Advertisement
ವಿಶ್ವದ ಪುರಾತನ ಗ್ರಂಥಗಳಲ್ಲಿ ಒಂದಾದ ರಾಮಾಯಣದ ಅರಣ್ಯ ಖಂಡದ ಬಹುತೇಕ ಘಟನೆಗಳಲ್ಲಿ ಕಿಷ್ಕಿಂದಾ ಪ್ರದೇಶ ಪ್ರಸ್ತಾಪವಾಗಿದೆ. ಶ್ರೀರಾಮಚಂದ್ರ ಲಕ್ಷ್ಮಣರು ವನವಾಸ ಸಂದರ್ಭದಲ್ಲಿ ಅಪಹರಣವಾಗಿದ್ದ ಸೀತೆಯನ್ನು ಹುಡುಕುತ್ತ ಕಿಷ್ಕಿಂದಾ ಪ್ರದೇಶಕ್ಕೆ ಆಗಮಿಸಿದ ಸಂದರ್ಭದಲ್ಲಿ ಸೀತೆ ಎಲ್ಲಿದ್ದಾಳೆಂಬ ಮಾಹಿತಿ ಲಭಿಸಿದ್ದು ಕಿಷ್ಕಿಂದಾ ಋಷಿಮುಖ ಪರ್ವತದಲ್ಲಿ.
Related Articles
Advertisement
ಸಾಂಸ್ಕೃತಿಕ ಕಾರ್ಯಗಳ ಅನಾವರಣ: ದಿ ಕಿಷ್ಕಿಂದಾ ಟ್ರಸ್ಟ್ ಸ್ಥಳೀಯರಲ್ಲಿರುವ ಕಲೆ, ನಾಟಕ, ವಾರದ ಸಂತೆ ಹಾಗೂ ರಂಗಕಲೆಯನ್ನು ಪ್ರತಿ ದಿನವೂ ತನ್ನ ಬಯಲು ರಂಗಸಜ್ಜಿಕೆಯಲ್ಲಿ ಪ್ರಸ್ತುತಪಡಿಸುತ್ತಿದೆ. ಸ್ಥಳೀಯರು ಹಾಗೂ ಟ್ರಸ್ಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕ ಮಕ್ಕಳಿಗಾಗಿ ಹಲವು ಕಾರ್ಯಕ್ರಮ ನಡೆಸುತ್ತಿದೆ. ಇಲ್ಲಿಯ ಕಲಾವಿದರು ದೇಶ-ವಿದೇಶಗಳಲ್ಲಿ ನೃತ್ಯ ಕಾರ್ಯಕ್ರಮ ನೀಡಿ ಖ್ಯಾತರಾಗಿದ್ದಾರೆ.
ಪ್ಲಾಸ್ಟಿಕ್, ಘನತ್ಯಾಜ್ಯ ವಿಲೇವಾರಿ: ದಿ ಕಿಷ್ಕಿಂದಾ ಟ್ರಸ್ಟ್ ಎರಡೂವರೆ ದಶಕಗಳಿಂದ ಆನೆಗೊಂದಿ-ಸಾಣಾಪೂರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್, ಘನತ್ಯಾಜ್ಯ ವಸ್ತುಗಳನ್ನು ಸಂಗ್ರಹ ಮಾಡಿ ಮರು ಬಳಕೆಗಾಗಿ ವಿಂಗಡಿಸುತ್ತಿದೆ. ಇದಕ್ಕಾಗಿ ಕೇಂದ್ರ ರಾಜ್ಯ ಸರಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪ್ರಶಸ್ತಿಗೆ ಭಾಜನವಾಗಿದೆ. ಅಂಜನಾದ್ರಿ ಬೆಟ್ಟ, ವಿರೂಪಾಪೂರಗಡ್ಡಿ, ಋಷಿಮುಖ ಪರ್ವತ, ಚಿಂತಾಮಣಿ, ನವವೃಂದಾವನಗಡ್ಡಿ, ತಳವಾರಘಟ್ಟ, ಪಂಪಾ ಸರೋವರ ಹಾಗೂ ತುಂಗಭದ್ರಾ ನದಿ ಪಾತ್ರದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಕಸ ಸಂಗ್ರಹಿಸಿ ಜೀವಸಂಕುಲ ಸಂರಕ್ಷಣೆ ಕಾರ್ಯವೂ ನಡೆದಿದೆ.
