Advertisement
ಮನೆಯಲ್ಲಿ ಕಿತ್ತು ತಿನ್ನುವ ಬಡತನ. 6ನೇ ತರಗತಿಗೇ ಶಾಲೆ ಬಿಟ್ಟು ಹೊಲದತ್ತ ಮುಖಮಾಡಿದ ಬಾಲಕಿ ಈಗ ಅಪ್ಪಟ ಕೃಷಿ ಮಹಿಳೆ. ಗಂಡನ ಮನೆಯಲ್ಲಿಯೂ ಛಲದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿ ಬದುಕು ಕಟ್ಟಿಕೊಳ್ಳುವ ಜತೆಗೆ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದ ಪದವೀಧರ ಪತಿಯನ್ನೂ ಕೃಷಿ ಕಾಯಕದಲ್ಲಿ ತೊಡಗಿಸಿದ್ದಾರೆ.
ಆರ್ಯುವೇದ ಕಂಪನಿಗಳು ಔಷಧ ತಯಾರಿಕೆಯಲ್ಲಿ ಫೀಲ್ಡ್ ಮಿಂಟ್ ಬಳಸುತ್ತವೆ. ಫೀಲ್ಡ್ ಮಿಂಟ್ ಎಂಬುದು ಒಂದು ಬಗೆಯ ಸೊಪ್ಪು. ಇದು ಹೆಚ್ಚು ಔಷಧೀ ಗುಣಗಳನ್ನು ಹೊಂದಿದೆ. ಹೀಗಾಗಿ ಕಂಪನಿಗಳು ಇದನ್ನು ಬೆಳೆಯಲು ಪ್ರೋತ್ಸಾಹಿಸುತ್ತಿವೆ. ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಲಕ್ಷ್ಮೀ, ಸಾವಯವ ಕೃಷಿಯೊಂದಿಗೆ ಅರ್ಧ ಎಕರೆಯಲ್ಲಿ ಫೀಲ್ಡ್ ಮಿಂಟ್ ಬೆಳೆಯುತ್ತಿದ್ದಾರೆ. ಇದರಲ್ಲಿ ಮೂರು ತಳಿಗಳು (ವಿಕ್ಸ್ ಮಿಂಟ್, ಪೆಪ್ಪರ್ಮಿಂಟ್, ಫೀಲ್ಡ್ ಮಿಂಟ್) ಇವೆ. ಬೆಳೆಯುವ ಮೊದಲು ಕೊಟ್ಟಿಗೆ ಗೊಬ್ಬರ ಹಾಕಿ, ಜಮೀನನ್ನು ಉಳುಮೆ ಮಾಡಬೇಕು. ಸಮತಟ್ಟು ಪ್ರದೇಶವನ್ನಾಗಿಸಿ ಕುರಗಿ ಸಾಲು ಬಿಟ್ಟು ನೀರು ಹಾಯಿಸಬೇಕು (ಮಳೆಗಾಲದಲ್ಲಿ ಅಗತ್ಯವಿಲ್ಲ). ನಂತರ ಫೀಲ್ಡ್ ಮಿಂಟ್ (ಬೇರು ಸಹಿತ ಕಾಂಡ) ಅನ್ನು ಸಾಲುಗುಂಟ ನಾಟಿ ಮಾಡಬೇಕು. ಮಳೆಗಾಲದಲ್ಲಿ ನಾಟಿ ಮಾಡಿದರೆ ಹೆಚ್ಚು ಒಳ್ಳೆಯದು. ಫೀಲ್ಡ್ ಮಿಂಟ್‌ಗೆ ಯಾವುದೇ ರೀತಿಯ ರೋಗ ಬರುವುದಿಲ್ಲ. ಆದರೆ ಸುತ್ತಲಿನ ಜಮೀನಿನಿಂದ ರೋಗ ಬಾಧೆ ಮತ್ತು ಕ್ರಿಮಿನಾಶಕ ಔಷಧ ಸಿಂಪಡನೆ ಗಾಳಿ ಮೂಲಕ ಹರಡುವಿಕೆ ತಡೆಗೆ ಜಮೀನಿನ ಸುತ್ತಲೂ ಜೋಳ ಬೆಳೆದಿದ್ದಾರೆ. 10 ದಿನಕ್ಕೊಮ್ಮೆ ನೀರು ಹಾಯಿಸಬೇಕು. ನಂತರ ಪ್ರತಿ ಮೂರು ತಿಂಗಳಿಗೆ ಕಟಾವಿಗೆ ಬರುವ ಮಿಂಟ್‌ಅನ್ನು ಕಾಂಡ ಸಮೇತ ಕೊಯ್ದು ಒಣಗಿಸಬೇಕು. ಒಣಗಿದ ಎಲೆ ಬೇರ್ಪಡಿಸಿ ಮಾರಾಟಕ್ಕೆ ಸಿದ್ಧಪಡಿಸಬೇಕು. ವರ್ಷಕ್ಕೆ 8-10 ಕ್ವಿಂಟಲ್ ಇಳುವರಿ ಬರುತ್ತದೆ. ಬೆಂಗಳೂರಿನ ಫಲದಾ ಅಗ್ರೋ ಕಂಪನಿಯೊಂದಿಗೆ ಮೌಖೀಕ ಒಪ್ಪಂದ ಮಾಡಿಕೊಂಡಿರುವ ಇವರಿಗೆ ಮಾರುಕಟ್ಟೆ ಸಮಸ್ಯೆ ಇಲ್ಲ. ಕ್ವಿಂಟಲ್‌ಗೆ 12 ಸಾವಿರ ರೂ.ಗೆ ಮಾರಾಟ ಮಾಡುತ್ತಾರೆ. ಕಟಾವು ವೇಳೆ ಎರಡೂ¾ರು ಸಾವಿರ ರೂ. ಖರ್ಚು ಸೇರಿದಂತೆ ವರ್ಷಕ್ಕೆ ಅಂದಾಜು ಒಂದು ಲಕ್ಷ ರೂ. ಆದಾಯ ನಿಶ್ಚಿತ.
