ಯಳಂದೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹ ರೈತರು ವಾರ್ಷಿಕ ಕೇಂದ್ರ ಸರ್ಕಾರ 6 ಸಾವಿರ ರೂ. ಹಾಗೂ ರಾಜ್ಯ ಸರ್ಕಾರ 4 ಸಾವಿರ ರೂ. ನೀಡಲಾಗುತ್ತಿದೆ. ತಾಲೂಕಿನ ರೈತರಿಗೆ ಖಾತೆಗೆ ಜಮಾವಾಗಬೇಕಿದ್ದ ಹಣ ವಿಳಂಬವಾಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತಂದಿದೆ. ಯೋಜನೆ ಅನುಷ್ಠಾನಕ್ಕೆ ರೈತರಿಂದ ಸಮಗ್ರ ಮಾಹಿತಿ ಸಂಗ್ರಹಿಸಿ, ಆನ್‌ಲೈನ್‌ನಲ್ಲಿ ದಾಖಲಿಸುವಂತೆ ಸೂಚಿಸಲಾಗಿದೆ.
ಕೃಷಿ, ಕಂದಾಯ, ಪಂಚಾಯತ್ ರಾಜ್, ತೋಟಗಾರಿಕೆ, ರೇಷ್ಮೆ ಇಲಾಖೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು. ತಾಲೂಕಿನಲ್ಲಿ 9000 ಸಾವಿರಕ್ಕೂ ಹೆಚ್ಚು ರೈತರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಗೆ ಈಗಾಗಲೇ 7599 ರೈತರು ಸಲ್ಲಿಸಿದ್ದಾರೆ. ಅದರಲ್ಲಿ 5300 ಮಂದಿ ರೈತರ ಖಾತೆಗಳಿಗೆ 1 ಅಥವಾ 2 ಕಂತುಗಳಲ್ಲಿ ಮಾತ್ರ ಹಣ ಸಂದಾಯವಾಗಿದೆ. ಇನ್ನೂ ಬಾಕಿ ಇರುವ 2299 ರೈತರಿಗೆ ಹಣವು ತಲುಪಿಲ್ಲ ಎಂದು ತಿಳಿದು ಬಂದಿದೆ.
ರೈತರಿಗೆ ಮಾಹಿತಿ ಕೊರತೆ: ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆ ಕುರಿತು, ರೈತರಿಗೆ ಮಾಹಿತಿ ಕಲ್ಪಿಸುವಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತ ವಿಫಲವಾಗಿದೆ. ಈ ಕುರಿತು ಒಂದು ಬಾರಿಯೂ ಜಾಗೃತಿ ಕಾರ್ಯಕ್ರಮ ಆಯೋಜಿಸಿಲ್ಲ. ಸರಿಯಾಗಿ ಮಾಹಿತಿ ನೀಡಿಲ್ಲ. ಫಸಲ್ ಭಿಮಾ ಯೋಜನೆಯಂತೆ ಇದು ಕೂಡ ಇರಬಹುದು ಎಂದು ಭಾವಿಸಿದ ರೈತರು, ಯೋಜನೆಗೆ ಆಸಕ್ತಿ ತೋರಿಲ್ಲ ಎಂಬುದು ರೈತರಾದ ಮಹದೇಸ್ವಾಮಿ, ಕುಮಾರ್ ಆರೋಪವಾಗಿದೆ.