ಪುರಾತನ ಮನೆಗಳ ಜೀರ್ಣೋದ್ಧಾರ: ದಿ ಕಿಷ್ಕಿಂದಾ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ಶಮಾ ಪವಾರ್ ಅವರ ಅಭಿರುಚಿಯಂತೆ ಆನೆಗೊಂದಿ ಹಾಗೂ ಸುತ್ತಲಿನ ಗ್ರಾಮಗಳ ಪುರಾತನ ಮನೆಗಳನ್ನು ಲೀಜ್ ಪಡೆದು ಹಳೆಯ ಮಾದರಿಯಲ್ಲಿ ಮನೆಗಳನ್ನು ವಿನ್ಯಾಸಗೊಳಿಸಿ ಪ್ರವಾಸಿಗರಿಗೆ ನೀಡುತ್ತಿದೆ. ಇಲ್ಲಿಯ ನೂರಾರು ಮನೆಗಳು ಸುಣ್ಣ ಬಣ್ಣಗಳೊಂದಿಗೆ ಸಾಂಪ್ರದಾಯಿಕವಾಗಿ ಪ್ರವಾಸಿಗರನ್ನು ಸೆಳೆಯುತ್ತಿವೆ. ಆನೆಗೊಂದಿ ಪುರಾತನ ಗ್ರಾಮವಾಗಿದ್ದು ಇಲ್ಲಿ ಹಳೆಯ ಮನೆಗಳಿದ್ದರೆ ಚೆನ್ನಾಗಿರುತ್ತದೆ. ಆರ್‌ಸಿಸಿ ಕಾಂಕ್ರೀಟ್ ಕಾಡಿನ ಮನೆಗಳಿಂದ ಪ್ರಕೃತಿ ಸೌಂದರ್ಯ ನಾಶವಾಗುತ್ತದೆ. ಆದ್ದರಿಂದ ಮನೆ ಮಾಲೀಕರಿಗೆ ನಿಗದಿ ಅವಧಿಗೆ ಹಣ ನೀಡಿ ಮನೆಗಳನ್ನು ಲೀಜ್ ಪಡೆದು ಮಾರ್ಪಾಡು ಮಾಡಿ ಪ್ರವಾಸಿಗರು ಉಳಿಯಲು ಅನುಕೂಲ ಕಲ್ಪಿಸಲಾಗಿದೆ.
ಹಂಪಿ ಪ್ರದೇಶ ಪಕ್ಷಿಗಳು ಪುಸ್ತಕ: ಹಂಪಿ-ಆನೆಗೊಂದಿ ಪ್ರದೇಶ ಜೀವಸಂಕುಲಕ್ಕೆ ಹೇಳಿ ಮಾಡಿಸಿದ ಜಾಗವಾಗಿದೆ. ಇಲ್ಲಿಯ ಬೆಟ್ಟಗುಡ್ಡಗಳ ಮಧ್ಯೆ ಹರಿಯುವ ತುಂಗಭದ್ರಾ ನದಿ ಹಾಗೂ ಪ್ರಾಣಿ ಪಕ್ಷಿಗಳಿಗೆಂದೇ ಬೆಳೆಯುವ ಬಾಳೆ, ಭತ್ತದ ಬೆಳೆಗಳನ್ನು ತಿಂದು ಹಲವು ಪ್ರಾಣಿ ಪಕ್ಷಿಗಳು ಹಲವು ಶತಮಾನಗಳಿಂದ ಇಲ್ಲಿ ಸಂತಾನ ವೃದ್ಧಿ ಮಾಡುತ್ತಿವೆ. ಇಲ್ಲಿಯ ತುಂಗಭದ್ರಾ ನದಿ ಮತ್ತು ನೂರಾರು ಕೆರೆ ಕಟ್ಟೆಗಳಲ್ಲಿ ನೀರು ಕುಡಿದು ಆಹಾರ ತಿಂದು ಜೀವಿಸುತ್ತಿವೆ. ದಿ ಕಿಷ್ಕಿಂದಾ ಟ್ರಸ್ಟ್ ಹಾಗೂ ಇನ್‌ಟೆಕ್ ಸಂಸ್ಥೆ ಪರಿಸರ ತಜ್ಞ ಪ್ರೇಮಿ ಸಮದ್ ಕೊಟ್ಟೂರು ಅವರ ಬರ್ಡ್ ಆಫ್ ಹಂಪಿ ಪುಸ್ತಕವನ್ನು ಹಲವು ಸಲ ಮುದ್ರಿಸಿ ಇಲ್ಲಿಯ ಪ್ರಾಣಿ ಪಕ್ಷಿಗಳ ಬಗ್ಗೆ ಜಗತ್ತಿಗೆ ಪರಿಚಯಿಸುವ ಕಾರ್ಯ ಮಾಡುತ್ತಿದೆ.
