Advertisement

ಬಜೆಟ್‌ನಲ್ಲಿ ಜ್ಞಾನ ಆಯೋಗ ಶಿಫಾರಸು

11:32 AM Jun 08, 2018 | Team Udayavani |

ಬೆಂಗಳೂರು: ಖ್ಯಾತ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್‌ ಅಧ್ಯಕ್ಷತೆಯ ಜ್ಞಾನ ಆಯೋಗ ನೀಡಿರುವ ಶಿಫಾರಸ್ಸುಗಳನ್ನು ಮುಂದಿನ ಬಜೆಟ್‌ನಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಗುರುವಾರ ವಿಧಾನಸೌಧದಲ್ಲಿ ಜ್ಞಾನ ಆಯೋಗದ ಅಧ್ಯಕ್ಷರ ಜತೆ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗೆ ಪೂರಕವಾದ 16 ವಿಷಯಗಳ ಕುರಿತು ಜ್ಞಾನ ಆಯೋಗ ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದೆ. ಅದರಲ್ಲಿ ಪ್ರಮುಖವಾಗಿ ಕೆರೆಗಳ ಸಂರಕ್ಷಣೆ ಹಾಗೂ ನೀರಿನ ಗುಣಮಟ್ಟ ರಕ್ಷಣೆ ಪ್ರಮುಖವಾಗಿದೆ ಎಂದು ಹೇಳಿದರು. 

ವರದಿಯಲ್ಲಿ  ಶಿಕ್ಷಣ, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಕುರಿತು ಪ್ರಸ್ತಾಪಿಸಲಾಗಿದೆ. ಕರ್ನಾಟಕ ರಾಜ್ಯ ಜಲ ನೀತಿ, ಕರ್ನಾಟಕ ಅಂತರ್ಜಾಲ ಸುರಕ್ಷತಾ ನೋಟ ಮತ್ತು ಸರ್ಕಾರದಲ್ಲಿ ಬೃಹತ್‌ ದತ್ತಾಂಶ ಯೋಜನೆ ಕುರಿತು ವರದಿಯಲ್ಲಿ ತಿಳಿಸಲಾಗಿದೆ. ದೇಶಕ್ಕೆ ಮಾದರಿಯಾಗುವಂತಹ ಸಲಹೆಗಳನ್ನು ಆಯೋಗ ನೀಡುತ್ತಿದೆ. 

ರಾಜ್ಯದಲ್ಲಿ ಕೆರೆ ಸಂರಕ್ಷಣೆ, ಉನ್ನತ ಶಿಕ್ಷಣದಲ್ಲಿ ನೀತಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕುರಿತು, ಜಲ ಸಂರಕ್ಷಣೆ ಬಗ್ಗೆ ಸಮಗ್ರ ಮಾಹಿತಿ ನೀಡಲು ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರದ ಮುಂದಿನ ಕಾರ್ಯಕ್ರಮಗಳು ಹೇಗಿರಬೇಕು ಎಂದು ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರ ಕೆಲವು ಯೋಜನೆ ರೂಪಿಸಲು ಮುಂದಾಗಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಲು ಈ ವರದಿ ಅನುಕೂಲವಾಗಲಿದೆ ಎಂದರು. 

ಜ್ಞಾನ ಆಯೋಗದ ಅಧ್ಯಕ್ಷ ಕಸ್ತೂರಿ ರಂಗನ್‌ ಮಾತನಾಡಿ, ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮುಖ್ಯಮಂತ್ರಿ ಹೊಸ ಆಲೋಚನೆಗಳನ್ನು ಹೊಂದಿದ್ದಾರೆ. ಜ್ಞಾನ ಆಯೋಗ ಕೇವಲ ನಿತ್ಯದ ಆಡಳಿತದ ಬಗ್ಗೆ ಸಲಹೆ ನೀಡುವುದಿಲ್ಲ. ವಿವಿಧ ರಂಗದ ಸುಮಾರು 30 ತಜ್ಞರು ಸೇರಿ ಸೂಕ್ತ ಸಲಹೆಗಳನ್ನು ನೀಡುತ್ತಾರೆ.

Advertisement

ಶಿಕ್ಷಣ, ಕೃಷಿ, ಆಡಳಿತ ನಿರ್ವಹಣೆ ಬಗ್ಗೆ ಸೂಕ್ತ ಅಧ್ಯಯನ ಮಾಡಿ ಸೂಕ್ತ ಮಾಹಿತಿ ಸಂಗ್ರಹಿಸಿ ವರದಿಯಲ್ಲಿ ಸೇರಿಸಿದ್ದೇವೆ. ಪ್ರಮುಖವಾಗಿ 16 ಪ್ರಮುಖ ವಿಷಯಗಳನ್ನು ಸೇರಿಸಿದ್ದೇವೆ. ಅವುಗಳಲ್ಲಿ ರಾಜ್ಯ ಸರ್ಕಾರ 12 ಶಿಫಾರಸ್ಸುಗಳನ್ನು ಒಪ್ಪಿಕೊಂಡಿದೆ. ಕಾವೇರಿ ಗ್ಯಾಲರಿ, ಮಡಿವಾಳ ಕೆರೆಯನ್ನು ಪರಿಸರ ವೈವಿದ್ಯ ಪಾರ್ಕ್‌ ಮಾಡಲು ಶಿಫಾರಸ್ಸು ಮಾಡಿದ್ದು, ಉದ್ಘಾಟನೆಗೆ ಸಿದ್ದವಾಗಿವೆ. ಮುಖ್ಯಮಂತ್ರಿ ಶೀಘ್ರವಾಗಿ ಉದ್ಘಾಟಿಸುವ ವಿಶ್ವಾಸ ಇದೆ ಎಂದು ಹೇಳಿದರು. 

ಅದರಂತೆ ರಾಜ್ಯದ ಕೆರೆಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಈ ಬಗ್ಗೆಯೂ ಆಯೋಗ ಶೀಘ್ರವೇ ಕಾರ್ಯಪ್ರವೃತ್ತವಾಗಲಿದೆ. ಅಲ್ಲದೇ ತಾಂತ್ರಿಕತೆ ಬಳಸಿ ಸಾರ್ವಜನಿಕ ಶಿಕ್ಷಣ ಗುಣಮಟ್ಟ ಹೆಚ್ಚಿಸುವುದು. ಕರ್ನಾಟಕ ಜಲ ನೀತಿ ಜಾರಿಗೊಳಿಸುವ ಬಗ್ಗೆಯೂ ಆಯೋಗ ಅಧ್ಯಯನ ನಡೆಸಿ ಶಿಫಾರಸ್ಸು ಮಾಡಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next