Advertisement
ಗುರುವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಕಳೆದ ಸಾಲಿನ ಬಜೆಟ್‌ನಲ್ಲಿ ನಗರದ ಹಲವೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದಾಗಿ ಘೋಷಿಸಲಾಗಿತ್ತು. ಆದರೆ, ಈವರೆಗೆ ಅದು ಜಾರಿಯಾಗಿಲ್ಲ.
Related Articles
Advertisement
ನಂತರ ಜೆಡಿಎಸ್ ಶಾಸಕ ಗೋಪಾಲಯ್ಯ ಬಜೆಟ್ ಕುರಿತು ಮಾತನಾಡಲು ಮುಂದಾದಾಗ ಅವರನ್ನು ತಡೆದ ಮೇಯರ್, ಕಾಂಗ್ರೆಸ್ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಿದ್ದು, ನೀವು ನಂತರ ಮಾತನಾಡಿ ಎಂದರು. ಇದರಿಂದ ಕೋಪಗೊಂಡ ಗೋಪಾಲಯ್ಯ, ಜೆಡಿಎಸ್‌ನವರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಹೀಗಾದರೆ, ಬಜೆಟ್ ಮೇಲೆ ನೀವೆ ಚರ್ಚೆ ಮಾಡಿ, ನೀವೆ ಅನುಮೋದನೆ ಪಡೆಯಿರಿ. ನಮ್ಮ ಸಹಕಾರ ನಿಮಗೇಕೆ? ಎಂದು ದೂರಿದರು.
ಅದಕ್ಕೆ ಉತ್ತರಿಸಿದ ಮೇಯರ್, ಜೆಡಿಎಸ್ ಸದಸ್ಯರಿಗೆ ಈಗಾಗಲೇ ಮಾತನಾಡಲು ಅವಕಾಶ ನೀಡಲಾಗಿದೆ. ಎಲ್ಲದಕ್ಕೂ ಹೆದರಿಸಬೇಡಿ. ನೀವು ಹೇಳಿದಾಗೆಲ್ಲ ಕೇಳಲು ಸಾಧ್ಯವಿಲ್ಲ ಎಂದು ಗರಂ ಆದರು. ಈ ವೇಳೆ ಎರಡು ಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆದು, ಹೆದರಿಸಬೇಡಿ ಎಂಬ ಪದ ತೆಗೆಯಬೇಕು ಎಂದು ಜೆಡಿಎಸ್ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿದರಿಂದ ಮೇಯರ್ ಪದವನ್ನು ಕಡತದಿಂದ ತೆಗೆದರು.
ದಲಿತರಿಗೆ ಮೀಸಲಾತಿ ನೀಡಿಲ್ಲ: ನಗರದಲ್ಲಿ ಬೀದಿ ದೀಪಗಳನ್ನು ಬದಲಿಸಲು ಮುಂದಾಗಿದ್ದು, ಗುತ್ತಿಗೆ ಪಡೆಯುವವರು 150 ಕೋಟಿ ರೂ. ವಾರ್ಷಿಕ ವ್ಯವಹಾರ ನಡೆಸಿರಬೇಕು ಎಂಬ ನಿಯಮ ಹಾಕಲಾಗಿದ್ದು, ಟೆಂಡರ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.25ರಷ್ಟು ಮೀಸಲಾತಿ ನೀಡಬೇಕು. ಇಲ್ಲವೆ, ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ ಒತ್ತಾಯಿಸಿದರು.
ಅದಕ್ಕೆ ಉತ್ತರಿಸಿದ ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್, ನಗರದಲ್ಲಿ ಎಲ್‌ಇಡಿ ಬಲ್ಬ್ಗಳ ಅಳವಡಿಕೆಯಿಂದ ಶೇ.50ರಷ್ಟು ವಿದ್ಯುತ್ ಉಳಿತಾಯವಾಗಲಿದೆ. ಅದಕ್ಕಾಗಿ ಜಾಗತಿಕ ಟೆಂಡರ್ ಕರೆಯಲಾಗಿದ್ದು, ಸರ್ಕಾರದ ಆದೇಶದ ಪ್ರಕಾರ 50 ಲಕ್ಷ ರೂ.ವರೆಗಿನ ಕಾಮಗಾರಿಗಳಿಗೆ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ಶೇ. 25 ಮೀಸಲಾತಿ ನೀಡಲಾಗುತ್ತದೆ. ಹಾಗಾಗಿ ನಿಯಮ ಉಲ್ಲಂಘನೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಉಪಮೇಯರ್‌ಗೆ “ಮೇಯರ್’ ಭಾಗ್ಯವಿಲ್ಲ: ವಿಶ್ವ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಮೇಯರ್ ಅವರು ಕೆಲಹೊತ್ತು ವಿಶ್ರಾಂತಿ ಪಡೆದು ಸಭೆ ನಡೆಸುವ ಅವಕಾಶವನ್ನು ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ ಅವರಿಗೆ ನೀಡಬೇಕು ಎಂದು ಪದ್ಮನಾಭರೆಡ್ಡಿ ಮೇಯರ್ ಅವರಿಗೆ ಮನವಿ ಮಾಡಿದರು. ಆದರೆ, ಅದಕ್ಕೆ ಮೇಯರ್ ಸಂಪತ್‌ರಾಜ್ ಯಾವುದೇ ಪ್ರತಿಕ್ರಿಯೆ ನೀಡಿದೆ ಸುಮ್ಮನಾದರು.
ಮಹಿಳೆಯರಿಗೆ ಗುಲಾಬಿ: ಮಹಿಳಾ ದಿನಚಾರಣೆಯ ಅಂಗವಾಗಿ ಪಾಲಿಕೆಯ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಗುರುವಾರ ಪಾಲಿಕೆ ಮಹಿಳಾ ಸದಸ್ಯರು ಹಾಗೂ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗುಲಾಬಿ ಹೂ ನೀಡಿ ಶುಭ ಕೋರಿದರು.