ಯೋಜನೆಗೆ ಕೆಲವು ಷರತ್ತು: ಆರಂಭದಲ್ಲಿ ಎಲ್ಲಾ ರೈತರಿಗೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅನ್ವಯವಾಗುತ್ತದೆ ಎಂದು ಘೋಷಿಸಲಾಗಿತ್ತು. ನಂತರ ನಿಯಮಗಳನ್ನು ಬದಲಾಯಿಸಿ, ಯೋಜನೆ ವ್ಯಾಪ್ತಿಯಲ್ಲಿ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಕನಿಷ್ಠ 10 ಸಾವಿರ ರೂ. ಪಿಂಚಣೆ ಪಡೆಯುವ ಸರ್ಕಾರಿ ನೌಕರರಾಗಿರಬಾರದು, ಸಂವಿಧಾನಿಕ ಹುದ್ದೆಯಲ್ಲಿರಬಾರದು. ವೈದ್ಯರು, ಇಂಜಿನೀಯರ್, ವಕೀಲರು ಈ ಯೋಜನೆಯ ಸೌಲಭ್ಯವಿಲ್ಲ ಎಂಬಿತ್ಯಾದಿ ನಿಯಮಗಳನ್ನು ಷರತ್ತುಗಳನ್ನು ಸೇರಿಸಲಾಗಿದೆ.
ಕೆಲವು ರೈತರಿಗೆ ಹಣ ನೀಡಿಲ್ಲ: ವಾರ್ಷಿಕವಾಗಿ 6 ಸಾವಿರ ರೂ. ನೀಡುವ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯು ಪ್ರತಿ ನಾಲ್ಕು ತಿಂಗಳಿಗೆ 2 ಸಾವಿರ ರೂ.ನಂತೆ ವರ್ಷದಲ್ಲಿ ಮೂರು ಕಂತಿನಲ್ಲಿ ಹಣ ನೀಡಬೇಕು. ತಾಲೂಕಿನ ರೈತರಿಗೆ ಕೇಂದ್ರ ಸರ್ಕಾರದಿಂದ 1ರಿಂದ 2 ಕಂತುಗಳ ಹಣವು ಬಿಡುಗಡೆಯಾಗಿದೆ. ಕೆಲವು ರೈತರಿಗೆ ಒಂದು ಕಂತಿನ ಹಣವು ರೈತರ ಖಾತೆಗೆ ತಲುಪಿಲ್ಲ. ಜೊತೆಗೆ ರಾಜ್ಯ ಸರ್ಕಾರವು ಒಟ್ಟು ನಾಲ್ಕು ಸಾವಿರ ರೂ.ಗಳನ್ನು ಎರಡು ಕಂತುಗಳಾಗಿ ನೀಡುತ್ತದೆ. ಆದರೆ, ರಾಜ್ಯ ಸರ್ಕಾರದಿಂದ ಇದುವರಿಗೂ ಹಣ ಪಾವತಿಯಾಗಿಲ್ಲ. ಇದರಿಂದ ಸರ್ಕಾರದ ಸೌಲಭ್ಯಗಳ ಸಮಯಕ್ಕೆ ಸರಿಯಾಗಿ ರೈತರಿಗೆ ಕೈಸೇರದೇ ಇರುವುದು ದೊಡ್ಡ ವಿಪರ್ಯಾಸವಾಗಿದೆ.
ಯೋಜನೆ ಲಾಭ ಪಡೆಯಲು ರೈತರು ಆಧಾರ್ ಕಾರ್ಡ್ ನಂಬರ್, ಬ್ಯಾಂಕ್ ಖಾತೆ ನಂಬರ್ ಹಾಗೂ ಪಹಣಿ ಪತ್ರವನ್ನು ನೀಡಬೇಕು. ಮೂಲ ದಾಖಲೆಯಲ್ಲಿನ ಸಮಸ್ಯೆಗಳಿಂದ ಕೆಲವು ರೈತರಿಗೆ ಹಣ ಸಂದಾಯವಾಗಿಲ್ಲ. ತಾಲೂಕಿನ 5300 ರೈತರಿಗೆ ಹಣವು ಸಂದಾಯವಾಗಿದೆ. ಬಾಕಿ ಇರುವ ಫಲಾನುಭವಿಗಳ ಅರ್ಜಿ ಸಲ್ಲಿಸಿ, ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ.
-ವೆಂಕಟರಂಗ ಶೆಟ್ಟಿ, ಕೃಷಿ ಅಧಿಕಾರಿ
* ಫೈರೋಜ್ ಖಾನ್