ಬಾಳೆ ನಾರಿನಿಂದ ಅಲಂಕಾರಿಕ ವಸ್ತುಗಳ ತಯಾರಿಕೆ: ಇಲ್ಲಿಯ ನೂರಾರು ಎಕರೆಯಲ್ಲಿ ಬಾಳೆಯನ್ನು ಬೆಳೆಯಲಾಗುತ್ತಿದೆ. ಬಾಳೆ ಬೆಳೆಯ ಅನುಪಯುಕ್ತ ಬಾಳೆ ದಿಂಡು(ನಾರು)ಬಳಕೆ ಮಾಡಿಕೊಂಡು ಬ್ಯಾಗ್, ಕೈಚೀಲಗಳು, ಕಾಲು ಒರೆಸುವ ಪಟ್ಟಿ, ಜಪಮಾಲೆ ಸೇರಿದಂತೆ ಮನೆಯ ಅಲಂಕಾರಿಕ ವಸ್ತುಗಳನ್ನು ತಯಾರಿಸಲಾಗುತ್ತಿದೆ. ಇಲ್ಲಿಯ 600 ಮಹಿಳೆಯರಿಗೆ ಸ್ವಯಂ ಉದ್ಯೋಗ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ತಯಾರಾಗುವ ವಸ್ತುಗಳನ್ನು ದೆಹಲಿ, ಚೆನ್ನೈ, ಮುಂಬೈ, ಹೈದ್ರಾಬಾದ್, ಕೋಲ್ಕೊತ್ತಾ, ಬೆಂಗಳೂರು, ಸಿಂಗಾಪೂರ, ಥೈವಾನ್, ಮಲೇಶಿಯಾ ಸೇರಿದಂತೆ ದೇಶ-ವಿದೇಶಗಳಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇದನ್ನು ಗಮನಿಸಿ ಕೇಂದ್ರ ಸರಕಾರ ಆನೆಗೊಂದಿಯನ್ನು ಕರಕುಶಲ ಗ್ರಾಮ(ಕ್ರಾಫ್ಟ್ ವಿಲೇಜ್)ಎಂದು ಘೋಷಣೆ ಮಾಡಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ.
ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆ, ರಾಜ್ಯದ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ, ಪಂಚಾಯತ್ ರಾಜ್ಯ ಇಲಾಖೆಯ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಟಿಕೆಟಿ ಅತ್ಯುತ್ತಮ ಸ್ವಯಂಸೇವಾ ಸಂಸ್ಥೆಯಾಗಿದೆ. ಜತೆಗೆ ಹರಿಧಾತ್ರಿ ಗ್ರಾಮೀಣಾಭಿವೃದ್ಧಿ ಸೊಸಾಯಿಟಿ ಹಾಗೂ ಇನ್‌ಟೆಕ್ ಸಂಸ್ಥೆಗಳು ಸಹ ಆನೆಗೊಂದಿ ಕಿಷ್ಕಿಂದಾ ಪ್ರದೇಶದ ಸಮುದಾಯಗಳ ಪ್ರಗತಿಗೆ ಕಾರ್ಯ ನಿರ್ವಹಿಸುತ್ತಿದ್ದು, ಜನರು ಶ್ಲಾಘಿಸುತ್ತಾರೆ.
