Advertisement

ಸಂಪೂರ್ಣ ಹದಗೆಟ್ಟ ಕೊರ್ಗಿ-ಶಿರಿಯಾರ ಸಂಪರ್ಕ ರಸ್ತೆ : ವಿಳಂಬಗತಿ ಕಾಮಗಾರಿ ವಿರುದ್ಧ ಆಕ್ರೋಶ

11:02 PM Mar 07, 2021 | Team Udayavani |

ತೆಕ್ಕಟ್ಟೆ: ತಾಲೂಕಿನ ಕೊರ್ಗಿ ಗ್ರಾ.ಪಂ. ವ್ಯಾಪ್ತಿಯ ಕೊರ್ಗಿ- ಶಿರಿಯಾರ ಗ್ರಾಮೀಣ ಸಂಪರ್ಕ ರಸ್ತೆ ಸಂಪೂರ್ಣ ಡಾಮರು ಎದ್ದು ಹೋಗಿ ಹೊಂಡಗಳದ್ದೇ ಕಾರುಬಾರು. ಇದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

Advertisement

ಸಮೀಪದ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ವಾಹನ ಸವಾರರಿಗೆ ಅಡಚಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರು ರಸ್ತೆ ವಿಸ್ತರಿಸಲು ನೆಲ ಸಮತಟ್ಟಾಗಿಸಿ, ಅಲ್ಲಲ್ಲಿ ಮೋರಿಗಳನ್ನು ನಿರ್ಮಿಸಿ ಒಂದು ವರ್ಷ ಕಳೆದರೂ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯ ನಡೆಯದೆ ಇರುವುದರಿಂದ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ವಿಳಂಬಗತಿ ಕಾಮಗಾರಿ ವಿರುದ್ಧ ಪ್ರತಿಭಟಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಕೊರ್ಗಿಯಿಂದ ಶಿರಿಯಾರ ಸಂಪರ್ಕಿ ಸುವ ಸುಮಾರು 5.5 ಕಿ.ಮೀ. ಉದ್ದದ ರಸ್ತೆಯುದ್ದಕ್ಕೂ ಹೊಂಡಗಳಿದ್ದು ರಸ್ತೆಯ ಸ್ಥಿತಿ ಮಾತ್ರ ಹೇಳತೀರದು. ಕಳೆದ ಹಲವು ದಶಕಗಳಿಂದಲೂ ಕೊರ್ಗಿ ಗ್ರಾಮಸ್ಥರ ಕನಸಾಗಿಯೇ ಉಳಿದಿರುವ ಈ ರಸ್ತೆ ಬರೀ ತೇಪೆ ಕಾರ್ಯದಲ್ಲಿಯೇ ತೃಪ್ತಿ ಕಂಡಿದ್ದು, ಈ ಬಾರಿಯಾದರೂ ಸುವ್ಯವಸ್ಥಿತ ರಸ್ತೆ ನಿರ್ಮಾಣವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಅನುಮೋದನೆ ಸಿಗುವಲ್ಲಿ ವಿಳಂಬ
ಸುಮಾರು 5 ಕೋಟಿ 90 ಲ.ರೂ.ನ ಸುಮಾರು 5.5 ಕಿ.ಮೀ. ವರೆಗೆ ಸಂಪೂರ್ಣ ರಸ್ತೆ ಸಂಪೂರ್ಣ ವಿಸ್ತರಣೆ ಕಾಮಗಾರಿಗೆ ಅನುಮೋದನೆ ಸಿಗುವಲ್ಲಿ ಸ್ವಲ್ಪ ವಿಳಂಬವಾದ ಹಿನ್ನೆಲೆಯಲ್ಲಿ ಕಾಮಗಾರಿ ಮಂದ ಗತಿಯಲ್ಲಿ ಸಾಗಿದೆ. ಮುಂದಿನ ದಿನಗಳಲ್ಲಿ ಕೊರ್ಗಿಯಿಂದ ಶಿರಿಯಾರದವರೆಗೆ ಸುವ್ಯವಸ್ಥಿತವಾದ ರಸ್ತೆ ನಿರ್ಮಾಣವಾಗಬೇಕಾಗಿದೆ. -ಹರ್ಷವರ್ಧನ್‌, ಸಹಾಯಕ ಎಂಜಿನಿಯರ್‌

ಧೂಳುಮಯ ರಸ್ತೆಯಿಂದ ಸಂಚಾರ ದುಸ್ತರ
ಗ್ರಾಮೀಣ ಮುಖ್ಯ ರಸ್ತೆಯ ಅಭಿವೃದ್ಧಿಪಡಿಸುವ ನಿಟ್ಟಿನಿಂದ ಅಲ್ಲಲ್ಲಿ ಮೋರಿಗಳನ್ನು ಅಳವಡಿಸಿ ವರ್ಷಗಳೇ ಕಳೆದರೂ ಕಾಮಗಾರಿ ವೇಗ ಪಡೆಯದೆ ಧೂಳುಮಯ ರಸ್ತೆಯಿಂದಾಗಿ ಸಂಚಾರ ದುಸ್ತರವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ .
-ಕೆ.ಎನ್‌.ಚಂದ್ರಶೇಖರ್‌ ಶೆಟ್ಟಿ,, ನಿವೃತ್ತ ಮುಖ್ಯೋಪಾಧ್ಯಾಯರು, ಹೆಸ್ಕಾತ್ತೂರು.

Advertisement
Advertisement

Udayavani is now on Telegram. Click here to join our channel and stay updated with the latest news.

Next