Related Articles
ಇಳುವರಿ ಹೆಚ್ಚಿಸುವ ಉದ್ದೇಶದಿಂದ ಲಕ್ಷ್ಮೀ ಹೋಳಗಿಯವರು ವರ್ಷದಿಂದ-ವರ್ಷಕ್ಕೆ ಫೀಲ್ಡ್ ಮಿಂಟ್ ಬೆಳೆಯುವ ಅರ್ಧ ಎಕರೆ ಪ್ರದೇಶ ಬದಲಾಯಿಸುತ್ತಾರೆ. ನಂತರ ಉಳಿದ ಜಮೀನಿನಲ್ಲಿ ತಮಗೆ ಬೇಕಾದ ಆಹಾರ ಧಾನ್ಯಗಳನ್ನು ಬೆಳೆದುಕೊಳ್ಳುತ್ತಾರೆ. ಪ್ರಸಕ್ತ ವರ್ಷ ಅರ್ಧ ಎಕರೆ ಜೋಳ, 10 ಗುಂಟೆ ಗೋಧಿ, ಐದು ಗುಂಟೆ ಆಕಳ ಹುಲ್ಲು, ಅರ್ಧ ಎಕರೆ ಆಲೂಗಡ್ಡೆ, 10 ಗುಂಟೆಯಲ್ಲಿ ಮೆಣಸಿನಕಾಯಿ ಜೊತೆಗೆ ಹೊಲದ ಬದುವಿನಲ್ಲಿ ವಿವಿಧ ತರಕಾರಿಗಳನ್ನು ಬೆಳೆದಿದ್ದಾರೆ. ಒಂದು ಬೋರ್‌ವೆಲ್‌ಇದ್ದು, ಎಲ್ಲ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿದ್ದಾರೆ.
Advertisement
ಕೃಷಿ ಜೊತೆಗೆ ಎರೆಹುಳದ ಗೊಬ್ಬರ ಉತ್ಪಾದನೆ ಮಾಡುತ್ತಾರೆ. ಎರಡು ಆಕಳು ಸಾಕಿದ್ದು, ಹೈನುಗಾರಿಕೆಯಿಂದಲೂ ವರ್ಷಕ್ಕೆ 20-25 ಸಾವಿರ ರೂ. ಆದಾಯವಿದೆ. ಕೊಟ್ಟಿಗೆ ಗೊಬ್ಬರ ಮತ್ತು ಎರೆಹುಳದ ಗೊಬ್ಬರವನ್ನು ಮಾತ್ರ ಬೆಳೆಗಳಿಗೆ ಹಾಕುವುದರಿಂದ ಹೆಚ್ಚು ಇಳುವರಿಗೆ ಸಹಕಾರಿಯಾಗಿದೆ. ಹತ್ತಾರು ಎಕರೆ ಕೃಷಿ ಜಮೀನು ಇದ್ದರೂ ಒಕ್ಕಲುತನದಲ್ಲಿ ಲಾಭವಿಲ್ಲ ಎನ್ನುವವರಿಗೆ ಲಕ್ಷ್ಮೀ ಹೋಳಗಿ ಕೇವಲ ಎರಡು ಎಕರೆಯಲ್ಲಿ ಮಿಶ್ರ ಬೇಸಾಯ ಕೈಗೊಂಡು ಮಾದರಿಯಾಗಿದ್ದಾರೆ. ಲಕ್ಷ್ಮೀ ಹೋಳಗಿಯವರ ಸಾಧನೆ ಗುರುತಿಸಿ ಧಾರವಾಡ ಕೃಷಿ ವಿವಿ ಕಳೆದ ಸಾಲಿನ ಯುವ ಕೃಷಿ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದೆ.
– ಶರಣು ಹುಬ್ಬಳ್ಳಿ