Advertisement

ರಾಜನ ಬುದ್ಧಿವಂತಿಕೆ

06:00 AM Aug 09, 2018 | |

ರತ್ನಗಿರಿ ದೇಶದ ರಾಜ ಭಾಗ್ಯವಂತ. ಅವನಿಗೆ ಸಮರ್ಥ ಅನ್ನೋ ಒಬ್ಬ ವಿತ್ತ ಮಂತ್ರಿ ಇರ್ತಾನೆ. ರಾಜನಿಗೆ ಮಿಕ್ಕೆಲ್ಲಾ ಮಂತ್ರಿಗಳಿಗಿಂತ ಸಮರ್ಥನನ್ನು ಕಂಡರೆ ತುಂಬಾ ಇಷ್ಟ. ಇದೇ ಕಾರಣಕ್ಕೆ ಇತರೆ ಮಂತ್ರಿಗಳು ಸಮರ್ಥನ ವಿರುದ್ಧ ಹಗೆ ಸಾಧಿಸುತ್ತಿರುತ್ತಾರೆ. ಇದು ರಾಜನಿಗೆ ತಿಳಿಯುತ್ತದೆ. ಇದಕ್ಕೊಂದು ಪರಿಹಾರ ಕಂಡುಹಿಡಿಯಬೇಕೆಂದು ನಿಶ್ಚಯಿಸುತ್ತಾನೆ. ಮಂತ್ರಿಗಳನ್ನು ಕರೆದು ಅವರೆಲ್ಲರಿಗೂ ತಲಾ ಒಂದು ಲಕ್ಷ ವರಹಗಳನ್ನು ನೀಡಿ ನಿಮ್ಮ ನಿಮ್ಮ ಖಾತೆಯನ್ನು ಅಭಿವೃದ್ಧಿ ಪಡಿಸುವಂತೆ ಆಜ್ಞಾಪಿಸಿದನು. ಒಂದು ತಿಂಗಳ ಗಡುವನ್ನೂ ನೀಡಿದನು.

Advertisement

ಮಂತ್ರಿಗಳೆಲ್ಲರೂ ಸ್ಪರ್ಧೆಗೆ ಬಿದ್ದವರಂತೆ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಂಡರು. ರಾಜ ಕೊಟ್ಟ ಹಣವನ್ನು ತಮ್ಮ ತಮ್ಮ ಖಾತೆಗಳಲ್ಲಿ ಯಾವುದಕ್ಕೆ ಅವಶ್ಯಕತೆಯೋ ಅವುಗಳಿಗೆ ವಿನಿಯೋಗಿಸಿ ತಾವು ತಮ್ಮ ಕೆಲಸದಲ್ಲಿ ಜಾಣರೆನಿಸಿಕೊಳ್ಳಲು ತಯಾರಾದರು. ಒಂದು ತಿಂಗಳು ಕಳೆಯಿತು. ರಾಜ ಎಲ್ಲಾ ಮಂತ್ರಿಗಳನ್ನು ಕರೆಸಿಕೊಂಡು ವರದಿ ಒಪ್ಪಿಸುವಂತೆ ಕೋರಿಕೊಂಡನು. ಶಿಕ್ಷಣ ಮಂತ್ರಿ ಶಾಲೆಗಳ ದುರಸ್ತಿಗೆ, ಪುಸ್ತಕಗಳಿಗೆ ಹಣ ವಿನಿಯೋಗಿಸಿದ್ದರೆ, ರಕ್ಷಣಾ ಮಂತ್ರಿ ಗಡಿ ಭದ್ರತೆಗೆ, ಸೈನಿಕರ ಆರೋಗ್ಯಕ್ಕೆ, ಮದ್ದು ಗುಂಡಿಗೆ ವಿನಿಯೋಗಿಸಿರುತ್ತಾನೆ. 

ಕಡೆಗೆ ರಾಜನು ವಿತ್ತ ಮಂತ್ರಿಯಾದ ಸಮರ್ಥನ ಕಡೆ ತಿರುಗಿ ತಾವು ನಾನು ಕೊಟ್ಟ ಹಣವನ್ನು ಏನು ಮಾಡಿದ್ದೀರಿ ಎನ್ನುತ್ತಾನೆ. ಆಗ ಸಮರ್ಥನು “ಸ್ವಾಮಿ ತಾವು ಕೊಟ್ಟ ಹಣ ಯಾವ ಮೂಲೆಗೂ ಸಾಲಲಿಲ್ಲ. ಕಡೆಯ ಪಕ್ಷ ಇನ್ನೂ ಇಪ್ಪತ್ತು ಲಕ್ಷವಾದರೂ ಬೇಕು. ಏಕೆಂದರೆ ಶಾಲೆಗಳ ಸ್ಥಿತಿಗತಿ ಅಷ್ಟೇನೂ ಚೆನ್ನಾಗಿಲ್ಲ. ಸೈನಿಕರ ಶಿಬಿರಗಳು ತುಂಬಾ ಶಿಥಿಲವಾಗಿದೆ. ಅವುಗಳ ದುರಸ್ತಿಯಾಗಬೇಕು. ಇನ್ನು ಔಷಧಾಲಯಗಳನ್ನು ತೆಗೆದುಕೊಂಡರೆ ನಮ್ಮ ಜನಸಂಖ್ಯೆಗೆ ಲೆಕ್ಕ ಹಾಕಿದರೆ ಇನ್ನೂ ಹತ್ತಾದರೂ ಬೇಕು. ಯುವಜನತೆಗೆ ಉದ್ಯೋಗವನ್ನು ಕೊಟ್ಟರೆ ದೇಶದ ಉನ್ನತಿಗೆ ದುಡಿಯುತ್ತಾರೆ. ಆದ್ದರಿಂದ ಅಂತಹವರನ್ನು ಗುರುತಿಸಿ ನಾವು ಆದಷ್ಟು ಬೇಗನೆ ಉದ್ಯೋಗ ನೀಡಬೇಕಿದೆ’ ಎಂದು ವರದಿ ಒಪ್ಪಿಸಿದನು.

ಆಗ ಭಾಗ್ಯರಾಜನು ಬೇರೆ ಮಂತ್ರಿಗಳ ಕಡೆ ತಿರುಗಿ “ನೋಡಿದಿರಾ? ಇದೇ ನಿಮಗೂ ವಿತ್ತ ಮಂತ್ರಿಗಳಿಗೂ ಇರುವ ವ್ಯತ್ಯಾಸ. ನೀವು ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿರುವುದರಲ್ಲಿ ಎರಡು ಮಾತಿಲ್ಲ. ಆದರೆ ಹಣವನ್ನು ಬಳಸಿಕೊಳ್ಳುವ ಮುನ್ನ ಕ್ಷೇತ್ರದ ಕುಂದುಕೊರತೆಯನ್ನು ಅಧ್ಯಯನ ಮಾಡಿ, ಏನೇನು ಆಗಬೇಕಿದೆ ಎನ್ನುವುದನ್ನು ನೀವ್ಯಾರೂ ಮಾಡಿಲ್ಲ. ವಿತ್ತ ಮಂತ್ರಿಗಳು ಮಾತ್ರ ಮಾಡಿದ್ದಾರೆ’. ರಾಜನ ಮಾತು ಕೇಳಿ ಇತರೆ ಮಂತ್ರಿಗಳಿಗೂ ವಿತ್ತ ಮಂತ್ರಿಗಳ ಮೇಲೆ ಗೌರವ ಹೆಚ್ಚಾಯಿತು.

ತುಳಸಿ ವಿಜಯಕುಮಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next