ಶ್ರೀ ರಾಮಚಂದ್ರ ನಡೆದಾಡಿದ ನಾಡು: ಆನೆಗೊಂದಿ ಕಿಷ್ಕಿಂದಾ ಪ್ರದೇಶ ಅತ್ಯಂತ ಮಹತ್ವ ಪಡೆದ ಸ್ಥಳವಾಗಿದ್ದು ಶ್ರೀ ರಾಮಚಂದ್ರ ನಡೆದಾಡಿದ ನಾಡಾಗಿದೆ. ವಾನರರಿಗಾಗಿ ಇದ್ದ ರಾಜ್ಯವಾಗಿದೆ. ಇಲ್ಲಿಯ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಇಲ್ಲಿಯ ಪ್ರಕೃತಿಸೌಂದರ್ಯ ಹಾಗೂ ಭೂವಿನ್ಯಾಸ(ಲ್ಯಾಂಡ್‌ಸ್ಕೇಪ್)ವಿಶ್ವದ ಎಲ್ಲಿಯೂ ಸಿಗಲ್ಲ. ಪಾರಂಪರಿಕ ಉದ್ಯೋಗಗಳು ಮತ್ತು ಇಲ್ಲಿಯ ನೈಸರ್ಗಿಕ ಸೊಬಗು ಉಳಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿದೆ. ಅವಸರದಲ್ಲಿ ಮಾಡಿದರೆ ಇಲ್ಲಿಯ ಜೀವಿಸಂಕುಲ ಹಾಗೂ ಪ್ರಕೃತಿಗೆ ಭಾರಿ ಪ್ರಮಾಣದಲ್ಲಿ ಹೊಡೆತ ಬೀಳಲಿದೆ. ವಿಶ್ವಸಂಸ್ಥೆ (ಯುನೆಸ್ಕೋ)ಈ ಪ್ರದೇಶವನ್ನು ವಿಶ್ವ ಪರಂಪರಾ ಪಟ್ಟಿಯಲ್ಲಿದೆ. ಇದು ವಿಶ್ವದ ಆಸ್ತಿ ಇದನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಉಳಿಸಿ ಎಂದು ಕರೆ ನೀಡಿದೆ. ಅಂಜನಾದ್ರಿಯ ಅಭಿವೃದ್ಧಿ ನೆಪದಲ್ಲಿ ಇಲ್ಲಿಯ ಮೂಲ ಸ್ವರೂಪಕ್ಕೆ ಧಕ್ಕೆ ಮಾಡಬಾರದು. ಸರಕಾರ ಭೂಮಿ ಸ್ವಾಧೀನಪಡಿಸಿಕೊಂಡರೂ ಆರ್‌ಸಿಸಿ ಕಟ್ಟಡಗಳ ಕಾಂಕ್ರೀಟ್ ಕಾಡು ಮಾಡದೇ ನೆರಳು-ಹಣ್ಣು ಬಿಡುವ ಗಿಡ ಮರಗಳನ್ನು ಬೆಳೆಸಬೇಕು. ಬೆಟ್ಟದ ಹತ್ತಿರ ಮೂಲಸೌಕರ್ಯ ಮಾಡದೇ 5 ಕಿ.ಮೀ.ದೂರದಲ್ಲಿ ಮಾಡಬೇಕು. ರಸ್ತೆ ಅಗಲೀಕರಣಕ್ಕೆ ಅವಸರ ಮಾಡದೇ ಯಾರನ್ನೂ ಒಕ್ಕಲೆಬ್ಬಿಸದೇ ಕಾರ್ಯ ಮಾಡಬೇಕಿದೆ.
- ಶ್ರೀಶಮಾ ಪವಾರ್, ಸಂಸ್ಥಾಪಕರು,ದಿ ಕಿಷ್ಕಿಂದಾ ಟ್ರಸ್ಟ್, ಇನ್‌ಟೆಕ್ ಮತ್ತು ಹರಿಧಾತ್ರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆನೆಗೊಂದಿ.