವರಿಗೆ ಮಾತ್ರ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕೊಡುವುದಕ್ಕೆ ವಿನಾಯಿತಿ ನೀಡಲಾಗಿದೆ. ಈ ವೇಳೆ ಅಂತಹ ಪ್ರಯಾಣಿಕರ ಗಂಟಲು ದ್ರವ ಸಂಗ್ರಹಿಸಲಾಗುತ್ತದೆ.
ಅಲ್ಲದೇ ಅವರ ದೂರವಾಣಿ ಸಂಖ್ಯೆ, ವಿಳಾಸ ಮುಂತಾದ ಅಗತ್ಯ ವಿವರಗಳು ಮತ್ತು ಗುರುತಿನ ಚೀಟಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಆರ್‌ಟಿಪಿಸಿಆರ್
ಪರೀಕ್ಷಾ ವರದಿಯನ್ನು ಸ್ವೀಕರಿಸಿದ ನಂತರ, ರಾಜ್ಯ ಪ್ರೋಟೋಕಾಲ್ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.